ಕೇಂದ್ರ ಸಚಿವ ಪಿಯೂಷ್ ಗೋಯಲ್ 
ದೇಶ

ತಿರುಪನಕುಂದ್ರಂ ದೀಪಂ ವಿವಾದ: ಮದ್ರಾಸ್ ಹೈಕೋರ್ಟ್ ಆದೇಶ ಹಿಂದೂ ಧರ್ಮಕ್ಕೆ ಸಿಕ್ಕ ಗೆಲುವು: ಪಿಯೂಷ್ ಗೋಯಲ್ | Piyush Goyal

ನವದೆಹಲಿ: ತಮಿಳುನಾಡಿನ ಮಧುರೈ ಪಕ್ಕದ ತಿರುಪನಕುಂದ್ರಂನ ಬೆಟ್ಟದ ಮೇಲೆ ದೀಪ ಹಚ್ಚುವ ಅವಕಾಶ ನೀಡಿದ ಮಧುರೈನ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್​ ಎತ್ತಿಹಿಡಿದಿದ್ದು, ಹಿಂದೂ ಧರ್ಮಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಮುಂಬರುವ ತಮಿಳುನಾಡು ಚುನಾವಣೆಗೆ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿರುವ ಪಿಯೂಷ್ ಗೋಯಲ್, ಹೈಕೋರ್ಟ್​ನ ಆದೇಶ ಡಿಎಂಕೆ ಮತ್ತು ಅದರ ಮಿತ್ರ ಪಕ್ಷಗಳ ತುಷ್ಟೀಕರಣದ ರಾಜಕೀಯಕ್ಕೆ ನೀಡಿದ ಹೊಡೆತ. ಭಕ್ತರಿಗೆ ದೊರೆತ ನ್ಯಾಯ ಎಂದು ತಿಳಿಸಿದ್ದಾರೆ.
ಹೈಕೋರ್ಟ್​ ಆದೇಶದ ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸುವ ಡಿಎಂಕೆ ಸರ್ಕಾರದ ನಿರ್ಧಾರದ ಬಗ್ಗೆ ವಾಗ್ದಾಳಿ ನಡೆಸಿದ ಅವರು, ಇದು ಅವರ ಹಿಂದೂ ವಿರೋಧಿ ರಾಜಕೀಯದ ಮುಂದುವರಿಕೆಯಾಗಿದೆ. ಬಿಹಾರದಲ್ಲಿ ಪಾಠ ಕಲಿಸಿದಂತೆ ತಮಿಳುನಾಡಿನಲ್ಲಿ ಜನರು ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಡಿಎಂಕೆ ಜೊತೆಗೆ ಕಾಂಗ್ರೆಸ್, ಶಿವಸೇನೆ(ಯುಬಿಟಿ), ಎನ್‌ಸಿಪಿ (ಎಸ್‌ಪಿ) ಸಂಸದರು ಲೋಕಸಭೆಯಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವ ನಿರ್ಣಯಕ್ಕೆ ಸಹಿ ಹಾಕಿದ್ದಾರೆ. ಉದ್ಧವ್ ಠಾಕ್ರೆ ಈಗ ಹಿಂದೂ ವಿರೋಧಿಯಾಗಿದ್ದಾರೆ. ಅವರ ತಂದೆಯ ಆದರ್ಶಗಳನ್ನು ತ್ಯಜಿಸಿದ್ದಾರೆ. ಹಿಂದುತ್ವದಲ್ಲಿ ನಂಬಿಕೆಯಿರುವ ಮಹಾರಾಷ್ಟ್ರದ ಜನ ಎಂದಿಗೂ ಹಿಂದೂ ವಿರೋಧಿ ಪಕ್ಷಗಳಿಗೆ ಮತ ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).