ಶಾಲಾ ಸಮವಸ್ತ್ರದ ಜೊತೆ 'ಹಿಜಾಬ್​'ಗೆ ಅವಕಾಶವಿಲ್ಲ: ಇದು 'ಇಸ್ಲಾಂ'ನ ಭಾಗವಲ್ಲ; ಮುಸ್ಲಿಂ ವಿದ್ಯಾರ್ಥಿ ಅರ್ಜಿ ವಜಾಗೊಳಿಸಿದ ಅಲಹಾಬಾದ್​ ಹೈಕೋರ್ಟ್​! Hijab Verdict Allahabad High Court

ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಲಹಾಬಾದ್​ ಹೈಕೋರ್ಟ್​
ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಲಹಾಬಾದ್​ ಹೈಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ಶಾಲಾ ಸಮವಸ್ತ್ರದ ಜೊತೆ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ
  • ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ
  • ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಅಲಹಾಬಾದ್​ ಹೈಕೋರ್ಟ್​
ಉತ್ತರ ಪ್ರದೇಶ: ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್​ ಧರಿಸಿ ತರಗತಿಗೆ ಪ್ರವೇಶ ನೀಡುವಂತೆ ಮುಸ್ಲಿಂ ವಿದ್ಯಾರ್ಥಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್​ ಹೈಕೋರ್ಟ್​ (Hijab Verdict Allahabad High Court) ವಜಾಗೊಳಿಸಿದೆ.
ವಿದ್ಯಾರ್ಥಿನಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಹಿಜಾಬ್​ ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ನನ್ನ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ!

ಪ್ರಯಾಗರಾಜ್​ ನಿವಾಸಿ ಹಾಗೂ 11 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿ, ಹಿಜಾಬ್​ ಧರಿಸುವುದು ನನ್ನ ಧಾರ್ಮಿಕ ಸ್ವಾತಂತ್ರ್ಯವಾಗಿದ್ದು, ಇದಕ್ಕೆ ಶಾಲೆಯಲ್ಲಿ ಅವಕಾಶ ನೀಡುತ್ತಿಲ್ಲ, ಹೀಗಾಗಿ ನನ್ನ ಧಾರ್ಮಿಕ ಸ್ವಾತಂತ್ರ್ಯ ಹರಣವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಳು. ಆದ್ದರಿಂದ, ನೀವು ನನಗೆ, ನನ್ನ ಶಾಲೆಯ ಸಮವಸ್ತ್ರದ ಜೊತೆಗೆ ಹಿಜಾಬ್​ ಧರಿಸಲು ಅನುಮತಿ ನೀಡಬೇಕೆಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು.

ಹಿಜಾಬ್​ ಇಸ್ಲಾಂನ ಭಾಗವಲ್ಲ!


ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ನ್ಯಾಯಪೀಠ, ಸಂವಿಧಾನದ 25 ನೇ ವಿಧಿಯಲ್ಲಿ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ, ಇಲ್ಲಿ ಧರ್ಮದ ಅತ್ಯಗತ್ಯ ಆಚರಣೆಗಳಿಗೆ ಮಾತ್ರ ಅವಕಾಶವಿದೆ.

ಆದರೆ ಹಿಜಾಬ್​, ಇಸ್ಲಾಂನ ಅತ್ಯಗತ್ಯ ಆಚರಣೆ ಎನ್ನುವುದಕ್ಕೆ ಯಾವುದೇ ಐತಿಹಾಸಿಕ ಹಾಗೂ ನ್ಯಾಯೀಕ ಪುರಾವೆಗಳಿಲ್ಲ. ಅಷ್ಟೇ ಅಲ್ಲದೇ ಕರ್ನಾಟಕ ಹೈಕೋರ್ಟ್​ ಹಿಜಾಬ್​ ಅನ್ನು ಶಾಲಾ ಆವರಣದಲ್ಲಿ ಧರಿಸುವುದಕ್ಕೆ ನಿಷೇಧವನ್ನು ಹೇರಿದೆ. ಇದರ ವಿಚಾರಣೆ ಸುಪ್ರೀಂ ಕೋರ್ಟ್​ನಲ್ಲಿ ನಡೆಯುತ್ತಿರುವ ಕಾರಣ, ವ್ಯತಿರಿಕ್ತ ತೀರ್ಪನ್ನು ನೀಡಲು ನ್ಯಾಯಪೀಠ ನಿರಾಕರಿಸಿದೆ.

ಹಾಗೆಯೇ, ಅರ್ಜಿದಾಳ ಬಾಲಕಿ, ಹುಟ್ಟಿನಿಂದ ಹಿಜಾಬ್​ ಅನ್ನು ಧರಿಸುತ್ತಿಲ್ಲ, ಆಕೆಯ ಅರ್ಜಿಯಲ್ಲಿರುವಂತೆ 6 ನೇ ತರಗತಿಗೆ ಪ್ರವೇಶ ಪಡೆದಾಗನಿಂದ ಹಿಜಾಬ್​ ಧಾರಣೆ ಮಾಡುತ್ತಿದ್ದಾಳೆ. ಅಂದ ಮೇಲೆ ಇದು ಕಡ್ಡಾಯ ಧಾರ್ಮಿಕ ಆಚರಣೆಯಲ್ಲ, ಒಂದು ವೇಳೆ ಕಡ್ಡಾಯ ಧಾರ್ಮಿಕ ಆಚರಣ ಆಗಿದೆ ಎಂದು ಊಹಿಸಿದರೂ, ಅರ್ಜಿದಾರಳೇ ಅನೇಕ ಸಂದರ್ಭದಲ್ಲಿ ಹಿಜಾಬ್​ ಧಾರಣೆ ಮಾಡದ ಕಾರಣ ಇದು ಕಡ್ಡಾಯ ಧಾರ್ಮಿಕ ಆಚರಣೆ ಎಂದು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿ ಆದೇಶಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net