ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ಬಂಧನ - ಮುಂಬೈ ಡಿಸಿಪಿ ರಾಜ್ ತಿಲಕ್ ರೌಶನ್ ಅವರ ಪತ್ರಿಕಾಗೋಷ್ಠಿ 
ದೇಶ

ಶೂಟ್​ ಮಾಡಿದವರು ಅಪ್ರಾಪ್ತರಲ್ಲ! ಟೈಗರ್​ ಶ್ರಾಫ್​ ಕಾರಿನ ಮೇಲೆ ಫೈರಿಂಗ್​; ಆರೋಪಿಗಳನ್ನು ಬಂಧಿಸಿದ ರೋಚಕ ಕತೆ ಬಿಚ್ಚಿಟ್ಟ ಡಿಸಿಪಿ! Tiger Shroff Attack

ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡು ಹಾರಿಸಿದವರು ಅಪ್ರಾಪ್ತರಲ್ಲ! ಮುಂಬೈನಿಂದ ಎಸ್ಕೇಪ್ ಆಗಿದ್ದ ಶೂಟರ್‌ಗಳನ್ನು ಕೋಟಾದಲ್ಲಿ ಹೆಡೆಮುರಿ ಕಟ್ಟಿದ ರೋಚಕ ಕಹಾನಿ ಬಿಚ್ಚಿಟ್ಟ ಡಿಸಿಪಿ. ಪೂರ್ಣ ಮಾಹಿತಿ ಇಲ್ಲಿದೆ.

ಮುಂಬೈ: ಬಾಲಿವುಡ್‌ನ ಆಕ್ಷನ್ ಹೀರೋ ಟೈಗರ್ ಶ್ರಾಫ್ ಕಾರಿನ ಮೇಲೆ ಜುಹುವಿನಲ್ಲಿ ನಡೆದ ಭೀಕರ ಗುಂಡಿನ ದಾಳಿ ಪ್ರಕರಣದಲ್ಲಿ ಮುಂಬೈ ಪೊಲೀಸರು ಮಹತ್ವದ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳಲ್ಲಿ ಯಾರೊಬ್ಬರೂ ಅಪ್ರಾಪ್ತರಲ್ಲ ಎಂದು ಮುಂಬೈ ಡಿಸಿಪಿ ರಾಜ್ ತಿಲಕ್ ರೋಷನ್ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲದೆ, ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಹಿಡಿಯಲು ಪೊಲೀಸರು ನಡೆಸಿದ ಕಾರ್ಯಾಚರಣೆಯ ರೋಚಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಡಿಸಿಪಿ ಬಿಚ್ಚಿಟ್ಟ ಅಸಲಿ ಸತ್ಯವೇನು?

ಘಟನೆ ನಡೆದ ಬೆನ್ನಲ್ಲೇ ಆರೋಪಿಗಳಲ್ಲಿ ಇಬ್ಬರು ಅಪ್ರಾಪ್ತರು ಎಂಬ ವದಂತಿ ಕೇಳಿಬಂದಿದ್ದವು. ಆದರೆ ಸೋಮವಾರ ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ರಾಜ್ ತಿಲಕ್ ರೋಷನ್, ಸದ್ಯ ನಮ್ಮ ಕಸ್ಟಡಿಯಲ್ಲಿ ಮೂವರು ಆರೋಪಿಗಳಿದ್ದಾರೆ. ಇವರಲ್ಲಿ ಇಬ್ಬರು ಹರಿಯಾಣ ಮೂಲದವರಾದರೆ, ಮತ್ತೊಬ್ಬ ಬಿಹಾರದವನು. ಈ ಪ್ರಕರಣದಲ್ಲಿ ಯಾವುದೇ ಅಪ್ರಾಪ್ತ ಆರೋಪಿಗಳಿಲ್ಲ. ಒಬ್ಬನಿಗೆ 18 ವರ್ಷ ವಯಸ್ಸಾಗಿದ್ದರೆ, ಉಳಿದ ಇಬ್ಬರಿಗೆ 22 ವರ್ಷ ವಯಸ್ಸು ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ ಸಂಜೆ ಸುಮಾರು 7 ಗಂಟೆಗೆ ಜುಹುವಿನ ಫುಟ್‌ಬಾಲ್ ಕ್ಲಬ್ ಎದುರು ಬೈಕ್‌ನಲ್ಲಿ ಬಂದ ಮೂವರ ಪೈಕಿ ಇಬ್ಬರು ಶೂಟರ್‌ಗಳು ಟೈಗರ್ ಶ್ರಾಫ್ ಕಾರನ್ನು ಗುರಿಯಾಗಿಸಿಕೊಂಡು ಬರೋಬ್ಬರಿ 5 ರಿಂದ 7 ಸುತ್ತು ಗುಂಡು ಹಾರಿಸಿದ್ದರು. ಅದೃಷ್ಟವಶಾತ್ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಅವರ ಚಾಲಕ ಮತ್ತು ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದರು.

