Renuka Chowdhury | ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ
ದೆಹಲಿ: ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ನಾಯಿಯೊಂದಿಗೆ ಸಂಸತ್ತಿಗೆ ಆಗಮಿಸಿದ್ದು, ಈ ವಿಷಯವಾಗಿ ಸಂಸದರ ಪ್ರತಿಕ್ರಿಯೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ.
ನಾಯಿಯನ್ನು ಸಂಸತ್ತಿನ ಆವರಣಕ್ಕೆ ತೆಗೆದುಕೊಂಡು ಬಂದಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಂಸದೆ ಚೌಧರಿ. ಕಚ್ಚುವವರು ಸಂಸತ್ತಿನೊಳಗೆ ಇರುತ್ತಾರೆ ಎನ್ನುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಭದ್ರತೆಯ ಕುರಿತಾದ ಪ್ರಶ್ನೆಗೆ ನಾಯಿಗೂ ಪಾಸ್ ನೀಡಿ ಎಂದಿದ್ದು, ಈ ಸಂಪೂರ್ಣ ಬೆಳವಣಿಗೆಗೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸತ್ತಿಗೆ ಮಾಡಿದ ಅವಮಾನ ಎಂದು ಕರೆದಿದ್ದಾರೆ.
ಏನಿದು ಘಟನೆ....
ಇಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಸಂಸತ್ತಿಗೆ ಎಲ್ಲ ಪಕ್ಷಗಳ ಸಂಸದರ, ಕೇಂದ್ರ ಸಚಿವರ ಪ್ರವೇಶ ಸಾಮಾನ್ಯವಾಗಿತ್ತು. ಈ ನಡುವೆ ಆಗಮಿಸಿದ ಕಾಂಗ್ರೆಸ್ ಸದಸ್ಯೆ ಚೌಧರಿ ಜೊತೆ ಒಂದು ನಾಯಿಮರಿಯೂ ಇತ್ತು. ಇದು ಸದ್ಯ ಸಂಸದೀಯ ಶಿಷ್ಟಾಚಾರದ ಕುರಿತು ಚರ್ಚೆಗೆ ಆಹಾರವಾಗಿದೆ. ಈ ಘಟನೆಯ ಕುರಿತಾದ ಟೀಕೆಗಳಿಗೆ ಸಮರ್ಥನೀಯ ರೀತಿಯಲ್ಲೇ ಉತ್ತರಿಸಿರುವ ಚೌಧರಿ, ಸಂಸತ್ ಭವನಕ್ಕೆ ಹೋಗುವಾಗ ನಾಯಿಮರಿಯನ್ನು ನೋಡಿದೆ, ಅದು ವಾಹನಗಳ ಚಕ್ರಕ್ಕೆ ಸಿಲುಕಿ ಸಾಯಬಹುದೆಂಬ ಆತಂಕದಿಂದ ಅದನ್ನು ಎತ್ತಿಕೊಂಡು ಕಾರಿನಲ್ಲಿ ತಂದು, ಈಗ ಮನೆಗೆ ಕಳುಹಿಸಿದೆ, ಯಾವುದಾದರು ಕಾನೂನು, ಸದಸ್ಯರು ನಾಯಿಯೊಂದಿಗೆ ಬರುವುದನ್ನು ನಿಷೇಧಿಸುತ್ತದೆಯೇ ಎಂದು ಪ್ರಶ್ನಿಸಿದರು.
ತಮ್ಮ ಟೀಕೆಯ ಮಧ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡ ಸಂಸದೆ ಚೌಧರಿ, ಕಚ್ಚುವವರು ಸಂಸತ್ತಿನೊಳಗೆ ಕುಳಿತು ಸರ್ಕಾರವನ್ನು ನಡೆಸುತ್ತಿದ್ದಾರೆ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲವೇ? ನಾನು ಒಂದು ಪ್ರಾಣಿಯನ್ನು ನೋಡಿಕೊಂಡರೆ, ಅದು ಚರ್ಚೆಯ ವಿಷಯವಾಗುತ್ತದೆ, ಈ ಹಿಂದೆಯೂ ಬೀದಿಗಳಿಂದ ಅನೇಕ ನಾಯಿಗಳನ್ನು ದತ್ತು ಪಡೆದಿರುವುದಾಗಿ ತಿಳಿಸಿದರು.
ಬಿಜೆಪಿ ತಿರುಗೇಟು..
ಸಂಸದೆ ರೇಣುಕಾ ಚೌಧರಿ ಹೇಳಿಕೆಗಳಿಗೆ ಕೆಂಡಾಮಂಡಲರಾಗಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಇದನ್ನು ನಾಟಕ ಎಂದು ಕರೆದಿದ್ದು, ಕಾಂಗ್ರೆಸ್ ಸಂಸದೆ ಎಲ್ಲಾ ಸಹೋದ್ಯೋಗಿಗಳು ಮತ್ತು ಸಂಸದೀಯ ಸಿಬ್ಬಂದಿಯನ್ನು ನಾಯಿಗೆ ಹೋಲಿಸಿದ್ದಾರೆ ಎಂದು ಆರೋಪಿಸಿದರು(ಏಜೆನ್ಸೀಸ್).