ಉಸಿರಾಡಲು ಕಮಲದ ಕಾಂಡವನ್ನು ಬಳಸಿ 5 ಗಂಟೆ ಕರೆಯಲ್ಲಿ ಮಾಯವಾಗಿದ್ದ ಕಳ್ಳ ಸಿಕ್ಕಿಬಿದ್ದಿದ್ದೇ ರೋಚಕ! Lotus Stem
- ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ ಕಳ್ಳ ಬರೋಬ್ಬರಿ 5 ಗಂಟೆಗಳ ಕಾಲ ನೀರಿನಲ್ಲೇ ಅಡಗಿದ್ದ
- ಉಸಿರಾಡಲು ಕಮಲದ ಹೂವಿನ ಗಿಡದ ಕಾಂಡವನ್ನು ಬಳಸುವ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ
- ಆರಂಭದಲ್ಲಿ ಸುಳ್ಳು ಹೆಸರು ಹೇಳಿದ್ದ ಆರೋಪಿಯ ಬಣ್ಣ ಬಯಲು ಮಾಡಿದ ಆರ್‌ಪಿಎಫ್ ಅಧಿಕಾರಿ ರಾಜೀವ್ ಖರಬ್
- ಬಂಧಿತ ಖತರ್ನಾಕ್ ಖದೀಮ ಹರ್ವಿಂದರ್ ಸಿಂಗ್ ದೇಶಾದ್ಯಂತ 400ಕ್ಕೂ ಹೆಚ್ಚು ಕಳ್ಳತನಗಳಲ್ಲಿ ಭಾಗಿಯಾಗಿದ್ದಾನೆ
Lotus Stem : ಅದು ನಿಶಬ್ಧ ರಾತ್ರಿ. ಆ ಸಮಯದಲ್ಲಿ ಹಳಿಯ ಮೇಲೆ ರೈಲು ವೇಗವಾಗಿ ಚಲಿಸುತ್ತಿತ್ತು. ಅದು ರೇವಾ-ಇಟ್ವಾರಿ ಎಕ್ಸ್‌ಪ್ರೆಸ್ ರೈಲು. ಅದರ ಎಸಿ ಕೋಚ್ ಎ-2 ನಲ್ಲಿ ಎಲ್ಲರೂ ಗಾಢ ನಿದ್ರೆಗೆ ಜಾರಿದ್ದರು. ಅದೇ ಸಮಯದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಮೀರಿಸುವಂತಹ ಘಟನೆಯೊಂದು ನಡೆಯುತ್ತದೆ. ಕತ್ತಲಲ್ಲಿ ಸದ್ದಿಲ್ಲದೆ ಚಲಿಸಿದ ನೆರಳೊಂದು ಮಲಗಿದ್ದ ಮಹಿಳೆಯ ಪರ್ಸ್ ಕಡೆಗೆ ಕೈ ಚಾಚುತ್ತದೆ. ಆದರೆ, ಹಣೆಬರಹವೇ ಬೇರೆ ಇತ್ತು. ಇದ್ದಕ್ಕಿದ್ದಂತೆ ಆ ಮಹಿಳೆ ಕಣ್ಣು ಬಿಟ್ಟಿದ್ದರಿಂದ ಆ ನೆರಳು ಕಣ್ಮರೆಯಾಗುತ್ತದೆ. ಆ ಬಳಿಕ ನಡೆದಿದ್ದೇ ಅಸಲಿ ಆಟ!
