- ದಾಂಪತ್ಯದಲ್ಲಿನ ಸಮಸ್ಯೆ ತಕ್ಷಣವೇ ಬಗೆಹರಿಸಿಕೊಳ್ಳಿ-ದೆಹಲಿ ಹೈಕೋರ್ಟ್
- ಸಂಸಾರ ಕಲಹ ಮುಂದುವರಿದರೆ ‘ಬೆಟರ್ ಹಾಫ್’ ಕೂಡ ‘ಬಿಟರ್ ಹಾಫ್’ಆಗಬಹುದು
- ಪತಿ-ಪತ್ನಿಯ ನಡುವಿನ ನಂಬಿಕೆಯೇ ದಾಂಪತ್ಯದ ಆಧಾರವೆಂದ ಕೋರ್ಟ್
ನವದೆಹಲಿ: ಮದುವೆ ಅಂದ್ರೆ ಬರೀ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಜೀವನ ನಡೆಸೋದು ಅಷ್ಟೇ ಅಲ್ಲ. ನಂಬಿಕೆ, ವಿಶ್ವಾಸ, ಜೊತೆಯಾಗಿ ನಿಲ್ಲುವ ಮನಸ್ಸು ಇದ್ದಾಗ ಮಾತ್ರ ದಾಂಪತ್ಯ ಗಟ್ಟಿಯಾಗಿರುತ್ತೆ. ಈ ಸಂಬಂಧದಲ್ಲಿ ಸಮಸ್ಯೆಗಳು ಎದುರಾದಾಗ ಅವುಗಳನ್ನು ಸಮಯಕ್ಕೆ ಸರಿಯಾಗಿ ಬಗೆಹರಿಸದಿದ್ದರೆ ಪರಿಸ್ಥಿತಿ ಹದಗೆಡಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಇನ್ನು, ದಾಂಪತ್ಯ ವಿಚಾರದಲ್ಲಿ ಗಂಡ-ಹೆಂಡತಿಯರಿಗೆ ನ್ಯಾಯಮೂರ್ತಿ ವಿಮಲ್ ಕುಮಾರ್ ಯಾದವ್ ನೇತೃತ್ವದ ಪೀಠ ಕಿವಿಮಾತು ಹೇಳಿದ್ದು, ‘ಬೆಟರ್ ಹಾಫ್’ ಆಗಿರುವವರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೆ ‘ಬಿಟರ್ ಹಾಫ್’ ಆಗಬಹುದು ಎಂದಿದೆ. ಅಂದರೆ, ಪತಿ-ಪತ್ನಿ ನಡುವಿನ ಸಮಸ್ಯೆಗಳನ್ನು ಹಾಗೇ ಬಿಟ್ಟರೆ, ಪ್ರೀತಿಯ ಬಂಧನವೇ ಕಹಿ ಸಂಬಂಧವಾಗಿ ಬದಲಾಗಬಹುದು ಎಂಬುದು ಅವರ ಮಾತಿನಿ ಅರ್ಥ.
ಪತ್ನಿಯ ಕೊಲೆಗೆ ಯತ್ನಿಸಿದ ಪತಿ
ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ನಾಫೆ ಸಿಂಗ್ ಎಂಬ ವ್ಯಕ್ತಿಯ ಮೇಲಿನ ಪ್ರಕರಣವನ್ನು ಹೈಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳು ಸಾಕಷ್ಟು ಬಲವಾಗಿಲ್ಲ ಎಂದು ಕೋರ್ಟ್ ಹೇಳಿ ನಾಫೆ ಸಿಂಗ್ ಅವರನ್ನು ಖುಲಾಸೆಗೊಳಿಸಿದೆ.
ಏನಿದು ಪ್ರಕರಣ?
ನಾಫೆ ಸಿಂಗ್ ಮತ್ತು ಅವರ ಪತ್ನಿ 2000ರಲ್ಲಿ ಮದುವೆಯಾಗಿದ್ದರು. ಆದರೆ ಒಂದು ವರ್ಷದೊಳಗೇ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. 2001ರಲ್ಲಿ ನಡೆದ ಜಗಳದ ವೇಳೆ ನಾಫೆ ಸಿಂಗ್ ಪತ್ನಿಗೆ ಬೇಗಾನ್ ಕೀಟನಾಶಕ ಕುಡಿಸಲು ಯತ್ನಿಸಿದ್ದರು ಎಂಬ ಆರೋಪವಿತ್ತು. ಈ ಬಗ್ಗೆ ಪತಿ ಹಾಗೂ ಅವರ ತಾಯಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತಾಯಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯ, ನಾಫೆ ಸಿಂಗ್‌ಗೆ ಕೊಲೆ ಯತ್ನದ ಆರೋಪದಡಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಸಮಸ್ಯೆ ಬಗೆಹರಿಸದಿದ್ದರೆ ಸಂಬಂಧವೇ ಕಹಿ
ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಮದುವೆ ಎನ್ನುವುದು ನಂಬಿಕೆ ಮತ್ತು ವಿಶ್ವಾಸದ ಮೇಲೆ ನಿಂತಿರುವ ಸಂಬಂಧ. ಸಮಸ್ಯೆಗಳನ್ನು ಸಮಯಕ್ಕೆ ಸರಿಯಾಗಿ ಬಗೆಹರಿಸದಿದ್ದರೆ ಒಳ್ಳೆಯ ಸಂಬಂಧವೂ ಹದಗೆಡಬಹುದು. ಪತಿ-ಪತ್ನಿಯ ನಡುವಿನ ಕಲಹ ಕುಟುಂಬದ ಮೇಲೂ ಪರಿಣಾಮ ಬೀರುವುದಲ್ಲದೆ, ಕೆಲವೊಮ್ಮೆ ದೈಹಿಕ ಹಿಂಸಾಚಾರಕ್ಕೂ ತಿರುಗಬಹುದು ಎಂದು ಕೋರ್ಟ್ ಎಚ್ಚರಿಸಿದೆ.
ದಾಂಪತ್ಯದಲ್ಲಿ ಸಮಸ್ಯೆಗಳು ಎದುರಾದಾಗ ಅವುಗಳನ್ನು ಹಾಗೇ ಬಿಟ್ಟುಬಿಡದೆ, ಸಮಯಕ್ಕೆ ಸರಿಯಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಮುಖ್ಯ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.(ಏಜೆನ್ಸೀಸ್).