ಇದು ಚಕ್ರಗಳ ಮೇಲಿನ ಅರಮನೆ... ಬಾಡಿ ಮಸಾಜ್ ಸೇರಿ ರಾಜ ವೈಭೋಗ ದಕ್ಕುವ ಈ ರೈಲು ಪ್ರಯಾಣವೇ ಅದ್ಭುತ! PALACE ON WHEELS TRAIN 
ದೇಶ

ಇದು ಚಕ್ರಗಳ ಮೇಲಿನ ಅರಮನೆ... ಬಾಡಿ ಮಸಾಜ್ ಸೇರಿ ರಾಜ ವೈಭೋಗ ದಕ್ಕುವ ಈ ರೈಲು ಪ್ರಯಾಣವೇ ಅದ್ಭುತ! PALACE ON WHEELS TRAIN

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಪ್ಯಾಲೇಸ್ ಆನ್ ವ್ಹೀಲ್ಸ್​ ಟ್ರೈನ್ ಪ್ರಯಾಣವಿರಲಿದೆ
  • ಐಷಾರಾಮಿ ಆಹಾರ, ಕ್ಯಾಬಿನ್, ವೈಫೈ, ರಾಜವೈಭೋಗ ನೀಡುವ ಐಷಾರಾಮಿ ರೈಲು
  • ಏಳುದಿನ ಪ್ರವಾಸ ಕೈಗೊಳ್ಳಲು ಒಬ್ಬರು 5.6 ಲಕ್ಷದಿಂದ 5.87ಲಕ್ಷ ಪಾವತಿಸಬೇಕು
PALACE ON WHEELS TRAIN : ರೈಲಿನ ಒಳಗೆ ಪ್ರವೇಶಿಸುತ್ತಲೇ ನಮಸ್ಕರಿಸುವ ವ್ಯಕ್ತಿ, ಲಕ್ಷುರಿಯಾಗಿ ಸಿಂಗಾರಗೊಂಡ ಹಾಸಿಗೆ, ರಾಜ ಮನೆತನದಂತೆ ಕಾಣುವ ಕೆಂಪು ಕುರ್ಚಿ, ವೈಭೋಗದಿಂದ ಕೂಡಿದ ಕ್ಯಾಬಿನ್... ಇಷ್ಟೆಲ್ಲ ವ್ಯವಸ್ಥೆ ಇರೋದು ಬೇರೆ ಯಾವುದೇ ದೇಶದ ರೈಲಿನಲ್ಲಿ ಅಲ್ಲ, ನಮ್ಮ ಭಾರತದ ರಾಜಸ್ಥಾನದಲ್ಲಿ ಸೇವೆ ನೀಡುವ ಪ್ಯಾಲೇಸ್ ಆನ್​ ವ್ಹೀಲ್ಸ್ ಎನ್ನುವ ಐಷಾರಾಮಿ ಟ್ರೈನ್​ನಲ್ಲಿ.
ರಾಜಸ್ಥಾನ ಶ್ರೀಮಂತ ರಾಜಮನೆತನಕ್ಕೆ ಹೆಸರುವಾಸಿ. ಸರೋವರಗಳ ನಗರ ಎಂದು ಉದಯಪುರ ಹೆಸರು ಪಡೆದರೆ, ಪಿಂಕ್ ಸಿಟಿ ಎಂದು ಜೈಪುರ ದೇಶವಿದೇಶದಲ್ಲಿ ಖ್ಯಾತಿ ಪಡೆದುಕೊಂಡಿದೆ. ಸಿಟಿ ಪ್ಯಾಲೇಸ್ ಹಾಗೂ ಮೌಂಟ್ ಅಬು ಒಂದೊಂದು ಅರಮನೆಯ ವಿನ್ಯಾಸವು ಕೂಡ ಎಲ್ಲೂ ಕಾಣದ ಸೋಜಿಗ. ಇನ್ನು ಇಲ್ಲಿನ ಜಾನಪದ ಸಂಸ್ಕೃತಿ, ವಸ್ತ್ರ ವಿನ್ಯಾಸವಂತೂ ವಿಶಿಷ್ಟದ್ದು. ಪ್ರತಿ ಜಿಲ್ಲೆಯಲ್ಲೂ ವಿಶೇಷತೆ ಎನಿಸುವ ರಾಜಸ್ಥಾನವನ್ನು ಪ್ಯಾಲೇಸ್ ಆನ್​ ವ್ಹೀಲ್ಸ್​​ನಲ್ಲಿ ನೋಡಬಹುದು.

ಆರಂಭವಾಗಿದ್ದು ಎಂದು?