ಏಪ್ರಿಲ್ 6 ರಂದು ಸಿಹೋರಾ ರೈಲ್ವೇ ನಿಲ್ದಾಣದ ಬಳಿ ಸಿನಿಮಾ ಸ್ಟೈಲ್‌ನಲ್ಲಿ ಕಳ್ಳನೊಬ್ಬನ ಬಂಧನವಾಗಿದೆ. ರೇವಾ-ಇಟ್ವಾರಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಮಹಿಳೆಯೊಬ್ಬರ ಪರ್ಸ್ ಕಳ್ಳತನಕ್ಕೆ ಯತ್ನಿಸಿದಾಗ, ಆಕೆ ಎಚ್ಚರಗೊಂಡಿದ್ದರಿಂದ ಗಾಬರಿಗೊಂಡ ಕಳ್ಳ, ರೈಲು ನಿಧಾನವಾಗುತ್ತಿದ್ದಂತೆ ಕೆಳಕ್ಕೆ ಜಿಗಿದು ಓಡಿದ್ದಾನೆ. ಇದನ್ನು ಗಮನಿಸಿದ ರೈಲ್ವೆ ರಕ್ಷಣಾ ಪಡೆ (RPF) ತಕ್ಷಣ ಆತನನ್ನು ಬೆನ್ನಟ್ಟಿತು. ಈ ವೇಳೆ ರೈಲ್ವೆ ಪೊಲೀಸರು ತನ್ನನ್ನು ಅಟ್ಟಿಸಿಕೊಂಡು ಬರುವುದನ್ನು ನೋಡಿದ ಖದೀಮ, ಬಂಧನದಿಂದ ತಪ್ಪಿಸಿಕೊಳ್ಳಲು ಹತ್ತಿರದ ಕೆರೆಯೊಂದಕ್ಕೆ ಹಾರಿ, ಸುಮಾರು ಐದು ಗಂಟೆಗಳ ಕಾಲ ನೀರಿನ ಅಡಿಯಲ್ಲಿ ಅಡಗಿ ಕುಳಿತಿದ್ದ. ಈ ವೇಳೆ ಉಸಿರಾಡಲು ಕಮಲದ ಹೂವಿನ ದಂಟನ್ನು (Lotus Stalk) ಬಳಸುವ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಪ್ರಯತ್ನಿಸಿದ. ಆದರೆ, ಅಂತಿಮವಾಗಿ ಸ್ಥಳೀಯ ಪೊಲೀಸರು ಮತ್ತು ಮುಳುಗುತಜ್ಞರ ಸಹಾಯದಿಂದ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಯಿತು.
ಅಂದಹಾಗೆ, ಪೊಲೀಸರನ್ನೇ ದಂಗುಬಡಿಸುವಂತೆ ಆ ಕಳ್ಳ ಬಂಧನದಿಂದ ತಪ್ಪಿಸಿಕೊಳ್ಳಲು ಹತ್ತಿರದ ಪಾಚಿ ಸಸ್ಯಗಳಿಂದ ತುಂಬಿದ ಕೆರೆಗೆ ಹಾರಿದ್ದ. ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ, ನೀರಿನ ಮೇಲೆ ಆತನ ಸುಳಿವೇ ಇರಲಿಲ್ಲ. ಆತ ಅತ್ಯಂತ ಯೋಜಿತವಾಗಿ ತಪ್ಪಿಸಿಕೊಂಡಿರಬಹುದು ಎಂಬ ಅನುಮಾನ ಅಧಿಕಾರಿಗಳಲ್ಲಿ ಮೂಡುವಂತೆ ಆತ ನೀರಿನೊಳಗೆ ಮಾಯವಾಗಿದ್ದನು. ಸುಮಾರು 5 ಗಂಟೆಗಳವರೆಗೆ ನೀರಿನಲ್ಲೇ ಮುಳುಗಿದ್ದನು. ಸ್ವಲ್ಪವೂ ಕದಲಾಡದೇ, ಕಮಲದ ಹೂವಿನ ಗಿಡದ ಕಾಂಡದ ಸಹಾಯದಿಂದ ಉಸಿರಾಡುತ್ತಿದ್ದನು. ಆತನ ಮೇಲೆ ಪಾಚಿ ಕಟ್ಟಿದ ದಪ್ಪ ಹಸಿರಿನ ಪದರವಿತ್ತು. ಒಂದು ಹಂತದಲ್ಲಿ ಆತ ತಪ್ಪಿಸಿಕೊಂಡಿರಬಹುದು ಅನ್ನೋ ತೀರ್ಮಾನಕ್ಕೆ ಪೊಲೀಸರು ಬಂದಿದ್ದರು.
