ಇವರೆಲ್ಲಾ SC/ST ವಿರೋಧಿಗಳು... ಮಹಿಳೆಯರ ಪ್ರಗತಿಗೆ ವಿಪಕ್ಷಗಳೇ ದೊಡ್ಡ ಅಡ್ಡಿ ಎಂದ ಅಮಿತ್ ಷಾ | Amit Shah

Amit Shah |  ಗೃಹ ಸಚಿವ ಅಮಿತ್ ಷಾ
Amit Shah | ಗೃಹ ಸಚಿವ ಅಮಿತ್ ಷಾ
Published on
ದೆಹಲಿ: ಇಂದು (ಶುಕ್ರವಾರ ಏ.17) ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳ ಮೇಲಿನ ಸುದೀರ್ಘ ಚರ್ಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಉತ್ತರ ನೀಡುತ್ತಾ, ವಿರೋಧ ಪಕ್ಷಗಳ ನಿಲುವನ್ನು ಟೀಕಿಸಿದರು.
ಮಹಿಳಾ ಮೀಸಲಾತಿಗೆ ಯಾರೂ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿಲ್ಲವಾದರೂ, ವಿಪಕ್ಷದ ಸದಸ್ಯರು ವಿವಿಧ ಷರತ್ತುಗಳನ್ನು ಒಡ್ಡುವ ಮೂಲಕ ಪರೋಕ್ಷವಾಗಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ, ಕ್ಷೇತ್ರ ಪುನರ್ವಿಂಗಡಣೆಯನ್ನು ವಿರೋಧಿಸಿದರೆ ಎಸ್‌ಸಿ/ಎಸ್‌ಟಿ ಸ್ಥಾನಗಳ ಹೆಚ್ಚಳವನ್ನು ವಿರೋಧಿಸಿದಂತೆ ಎಂದರು. ಈ ಆಕ್ಷೇಪವು ಕೇವಲ ಅನುಷ್ಠಾನದ ವಿಧಾನದ ಮೇಲಲ್ಲ, ಬದಲಾಗಿ ಮಹಿಳೆಯರಿಗೆ ಮೀಸಲಾತಿ ನೀಡುವುದರ ವಿರುದ್ಧವಾಗಿದೆ ಎಂದು ಷಾ ಆರೋಪಿಸಿದರು.

ಜಾತಿ ಜನಗಣತಿ ಮತ್ತು ಅನುಷ್ಠಾನದ ಕಾಲಮಿತಿ

ದೇಶದ ಜನರಲ್ಲಿದ್ದ ಗೊಂದಲಗಳನ್ನು ನಿವಾರಿಸಲು ಮಹತ್ವದ ಮಾಹಿತಿ ನೀಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು 2026 ರ ಜನಗಣತಿಯ ಜೊತೆಗೆ ಜಾತಿ ಜನಗಣತಿಯನ್ನು ನಡೆಸಲು ನಿರ್ಧರಿಸಿದ್ದು, ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿಯನ್ನು ಸರಿಯಾದ ಸಮಯಕ್ಕೆ ಜಾರಿಗೆ ತರುವುದೆ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಅದರಂತೆ, 2029 ರ ಲೋಕಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿಯೊಂದಿಗೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರ ಪುನರ್ವಿಂಗಡಣೆಯ ಕುರಿತು ವಿವರಣೆ ನೀಡಿದ ಅಮಿತ್​ ಷಾ, ಕೇವಲ ಹಳೆಯ ಜನಗಣತಿಯ ಆಧಾರದ ಮೇಲೆ ಮೀಸಲಾತಿ ಜಾರಿಗೆ ತಂದರೆ ಸಂಸದೀಯ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಸಂಭವವಿರುತ್ತದೆ. ಆದರೆ ಕೇಂದ್ರ ಸರ್ಕಾರವು ಆ ದಾರಿಯನ್ನು ಆಯ್ದುಕೊಂಡಿಲ್ಲ. ಬದಲಾಗಿ, ಪ್ರತಿ ರಾಜ್ಯಕ್ಕೂ ಶೇ. 50 ರಷ್ಟು ಸ್ಥಾನಗಳನ್ನು ಹೆಚ್ಚಿಸುವ ಮೂಲಕ ಯಾವುದೇ ರಾಜ್ಯಕ್ಕೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸಂವಿಧಾನ ತಿದ್ದುಪಡಿ ಮಸೂದೆಯ ಕುರಿತು ಸದನದಲ್ಲಿ ಒಟ್ಟು 133 ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಅದರಲ್ಲಿ 56 ಮಹಿಳಾ ಸದಸ್ಯರು ಪಾಲ್ಗೊಂಡಿರುವುದು ಒಂದು ದಾಖಲೆಯಾಗಿದೆ ಎಂದು ಷಾ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ ಎಂದು ಅವರು ಪುನರುಚ್ಚರಿಸಿದರು.

ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಕಾಂಗ್ರೆಸ್ ದೊಡ್ಡ ಶತ್ರು

ಲೋಕಸಭೆಯಲ್ಲಿ ಶುಕ್ರವಾರ ನಡೆದ ಚರ್ಚೆಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಿಂದುಳಿದ ವರ್ಗಗಳ (OBC) ಹಿತಾಸಕ್ತಿಗೆ ಕಾಂಗ್ರೆಸ್ ಐತಿಹಾಸಿಕವಾಗಿ ಅತಿ ದೊಡ್ಡ ಶತ್ರುವಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಓಬಿಸಿ ನಾಯಕರನ್ನು ನಡೆಸಿಕೊಂಡ ರೀತಿಯನ್ನು ಟೀಕಿಸಿದ ಷಾ, ಚೌಧರಿ ಚರಣ್ ಸಿಂಗ್ ಮತ್ತು ಸೀತಾರಾಂ ಕೇಸರಿ ಅವರಂತಹ ಹಿಂದುಳಿದ ವರ್ಗದ ನಾಯಕರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಎಂದಿಗೂ ಅವಕಾಶ ನೀಡಲಿಲ್ಲ ಎಂದು ದೂರಿದರು.
ಕಾಂಗ್ರೆಸ್ ಆಡಳಿತದ ಸುದೀರ್ಘ ಅವಧಿಯಲ್ಲಿ ದೇಶಕ್ಕೆ ಒಬ್ಬನೇ ಒಬ್ಬ ಓಬಿಸಿ ಪ್ರಧಾನ ಮಂತ್ರಿಯನ್ನು ನೀಡಲು ಆ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಆದರೆ, ಭಾರತೀಯ ಜನತಾ ಪಕ್ಷವು ಅತ್ಯಂತ ಹಿಂದುಳಿದ ವರ್ಗದಿಂದ ಬಂದ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ ಎಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net