ಲಖನೌ: ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ವಂದೇ ಮಾತರಂ ಗೀತೆ ಹಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ನಿಯಮಗಳಿಗೆ ಪರ ವಿರೋಧ ಚರ್ಚೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್(CM Yogi Adityanath), ವಂದೇ ಮಾತರಂ ಗೀತೆಯನ್ನು ಹಾಡಲು ನಿರಾಕರಿಸುವವರು ಮತ್ತು ಅದನ್ನು ವಿರೋಧಿಸುವವರಿಗೆ ಭಾರತದಲ್ಲಿ ಉಳಿಯುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ(ಫೆ. 13) ರಾಜ್ಯಪಾಲರ ಭಾಷಣದ ಕುರಿತು ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ತುಷ್ಟೀಕರಣ ಮಾಡ್ತಿವೆ. ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಪುನರುತ್ಥಾನ ಎರಡನ್ನೂ ತಡೆಯುತ್ತವೆ ಕಿಡಿಕಾರಿದ್ದಾರೆ. ಕೆಲವು ರಾಜಕೀಯ ಗುಂಪುಗಳು ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತವೆ. ಆದರೆ ವಂದೇ ಮಾತರಂ ಅನ್ನು ಹಾಡಲು ನಿರಾಕರಿಸುತ್ತವೆ. ವಂದೇ ಮಾತರಂ ಅನ್ನು ವಿರೋಧಿಸುವವರಿಗೆ ಭಾರತದ ನೆಲದಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಮಾಘ ಮೇಳದ ಸಂದರ್ಭದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯರ ಶ್ರೀಗಳ ವಿವಾದದ ಕುರಿತು ಸಹ ಪ್ರಸ್ತಾಪಿಸಿ ಟಾಂಗ್ ನೀಡಿರುವ ಅವರು, ಎಲ್ಲರೂ 'ಶಂಕರಾಚಾರ್ಯ' ಎಂಬ ಬಿರುದಿಗೆ ಅರ್ಹರಲ್ಲ. ಪ್ರತಿಯೊಬ್ಬರೂ ತಮ್ಮನ್ನು ತಾವು ಶಂಕರಾಚಾರ್ಯರೆಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಯಾರೂ ಪೀಠದ ಆಚಾರ್ಯರ ಪಾತ್ರವನ್ನು ವಹಿಸಿಕೊಂಡು ತಮ್ಮ ಇಚ್ಛೆಯಂತೆ ಅಶಾಂತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಈ ಸಂಪ್ರದಾಯಗಳ ಘನತೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಮತ್ತು ಸಂಯಮದ ವ್ಯಕ್ತಿಯೊಬ್ಬರು ಈ ರೀತಿ ವರ್ತಿಸಲು ಸಾಧ್ಯವಿಲ್ಲ. ನಾವು ಕಾನೂನಿನ ಆಳ್ವಿಕೆಯಲ್ಲಿ ನಂಬಿಕೆ ಇಡುತ್ತೇವೆ. ಅದನ್ನು ಹೇಗೆ ಜಾರಿಗೊಳಿಸಬೇಕೆಂದು ತಿಳಿದಿದ್ದೇವೆ. ಕಾನೂನು ಎಲ್ಲರಿಗೂ ಸಮಾನ. ನನಗೆ ಪ್ರತ್ಯೇಕ ಕಾನೂನು ಇಲ್ಲ. ಸಿಎಂ ಹುದ್ದೆಯೂ ಸಹ ಕಾನೂನಿಗಿಂತ ಮೇಲಲ್ಲ ಎಂದಿದ್ದಾರೆ.
ಇನ್ನೂ ಅವಿಮುಕ್ತೇಶ್ವರಾನಂದ ಶ್ರೀಗಳನ್ನು ಸಮರ್ಥಿಸಿಕೊಂಡಿದ್ದಕ್ಕೆ ಎಸ್ಪಿಯನ್ನು ಗುರಿಯಾಗಿಸಿ ಟೀಕಿಸಿರುವ ಅವರು, ಅವರು ನಿಜವಾಗಿಯೂ ಶಂಕರಾಚಾರ್ಯರಾಗಿದ್ದರೆ, ಹಿಂದಿನ ಎಸ್‌ಪಿ ಆಳ್ವಿಕೆಯಲ್ಲಿ ಅವರ ಮೇಲೆ ಲಾಠಿ ಚಾರ್ಜ್ ಏಕೆ ಮಾಡಲಾಯಿತು? ಅವರ ವಿರುದ್ಧ ಎಫ್‌ಐಆರ್ ಏಕೆ ದಾಖಲಿಸಲಾಯಿತು? ನೀವು ನೈತಿಕತೆಯ ಬಗ್ಗೆ ಮಾತನಾಡುತ್ತಿದ್ದೀರಿ. 2015ರಲ್ಲಿ ಅವರ ಮೇಲೆ ಲಾಠಿ ಚಾರ್ಜ್ ನಡೆದಿತ್ತು ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).