ಆದರೆ, ರೈಲ್ವೆ ಪೊಲೀಸರು ಕಳ್ಳನನ್ನು ಹೇಗಾದರೂ ಮಾಡಿ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದರು. ಸ್ಥಳೀಯ ಪೊಲೀಸರ ನೆರವು ಪಡೆದು, ನುರಿತ ಮುಳುಗು ತಜ್ಞರನ್ನು ಸ್ಥಳಕ್ಕೆ ಕರೆಸಿದರು. ಕರೆಗೆ ಜಿಗಿದ ಮುಳುಗುತಜ್ಞರು ಸುದೀರ್ಘ ಕಾರ್ಯಾಚರಣೆ ನಡೆಸಿ, ಕೊನೆಗೂ ಖದೀಮನನ್ನು ಪತ್ತೆಹಚ್ಚಿ ಮೇಲಕ್ಕೆ ಎಳೆದುತಂದರು.
ರೋಚಕ ತಿರುವು
ಖದೀಮ ವಿಚಾರಣೆಯ ವೇಳೆ ಈ ಕಥೆ ಮತ್ತೊಂದು ಆಸಕ್ತಿದಾಯಕ ತಿರುವು ಪಡೆಯಿತು. ಆರೋಪಿಯು ಮೊದಲು ತನ್ನನ್ನು ಚಂಡೀಗಢದ 'ಬಬ್ಲು' ಎಂದು ಗುರುತಿಸಿಕೊಳ್ಳುವ ಮೂಲಕ ಪೊಲೀಸರ ಹಾದಿ ತಪ್ಪಿಸಲು ಯತ್ನಿಸಿದನು. ಆದರೆ, ಆತನ ಮೇಲೆ ಅನುಮಾನಗೊಂಡ ಆರ್‌ಪಿಎಫ್ ಅಧಿಕಾರಿ ರಾಜೀವ್ ಖರಬ್, ತಮ್ಮ ಮೊಬೈಲ್‌ನಲ್ಲಿದ್ದ ಮೋಸ್ಟ್ ವಾಂಟೆಡ್ ಅಪರಾಧಿಯೊಬ್ಬನ ಫೋಟೋವನ್ನು ನೆನಪಿಸಿಕೊಂಡರು. ಯಾವಾಗ ಅಧಿಕಾರಿ ಆತನನ್ನು 'ಸನ್ನಿ' ಎಂಬ ಹಳೆಯ ಹೆಸರಿನಿಂದ ಕರೆದರೋ, ಅಕ್ಷರಶಃ ಬೆಚ್ಚಿಬಿದ್ದು, ಆತ ಮೌನಕ್ಕೆ ಶರಣಾದನು. ಅಂತಿಮವಾಗಿ ತನ್ನ ನಿಜವಾದ ಹೆಸರು ಹರ್ವಿಂದರ್ ಸಿಂಗ್ ಎಂದು ಒಪ್ಪಿಕೊಂಡನು.
