ಮುಂಬೈ: ಮಹಾರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲು ಮುಂದಾಗಿರುವ ಸರ್ಕಾರದ ನಡೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ (ನ.10) ನಡೆದ ಸುದ್ದಿಗೋಷ್ಠಿಯಲ್ಲಿ ಗುಡುಗಿದ ಓವೈಸಿ, "ಸರ್ಕಾರ ತರಲು ಹೊರಟಿರುವುದು ಏಕರೂಪ ನಾಗರಿಕ ಸಂಹಿತೆಯಲ್ಲ, ಅದು ಅಪ್ಪಟ 'ಹಿಂದೂ ನಾಗರಿಕ ಸಂಹಿತೆ'. ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಅವರ ಧಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ," ಎಂದು ಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಬಾಬರಿ ಮಸೀದಿ ವಿಚಾರ ಮುಂದಿಟ್ಟುಕೊಂಡು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧವು ಕಿಡಿಕಾರಿದ್ದಾರೆ.
ಯುಸಿಸಿ ಹೆಸರಲ್ಲಿ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸಲಾಗುತ್ತಿದೆ ಎಂದು ಕಿಡಿಕಾರಿದ ಓವೈಸಿ, ಮದುವೆ ಮತ್ತು ವಿಚ್ಛೇದನದ ನಿಯಮಗಳ ಬಗ್ಗೆ ವಿವರಣೆ ನೀಡಿದರು. "ಇಸ್ಲಾಂ ಧರ್ಮದಲ್ಲಿ ಮದುವೆ ಎಂಬುದು ಒಂದು ಸಾಮಾಜಿಕ ಒಪ್ಪಂದ (ಕಾಂಟ್ರಾಕ್ಟ್). ಹೊಂದಾಣಿಕೆ ಆಗದಿದ್ದರೆ ಮಹಿಳೆಗೆ ಸುಲಭವಾಗಿ ಆ ಸಂಬಂಧದಿಂದ ಹೊರಬರುವ (ವಿಚ್ಛೇದನ ಪಡೆಯುವ) ಹಕ್ಕಿದೆ.
ಆದರೆ, ಸರ್ಕಾರ ತರಲು ಹೊರಟಿರುವ ಕಾನೂನಿನಲ್ಲಿ ಮದುವೆಯಾದ ಮೇಲೆ ಕನಿಷ್ಠ ಒಂದು ವರ್ಷ ಒಟ್ಟಿಗೇ ಇರಬೇಕು ಎಂಬ ನಿಯಮ ಹೇರಲಾಗುತ್ತಿದೆ. ಇದು ಮುಸ್ಲಿಂ ಪರ್ಸನಲ್ ಲಾ ಮೇಲೆ ಹಿಂದೂ ವಿವಾಹ ಕಾಯಿದೆಯನ್ನು ಹೇರುವ ಹುನ್ನಾರವಲ್ಲದೆ ಬೇರೇನೂ ಅಲ್ಲ," ಎಂದಿದ್ದಾರೆ.
ಅಲ್ಲದೆ, "ಸಂವಿಧಾನದ ಚೌಕಟ್ಟನ್ನು ಮೀರಿ ನಡೆಯುತ್ತಿರುವ ದೇವೇಂದ್ರ ಫಡ್ನವೀಸ್ ಅವರಿಗೆ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿಂತ ಹೆಚ್ಚು ಬುದ್ಧಿವಂತಿಕೆ ಇದೆಯಾ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕೇಂದ್ರದ ಮೋದಿ ಸರ್ಕಾರದ ವಿರುದ್ಧವೂ ಕೆಂಡಕಾರಿದ ಓವೈಸಿ, "ಮೊದಲು ವಕ್ಫ್ ತಿದ್ದುಪಡಿ ತಂದು ನಮ್ಮ ಮಸೀದಿಗಳು ಮತ್ತು ಆಸ್ತಿಪಾಸ್ತಿಗಳನ್ನು ಕಸಿದುಕೊಳ್ಳಲು ಸಂಚು ರೂಪಿಸಿದರು. ಈಗ ಯುಸಿಸಿ ಹೆಸರಿನಲ್ಲಿ ಮುಸ್ಲಿಮರ ಪರಂಪರೆಗೆ ಕೈಹಾಕುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಪೋಷಕರು ತಮ್ಮ ಸಂಪೂರ್ಣ ಆಸ್ತಿಯನ್ನು ಒಬ್ಬನೇ ಮಗುವಿಗೆ ಬರೆದುಕೊಡಬಹುದು. ಆದರೆ ಇಸ್ಲಾಂನಲ್ಲಿ ಪ್ರತಿಯೊಬ್ಬ ವಾರಸುದಾರರಿಗೂ ನಿರ್ದಿಷ್ಟ ಹಕ್ಕಿರುತ್ತದೆ. ವೈವಿಧ್ಯತೆಯೇ ಭಾರತದ ಅವಿಭಾಜ್ಯ ಅಂಗವಾಗಿರುವಾಗ, ಎಲ್ಲರ ಮೇಲೂ ಒಂದೇ ನಿಯಮ ಹೇರಲು ಹೊರಟಿರುವುದು ಅನ್ಯಾಯ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಬಿಜೆಪಿ ಮಾತ್ರವಲ್ಲದೆ ವಿಪಕ್ಷಗಳ ‘ಡಬಲ್ ಸ್ಟ್ಯಾಂಡರ್ಡ್’ ರಾಜಕೀಯವನ್ನೂ ಓವೈಸಿ ಬಿಚ್ಚಿಟ್ಟರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಮೌನವನ್ನು ಪ್ರಶ್ನಿಸಿದ ಓವೈಸಿ, "ಬಾಬರಿ ಮಸೀದಿ ಧ್ವಂಸವಾದಾಗ ಯಾರ ತಂದೆಯಂದಿರು ರಕ್ತ ಸುರಿಸಿ ಜೈಲು ಪಾಲಾದರೋ, ಅಂತಹ ಸಮಾಜವಾದಿ ಪಕ್ಷದ ಮುಸ್ಲಿಂ ಶಾಸಕರಿಗೆ ಅಖಿಲೇಶ್ ಏನು ಉತ್ತರ ಕೊಡುತ್ತಾರೆ? ಗೋವಂಡಿಯ ಎಸ್ಪಿ ಶಾಸಕ ಅಬು ಅಜ್ಮಿ ಇದಕ್ಕೆ ಏನು ಹೇಳ್ತಾರೆ?" ಎಂದು ನೇರವಾಗಿ ಸವಾಲು ಹಾಕಿದ್ದಾರೆ. ಮುಸ್ಲಿಮರ ಮತ ಪಡೆದು ಅಧಿಕಾರ ಅನುಭವಿಸುವ 'ಜಾತ್ಯತೀತ' ಪಕ್ಷಗಳು ಇಂತಹ ಗಂಭೀರ ವಿಷಯಗಳಲ್ಲಿ ತುಟಿಬಿಚ್ಚುತ್ತಿಲ್ಲ ಎಂದು ಜರಿದಿದ್ದಾರೆ, (ಏಜೆನ್ಸೀಸ್).