ಭಾರತದ ನಾಗರಿಕ ಪರಮಾಣು ಒಪ್ಪಂದದ ಶ್ರೇಯಸ್ಸು ಪ್ರಧಾನಿ ಮೋದಿಗೆ ಸಲ್ಲಲ್ಲ ಎಂದ ಜೈರಾಮ್ ರಮೇಶ್
- ಭಾರತ-ಆಸ್ಟ್ರೇಲಿಯಾ ಯುರೇನಿಯಂ ಒಪ್ಪಂದ ಮೋದಿ ಸಾಧನೆಯಲ್ಲ
- 2011ರಲ್ಲೇ ಕಾಂಗ್ರೆಸ್ ಅವಧಿಯಲ್ಲಿ ನಡೆದಿತ್ತು ಎಂದು ಜೈರಾಮ್ ರಮೇಶ್ ತಿರುಗೇಟು
- ಭಾರತದ ನಾಗರಿಕ ಪರಮಾಣು ಒಪ್ಪಂದದ ಶ್ರೇಯಸ್ಸು ಪ್ರಧಾನಿ ಮೋದಿಗೆ ಸಲ್ಲಲ್ಲ ಎಂದ ಜೈರಾಮ್ ರಮೇಶ್
ನವದೆಹಲಿ: ಭಾರತ ಪರಮಾಣು ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು, ಅಸ್ಟ್ರೇಲಿಯಾವು ಯುರೇನಿಯಂ ಅನ್ನು ರಫ್ತು ಮಾಡಲು ಒಪ್ಪಿಕೊಂಡಿದ್ದು, ಇದರ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಲಾಗುತ್ತಿತ್ತು.
ಆದರೆ ಶುಕ್ರವಾರ (ಜು.10) ಈ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh on India Australia Deal), ಇದು ಮೋದಿ ಅವರ ಸಾಧನೆ ಏನಲ್ಲ, 2011 ರಲ್ಲಿ ನಮ್ಮ ಸರ್ಕಾರ ಇದ್ದಾಗಲೇ ಆಸ್ಟ್ರೇಲಿಯಾ ನಮಗೆ ಯುರೇನಿಯಂ ನೀಡಿತ್ತು ಎಂದು ಹೇಳಿದ್ದಾರೆ.
ಇದು ಮೋದಿಯ ಸಾಧನೆ ಅಲ್ಲ!
ಗುರುವಾರ (ಜು.9) ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ (Anthony Albanese) ನಾಗರಿಕ ಪರಮಾಣು ಇಂಧನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಭಾರತಕ್ಕೆ, ಆಸ್ಟ್ರೇಲಿಯಾ ಯುರೇನಿಯಂ ಅನ್ನು ನೀಡುವಂತೆ ಮಾಡಿದ್ದು ಪ್ರಧಾನಿ ಮೋದಿ ಅವರ ಸಾಧನೆ ಎಂದು ಬಿಜೆಪಿ ಐಟಿ ವಿಂಗ್ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿತ್ತು.
ಇದನ್ನು ವಿರೋಧಿಸಿ ಮಾತನಾಡಿರುವ ಜೈರಾಮ್ ರಮೇಶ್, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪರಮಾಣು ಒಪ್ಪಂದವು 2008 ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾತುಕತೆ ಆರಂಭವಾಗಿದ್ದು, 2011 ರಲ್ಲಿ ಆಸ್ಟ್ರೇಲಿಯಾ ಯುರೇನಿಯಂ ಅನ್ನು ರಫ್ತು ಮಾಡಿತ್ತು ಎಂದು ಹೇಳಿದ್ದಾರೆ.
ಇದನ್ನು ಮೋದಿ ಅವರ ಸಾಧನೆ ಎಂದು ಕರೆಯಲು ಸಾಧ್ಯವಿಲ್ಲ. ಈ ಒಪ್ಪಂದವು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿಯೇ ನಡೆದಿದ್ದು, ಪ್ರಧಾನಿಗಳು ಎಲ್ಲಾ ಯೋಜನೆಗಳ ಕೀರ್ತಿ ತಮಗೆ ಸಲ್ಲಬೇಕೆಂದು ವರ್ತಿಸುವುದು ಇಲ್ಲಿ ಸ್ಪಷ್ಟವಾಗಿದೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ, (ಏಜನ್ಸೀಸ್).