ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ
ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ಬಗ್ಗೆ ಸಂಸತ್ನಲ್ಲಿ ತುರ್ತು ಮತ್ತು ರಚನಾತ್ಮಕ ಚರ್ಚೆ ನಡೆಸುವಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಶುಕ್ರವಾರ(ಡಿ. 12) ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ. ಇದು ಯಾವುದೋ ಪಕ್ಷದ ಸೈದ್ದಾಂತಿಕ ವಿಷಯವಲ್ಲ, ಸಾರ್ವಜನಿಕ ಆರೋಗ್ಯದ ತುರ್ತುಸ್ಥಿತಿ ಎಂದಿದ್ದಾರೆ. ಚರ್ಚೆ ನಡಸಲು ಸರ್ಕಾರ ಒಪ್ಪಿಗೆ ನೀಡಿದೆ.
ಶೂನ್ಯವೇಳೆ ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದ ದೊಡ್ಡ ನಗರಗಳು ವಿಷಕಾರಿ ಗಾಳಿಯ ಹೊದಿಕೆಯಡಿಯಲ್ಲಿ ವಾಸಿಸುತ್ತಿವೆ. ಲಕ್ಷಾಂತರ ಮಕ್ಕಳು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಭವಿಷ್ಯ ನಾಶವಾಗುತ್ತಿದೆ. ಜನರಿಗೆ ಕ್ಯಾನ್ಸರ್ ಬರುತ್ತಿದೆ. ವೃದ್ಧರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ಇದು ಆಸಕ್ತಿದಾಯಕ ವಿಷಯವಾಗಿದೆ. ಈ ವಿಷಯದ ಬಗ್ಗೆ ಸರ್ಕಾರ ಮತ್ತು ನಮ್ಮ ನಡುವೆ ಯಾವುದೇ ಬೇಧವಿಲ್ಲ ಸರ್ಕಾರ ಕೈಗೊಳ್ಳುವ ನಿರ್ಣಯಕ್ಕೆ ಬದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೆ, ಸದನವು ಸಂಪೂರ್ಣ ಸರ್ವಾನುಮತವನ್ನು ಕಂಡುಕೊಳ್ಳಬಹುದಾದ ಅಪರೂಪದ ವಿಷಯಗಳಲ್ಲಿ ಇದು ಒಂದು. ಇದು ಸೈದ್ಧಾಂತಿಕ ವಿಷಯವಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳು ಪ್ರತಿಕ್ರಿಯಿಸುವ ಜವಾಬ್ದಾರಿಯನ್ನು ಹೊಂದಿವೆ. ಪೂರ್ಣ ಚರ್ಚೆಗೆ ಅವಕಾಶ ನೀಡಬೇಕು ಮತ್ತು ನಿರ್ಧಿಷ್ಟ ಕ್ರಮಗಳಿಗೆ ಬದ್ಧರಾಗಬೇಕು ಎಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ ಮಾತಿಗೆ ಕೇಂದ್ರ ಸರ್ಕಾರ ಒಪ್ಪಿಗೆ
ಸದನದಲ್ಲಿ ರಾಹುಲ್ ಗಾಂಧಿಯವರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿಯವರು ಎತ್ತಿರುವ ವಿಷಯದ ಬಗ್ಗೆ ಸರ್ಕಾರ ಚರ್ಚೆಗೆ ಸಿದ್ಧವಾಗಿದೆ. ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯು ಅದಕ್ಕಾಗಿ ಸಮಯವನ್ನು ನಿಗದಿಪಡಿಸಬಹುದು. ಮೊದಲ ದಿನದಿಂದಲೇ ಸರ್ಕಾರವು ಎಲ್ಲಾ ಪ್ರಮುಖ ವಿಷಯಗಳನ್ನು ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಸಿದ್ಧವಾಗಿದೆ. ವಿರೋಧ ಪಕ್ಷದ ಸಲಹೆಗಳನ್ನು ಪಡೆದುಕೊಂಡಿದೆ. ಈ ಚರ್ಚೆಯನ್ನು ಕೈಗೆತ್ತಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).