ಸೂರತ್ ಮಾರ್ಗವಾಗಿ ಕೋಟಾದಲ್ಲಿ ಅರೆಸ್ಟ್!

ಗುಂಡಿನ ದಾಳಿ ನಡೆದ ಕೂಡಲೇ ಮುಂಬೈ ಕ್ರೈಮ್ ಬ್ರಾಂಚ್ ಅಲರ್ಟ್ ಆಗಿ ಬರೋಬ್ಬರಿ 20 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಟವರ್ ಲೊಕೇಶನ್ ಜಾಡು ಹಿಡಿದ ಪೊಲೀಸರಿಗೆ, ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಬೈಕನ್ನು ಅಂಧೇರಿ ಪ್ರದೇಶದಲ್ಲೇ ಬಿಟ್ಟು ಪರಾರಿಯಾಗಿದ್ದ ಬಗ್ಗೆ ತಿಳಿಯಿತು.

ಬಳಿಕ ಅಂಧೇರಿ ವೆಸ್ಟ್ ರೈಲ್ವೆ ನಿಲ್ದಾಣದಿಂದ ಉತ್ತರ ಮುಂಬೈ ಮಾರ್ಗವಾಗಿ ಗುಜರಾತ್‌ನ ಸೂರತ್ ತಲುಪಿದ್ದ ಆರೋಪಿಗಳು, ಅಲ್ಲಿಂದ ಪುಣೆ-ಜೈಪುರ ಎಕ್ಸ್‌ಪ್ರೆಸ್ ರೈಲು ಹತ್ತಿ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದರು. ಮುಂಬೈ ಪೊಲೀಸರು ತಕ್ಷಣವೇ ಆರೋಪಿಗಳು ಕುಳಿತಿದ್ದ ರೈಲಿನ ಬೋಗಿಯನ್ನು ಪತ್ತೆಹಚ್ಚಿ ರಾಜಸ್ಥಾನದ ಕೋಟಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ರೈಲು ಕೋಟಾ ನಿಲ್ದಾಣಕ್ಕೆ ಬರುತ್ತಿದ್ದಂತೆ ಸುತ್ತುವರಿದ ಪೊಲೀಸರು ಮೂವರನ್ನೂ ಹೆಡೆಮುರಿ ಕಟ್ಟಿದ್ದಾರೆ. ದೆಹಲಿ, ಗುಜರಾತ್ ಹಾಗೂ ರಾಜಸ್ಥಾನ ಪೊಲೀಸರ ಜಂಟಿ ಸಹಕಾರದೊಂದಿಗೆ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.

ದಾಳಿಯ ಹಿಂದಿನ ರಹಸ್ಯವೇನು?

ಆರೋಪಿಗಳನ್ನು ಸದ್ಯ ರಾಜಸ್ಥಾನದಿಂದ ಮುಂಬೈಗೆ ಕರೆತರಲಾಗುತ್ತಿದ್ದು, ಬಂಧಿತರಿಂದ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇವರ ವಿರುದ್ಧ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ನಡೆದ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿದೆ ಎನ್ನಲಾದ ಪೋಸ್ಟ್ ವೈರಲ್ ಆಗಿತ್ತು. ಆದರೆ ಇದರ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಟೈಗರ್ ಶ್ರಾಫ್ ಅವರಿಗೆ ಈ ಹಿಂದೆ ಯಾವುದೇ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ದಾಖಲೆಗಳಿಲ್ಲ. ದಾಳಿಯ ಹಿಂದಿನ ನೈಜ ಉದ್ದೇಶ ಮತ್ತು ಇದರ ಹಿಂದೆ ಅಡಗಿರುವ ಷಡ್ಯಂತ್ರದ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ ಎಂದು ಡಿಸಿಪಿ ತಿಳಿಸಿದ್ದಾರೆ, (ಏಜೆನ್ಸೀಸ್​).