ನೂರಾರು ಕಳ್ಳತನ
32 ವರ್ಷದ ಹರ್ವಿಂದರ್ ಸಿಂಗ್ ಎಂಬ ಈತ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ. ಈತನ ಕ್ರಿಮಿನಲ್ ಇತಿಹಾಸ ಕೇಳಿದರೆ ಪೊಲೀಸರೇ ದಂಗಾಗುತ್ತಾರೆ. ಕೇರಳದಿಂದ ಜಮ್ಮುವಿನವರೆಗೆ ದೇಶಾದ್ಯಂತ ಈತ ಸುಮಾರು 400ಕ್ಕೂ ಹೆಚ್ಚು ಕಳ್ಳತನಗಳನ್ನು ಮಾಡಿದ್ದಾನೆ. ಅಚ್ಚರಿಯ ವಿಷಯವೆಂದರೆ, ಈತ 2017ರಲ್ಲಿ ಉತ್ತರ ಪ್ರದೇಶದ ಹಲ್ದೌರ್ ನಗರ ಪಂಚಾಯತ್‌ನಲ್ಲಿ ಪಕ್ಷೇತರ ವಾರ್ಡ್ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದನು! 2018ರಲ್ಲಿ ಈತನಿಂದ 70 ಲಕ್ಷ ರೂಪಾಯಿ ಮೌಲ್ಯದ ವಜ್ರ ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಅತ್ಯಂತ ಚಾಣಾಕ್ಷ
ಹರ್ವಿಂದರ್ ರೈಲುಗಳ ಎಸಿ ಕೋಚ್‌ಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದನು. ಆರಂಭದಲ್ಲಿ ಟಿಕೆಟ್ ಬುಕ್ ಮಾಡಿ ಪ್ರಯಾಣಿಸುತ್ತಿದ್ದ ಈತ, ರೈಲ್ವೆ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಹಾವಳಿ ಹೆಚ್ಚಾದ ನಂತರ ತನ್ನ ಡಿಜಿಟಲ್ ಹೆಜ್ಜೆಗುರುತು ಸಿಗದಂತೆ ಟಿಕೆಟ್ ಇಲ್ಲದೆಯೇ ಪ್ರಯಾಣಿಸಲು ಆರಂಭಿಸಿದನು. ರೈಲುಗಳಲ್ಲಿ ಶೌಚಾಲಯದ ಒಳಗೆ ಅಡಗಿ ಕುಳಿತು ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದನು. ತನ್ನ ಬಳಿ ಯಾವುದೇ ಗುರುತಿನ ಚೀಟಿ ಇಟ್ಟುಕೊಳ್ಳದ ಈತ, ಪೊಲೀಸರಿಗೆ ಯಾವಾಗಲೂ ಸುಳ್ಳು ಹೆಸರನ್ನೇ ಹೇಳಿ ಚಳ್ಳೆಹಣ್ಣು ತಿನ್ನಿಸುತ್ತಿದ್ದನು.
ಸಿನಿಮೀಯ ಅಂತ್ಯ
ಏಪ್ರಿಲ್ 6ರಂದು ಜಬಲ್ಪುರದಿಂದ ರೈಲು ಹತ್ತಿದ ಈತ, ಎಸಿ ಕೋಚ್‌ನಲ್ಲಿ ಮಹಿಳೆಯೊಬ್ಬರ ಪರ್ಸ್ ಕಳ್ಳತನಕ್ಕೆ ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿ, ಕಮಲದ ಹೂವಿನ ಕಾಂಡದ ಮೂಲಕ ಉಸಿರಾಡುತ್ತಾ ಸುಮಾರು ಐದು ಗಂಟೆಗಳ ಕಾಲ ನೀರಿನಲ್ಲೇ ಅಡಗಿದ್ದನು. ಆದರೆ ಬಿಡದ ಪೊಲೀಸರು ಮತ್ತು ಮುಳುಗುತಜ್ಞರು ಆತನನ್ನು ಪತ್ತೆಹಚ್ಚಿ ಹೊರತೆಗೆದರು. ಆರಂಭದಲ್ಲಿ 'ಬಬ್ಲು' ಎಂದು ಸುಳ್ಳು ಹೇಳಿದರೂ, ಹಳೆಯ ಪೇಪರ್ ಕಟಿಂಗ್ ಮತ್ತು ಪೊಲೀಸರ ತನಿಖೆಯಿಂದ ಈತನ ಅಸಲಿ ಮುಖವಾಡ ಕಳಚಿದೆ. ಸದ್ಯ ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಈತನ ಮೇಲೆ 21ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ, (ಏಜೆನ್ಸೀಸ್).