ತೀರ್ಪು ಇಸ್ಲಾಂ ಮೇಲಿನ ನೇರ ದಾಳಿ ಎಂದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
- ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧಾರಣೆಗೆ ಅಲಹಾಬಾದ್ ಹೈಕೋರ್ಟ್ ನಕಾರ.
- ತೀರ್ಪು ಇಸ್ಲಾಂ ಮೇಲಿನ ನೇರ ದಾಳಿ ಎಂದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
- ನಮ್ಮ ಧರ್ಮದಲ್ಲಿ ಯಾವುದು ಅಗತ್ಯ ಆಚರಣೆ ಎಂದು ನಾವು ನಿರ್ಧರಿಸುತ್ತೇವೆ ಎಂದ ಸಂಸದ
ಹೈದರಾಬಾದ್: ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿ, ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಈಗ, ನ್ಯಾಯಾಲಯದ ಈ ತೀರ್ಪಿಗೆ ಅಸಮಾಧಾನ ವ್ಯಕ್ತ ಪಡಿಸಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷದ ಮುಖ್ಯಸ್ಥ, ಸಂಸದ ಅಸಾವುದ್ದೀನ್ ಓವೈಸಿ
( Asaduddin Owaisi
), ಇದು ಇಸ್ಲಾಂ ಮೇಲಿನ ದಾಳಿ ಎಂದು ಹೇಳಿಕೆ ನೀಡಿದ್ದಾರೆ.
ನಮ್ಮ ಧರ್ಮ ನಮ್ಮ ಆಯ್ಕೆ!
ಅಲಹಾಬಾದ್ ಹೈಕೋರ್ಟ್, ಅರ್ಜಿ ವಜಾ ಮಾಡಿದಕ್ಕೆ ಪ್ರತಿಕ್ರಿಯಿಸಿರುವ ಓವೈಸಿ, ಇದು ನಮ್ಮ ಧರ್ಮಕ್ಕೆ ಸಂಬಂಧಿಸಿದ ವಿಚಾರ, ಯಾವುದು ನಮ್ಮ ಧರ್ಮಕ್ಕೆ ಅತ್ಯಗತ್ಯ ಎನ್ನುವುದನ್ನು ನಾವು ನಿರ್ಧರಿಸುತ್ತೇನೆ, ಅದನ್ನು ನಿರ್ಧರಿಸಲು ನ್ಯಾಯಾಧೀಶರು ಯಾರು? ಇದು ಇಸ್ಲಾಂ ಮೇಲಿನ ನೇರ ದಾಳಿ ಎಂದು ಹೈದರಾಬಾದ್ ಸಂಸದ
ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಇಸ್ಲಾಂಗೆ ಅಗತ್ಯವಿಲ್ಲ!
ಆಗಸ್ಟ್ 21 ರಂದು ಪ್ರಯಾಗ್ರಾಜ್ನ 11 ನೇ ತರಗತಿ ವಿದ್ಯಾರ್ಥಿಯೊಬ್ಬಳು ತನಗೆ ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ಗೆ ಅವಕಾಶ ನೀಡಬೇಕೆಂದು ಕೋರಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು.
ಈ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಜೆ.ಜೆ. ಮುನೀರ್ ಹಾಗೂ ನ್ಯಾಯಮೂರ್ತಿ ಇಂದ್ರಜೀತ್ ಶುಕ್ಲಾ ಅವರ ನ್ಯಾಯಪೀಠ, ಹಿಜಾಬ್ ಇದು ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ, ಹೀಗಾಗಿ ಇದನ್ನು ಧಾರ್ಮಿಕ ಆಚರಣೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಅರ್ಜಿಯನ್ನು ವಜಾ ಮಾಡಿ ಆದೇಶಿಸಿತ್ತು. ಅರ್ಜಿದಾಳ ವಿದ್ಯಾರ್ಥಿನಿ 6 ನೇ ತರಗತಿಗೆ ಪ್ರವೇಶ ಪಡೆದ ನಂತರ ಈ ಹಿಜಾಬ್ಅನ್ನು ಧರಿಸುತ್ತಿದ್ದಾಳೆ. ಹೀಗಾಗಿ ಇದು ಹುಟ್ಟಿನಿಂದ ಪಾಲಿಸಿಕೊಂಡು ಬಂದಿರುವ ಆಚರಣೆಯಲ್ಲ, ಅಲ್ಲದೇ ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ ಎನ್ನುವುದಕ್ಕೆ ಯಾವುದೇ ಸ್ಪಷ್ಟ ದಾಖಲೆಗಳಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದರು.
ಹಾಗೆಯೇ, ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ನಿಷೇಧ ಹೇರಿತ್ತು ಮತ್ತು ಇದರ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಹಿನ್ನಲೆ, ವ್ಯತಿರಿಕ್ತ ತೀರ್ಪನ್ನು ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿತ್ತು, (ಏಜನ್ಸೀಸ್).