ಆ ಕಾಲದಲ್ಲಿ ರಾಜಸ್ಥಾನದ ರಾಜಮನೆತನದವರು ಹೈದರಾಬಾದ್ ನಿಜಾಮರ ಆಗಮನಕ್ಕಾಗಿ ರಾಜ ಮರ್ಯಾದೆ ನೀಡಲು ಶುರು ಮಾಡಿದ ಈ ರೈಲು ಪ್ರಯಾಣ ಇಂದು ಸಾವಿರಾರು ಪ್ರಯಾಣಿಕರು ಸಹ ಇದರ ಪ್ರಯೋಜನವನ್ನು ಅನುಸರಿಸಲು ಕಾರ್ಯಸಾಧ್ಯವಾಗುವಂತೆ ಮಾಡಿದೆ. ರಾಜಸ್ಥಾನದ ಪ್ರವಾಸೋದ್ಯಮ ನಿಗಮ(RTDC) ಸಹಯೋಗದಲ್ಲಿ ಪ್ಯಾಲೇಸ್ ಆನ್​ ವೀಲ್ಸ್​ ಎನ್ನುವ ಹೆಸರಿನ ಐಷಾರಾಮಿ ರೈಲನ್ನು ಮತ್ತೆ ಪರಿಚಯಿಸಲಾಯಿತು.
ವಿದೇಶಿಯ ವ್ಲಾಗರ್​ಗಳು ಸಾಮಾನ್ಯವಾಗಿ ಭಾರತದ ಮುಂಬೈ ಮತ್ತು ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿದಾಗ, ಅವರು ಪ್ರಯಾಣಕ್ಕೆ ನೆಚ್ಚಿಕೊಳ್ಳೋದು ಈ ರೈಲನ್ನು. ಇಲ್ಲಿನ ಇಕ್ಕಟ್ಟು ಪ್ರಯಾಣ, ಆಹಾರ, ಗಬ್ಬು ನಾರುವ ಶೌಚಾಲಯದ ಬಗ್ಗೆ ವಿಡಿಯೋ ಹರಿಬಿಟ್ಟು ವಿದೇಶ ಮಟ್ಟದಲ್ಲಿ ಇಲ್ಲಿನ ವ್ಯವಸ್ಥೆ ಬಗ್ಗೆ ಅನಾವರಣ ಮಾಡಿಬಿಡುತ್ತಾರೆ. ಆದರೆ, ಪ್ಯಾಲೇಸ್ ಆನ್ ವೀಲ್ಸ್ ರೈಲು ಈ ಎಲ್ಲ ವಿವಾದಕ್ಕೆ ಮೀರಿದ್ದಾಗಿದೆ.

ಎಲ್ಲಿಂದ ಎಲ್ಲಿಗೆ ಪ್ರಯಾಣ?

ಪ್ಯಾಲೇಸ್​ ಆನ್ ವ್ಹೀಲ್ಸ್​ ರೈಲು 14 ಬೋಗಿಗಳನ್ನು ಹೊಂದಿದ್ದು, ಪ್ರತಿಯೊಂದರಲ್ಲೂ ರಾಜಮನೆತನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಡಲಾಗಿರುತ್ತದೆ. ಈ ರೈಲು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ಹೊರಟು ಉದಯಪುರ, ಜೈಪುರ, ಜೋಧಪುರ, ಚಿತ್ತೋರ್ ಗಢ, ಸವಾಯಿ ಮಾಧೋಪುರ್ ಹಾಗೂ ಭರತ್​ ಪುರ್​ ಕಡೆಗೆ ತಲುಪಿ ಅಲ್ಲಿಂದ ಮತ್ತೆ ತಾಜ್​ ಮಹಲ್ ಆಗ್ರಾವರೆಗೆ ಪ್ರಯಾಣಿಸುತ್ತದೆ. ಏಳು ರಾತ್ರಿ ಎಂಟು ದಿನದ ಪ್ರಯಾಣ ಇದಾಗಿರಲಿದೆ.

ಏನೆಲ್ಲ ವ್ಯವಸ್ಥೆ ಇರಲಿದೆ?

ಖಾಸಗಿ ಶೌಚಾಲಯ, ಸುರಕ್ಷತೆಗಅಗಿ ಲಾಕರ್​ಗಳು, ಎಸಿ ಕ್ಯಾಬಿನ್​ಗಳು, ಟೆಲಿಫೋನ್, ಸ್ನಾನ ಗೃಹ, ವೈಫೈ, ಮಿನಿ ಜಿಮ್, ಲಾಂಜ್ ಹಾಗೂ ನಿಮ್ಮ ಸಹಾಯಕ್ಕಾಗಿ ಒಬ್ಬ ಸಹಾಯಕನನ್ನು ನೇಮಕಮಾಡಿರಲಾಗುತ್ತದೆ.

ಏನೆಲ್ಲ ಆಹಾರವಿರಲಿದೆ?

ಅಂದಿನ ರಾಜರ ಯುಗದಲ್ಲಿ ಬಫೆಟ್​ ರೀತಿ ನಾನಾ ರೀತಿ ಆಹಾರವನ್ನು ಉಣ ಬಡಿಸಲಾಗುತ್ತಿತ್ತು. ಅದರಂತೆ, ಇಲ್ಲಿ ರೆಸ್ಟೋರೆಂಟ್​ನಂತೆ ಕಾರನ್ನು ವಿನ್ಯಾಸ ಮಾಡಿರಲಾಗುತ್ತದೆ. ಇದನ್ನು ಶೀಶ್​ ಮಹಲ್ ಹಾಗೂ ಸ್ವರ್ಣ ಮಹಲ್ ಎನ್ನಲಾಗುತ್ತದೆ. ಇಲ್ಲಿ ಭಾರತದ ಮತ್ತು ವಿದೇಶದ ಆಹಾರವನ್ನು ಆಸ್ವಾದಿಸಬಹುದಾಗಿದೆ. ಇಲ್ಲಿ ಸಿಗುವ ಆಹಾರದ ಮೆನುವಿನಲ್ಲಿ ಜಾಮೂನು, ಐಸ್ಕ್ರೀಂ, ದಾಲ್, ಅನ್ನ, ಕಿಚಡಿ, ಮಖಾನಿ, ಕಂಧಾರಿ, ಪಲಾವ್, ಚಿಕನ್, ಮಟನ್​ ಹೀಗೆ ಸಸ್ಯಹಾರಿ ಮತ್ತು ಮಾಂಸಹಾರದ ಸ್ವಾದವನ್ನು ಸ್ವೀಕರಿಸಬಹುದು.

ಆಟ, ಆರೋಗ್ಯಕ್ಕೆ ಒತ್ತು

ಈ ರೈಲಿನಲ್ಲಿ ನಿಮ್ಮ ಸಮಯ ಕಳೆಯಲು ಒಳಾಂಗಣ ಆಟಗಳು ಸಹ ಇರಲಿದೆ. ಆಯುರ್ವೇದ ಪಾರ್ಲರ್​ ಇರಲಿದ್ದು, ಇಲ್ಲಿ ನುರಿತ ಕೆಲಸಗಾರರು ನಿಮಗೆ ಮಸಾಜ್ ಮಾಡಲಿದ್ದಾರೆ.

ಟಿಕೆಟ್ ದರ ಎಷ್ಟು?

ಐಷಾರಾಮಿ ರೈಲು ಪ್ರಯಾಣಕ್ಕಾಗಿ ಒಬ್ಬ ವ್ಯಕ್ತಿಗೆ 5.6 ಲಕ್ಷದಿಂದ 5.87ಲಕ್ಷ ರೂ. ಚಾರ್ಜ್​ ಮಾಡಲಾಗುತ್ತದೆ. ಈ ಮೊತ್ತವನ್ನು ಏಳು ದಿನಗಳ ಸೇವೆಗಾಗಿ ಪಾವತಿ ಮಾಡಬೇಕಾಗಿರುತ್ತದೆ. ಇನ್ನು ಸೂಪರ್​ ಡಿಲಕ್ಸ್​ ಕ್ಯಾಬಿನ್​ಗೆ 15.7 ಲಕ್ಷವಾದರೆ, ಪ್ರೆಸಿಡೆನ್ಶಿಯಲ್​ ಸೂಟ್​ಗಾಗಿ 2,12,600 ರೂಪಾಯಿ ಪಾವತಿ ಮಾಡಬೇಕು. ಏಪ್ರಿಲ್ ಮತ್ತು ಸೆಪ್ಟೆಂಬರ್​ ನಲ್ಲಿ ಈ ರೈಲು ತನ್ನ ಸೇವೆ ನೀಡುತ್ತದೆ. ಅಕ್ಟೋಬರ್​ನಿಂದ ಮಾರ್ಚ್​ವರೆಗೂ ಹೆಚ್ಚು ಜನರು ಈ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ ಎಂದು ಪ್ರವಾಸೋದ್ಯಮ ತಿಳಿಸಿದೆ, (ಏಜೆನ್ಸೀಸ್​).