ಸಕ್ಕರೆ ಬೆಲೆ ಏರಿಕೆ ಮತ್ತು ಆಮದು ಕುರಿತು ಅಸೋಸಿಯೇಷನ್ ಅಧ್ಯಕ್ಷರ ಸ್ಪಷ್ಟನೆ 
ದೇಶ

ಎಥೆನಾಲ್​ ತಯಾರಿಕೆಯಿಂದ ಯಾವುದೇ ತೊಂದರೆಯಿಲ್ಲ: ನಮ್ಮಲ್ಲಿ ಸಾಕಷ್ಟು ದಾಸ್ತಾನಿದೆ; ಸಕ್ಕರೆ ಬೆಲೆ ಏರಿಕೆ ಹಾಗೂ ಆಮದಿನ ಬಗ್ಗೆ ಅಸೋಸಿಯೇಷನ್ ಅಧ್ಯಕ್ಷ ಹೇಳಿದ್ದೇನು? Sugar Price Hike

ಪ್ರಮುಖ ಮುಖ್ಯಾಂಶಗಳು

  • ಎಥೆನಾಲ್ ತಯಾರಿಕೆಯಿಂದ ಯಾವುದೇ ತೊಂದರೆಯಿಲ್ಲ, ದೇಶದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನಿದೆ
  • ಸಕ್ಕರೆ ಬೆಲೆ ಏರಿಕೆ ಮತ್ತು ಆಮದು ಕುರಿತು ಅಸೋಸಿಯೇಷನ್ ಅಧ್ಯಕ್ಷರ ಸ್ಪಷ್ಟನೆ
  • 45 ದಿನಗಳಲ್ಲಿ ಸಕ್ಕರೆ ಬೆಲೆ ಕಡಿಮೆಯಾಗಲಿದೆ
ನವದೆಹಲಿ: ವಿಶ್ವದಲ್ಲಿ ಅತ್ಯಂತ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ದೇಶವೆಂದರೆ ಅದು ನಮ್ಮ ಭಾರತ. ಆದರೆ ಕಳೆದ ಕೆಲ ದಿನಗಳ ಹಿಂದೆ ವಿದೇಶದಿಂದ ಸಕ್ಕರೆಯನ್ನು ಆಮದು ಮಾಡಿಕೊಂಡ ಸುದ್ದಿ, ಹಾಗೂ ಕಳೆದ ಕೆಲ ತಿಂಗಳಿನಿಂದ ಸಕ್ಕರೆಯ ಬೆಲೆ ಏರಿಕೆ (Sugar Price Hike) ಕಾಣುತ್ತಿದ್ದ ಹಿನ್ನಲೆ ಜನ ಗಾಬರಿ ಗೊಂಡಿದ್ದರು.
ಇದೆಲ್ಲಾ ಇಥೆನಾಲ್​ ಇಂಧನದ ದೆಸೆಯಿಂದ ಉಂಟಾಗುತ್ತಿದೆ. ಇಥೆನಾಲ್​ ತಯಾರಿಸಲು ಅಧಿಕ ಸಕ್ಕರೆಯನ್ನು ವಿನಿಯೋಗ ಮಾಡುತ್ತಿರುವ ಕಾರಣ, ಜನರಿಗೆ ಸಕ್ಕರೆಯನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಸಕ್ಕರೆ ದಾಸ್ತಾನು ಕಡೆಮೆ ಆಗುತ್ತಿದೆ ಎಂಬ ವದಂತಿ ಎಲ್ಲೆಡೆ ಹಬ್ಬುತ್ತಿತ್ತು. ಆದರೆ, ಈಗ ಈ ಎಲ್ಲಾ ವದಂತಿಗಳಿಗೆ ಭಾರತೀಯ ಸಕ್ಕರೆ ಮಿಲ್​ ಅಸೋಸಿಯೇಶನ್​ ತೆರೆ ಎಳೆದಿದೆ.

ನಮ್ಮಲ್ಲಿ ಸಕ್ಕರೆ ಕೊರತೆಯಿಲ್ಲ!

ಸೋಮವಾರ (ಆ.24) ಭಾರತದಲ್ಲಿ ಸಕ್ಕರೆ ಬೆಲೆ ಏರಿಕೆ ಹಾಗೂ ವಿದೇಶಿ ಆಮದಿನ ಬಗ್ಗೆ ಮಾತನಾಡಿದ ಭಾರತೀಯ ಸಕ್ಕರೆ ಮಿಲ್​ ಅಸೋಸಿಯೇಶನ್ (ISMA)​ ಅಧ್ಯಕ್ಷ ನೀರಜ್​ ಶಿರಗಾಂವ್ಕರ್, ದೇಶದಲ್ಲಿ ಸಕ್ಕರೆ ಕೊರತೆ ಇಲ್ಲವೇ ಇಲ್ಲ, ಇನ್ನು ಕೆಲವೇ ದಿನಗಳಲ್ಲಿ ರಿಟೈಲ್​ ಅಂಗಡಿಗಳಲ್ಲಿ ಸಕ್ಕರೆ ಬೆಲೆ ಕಡಿಮೆ ಆಗಲಿದೆ ಎಂದು ಭರವಸೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುವ ಕಚ್ಚಾ ಸಕ್ಕರೆ ಮೇಲೆ ಸುಂಕ ಕಡಿತಮಾಡಲು ಒಪ್ಪಿಕೊಂಡಿದೆ. ಈಗಾಗಲೇ 10 ಲಕ್ಷ ಟನ್​ ಸಕ್ಕರೆ ಆಮದಿಗೆ ಅದೇಶ ದೊರೆತಿದೆ. ಇದು ಜಾರಿಯಾದ ದಿನನಿಂದ ಸಕ್ಕರೆ ಬೆಲೆ ತಾನಾಗಿಯೇ ಕಡಿಮೆಯಾಗಲಿದೆ ಎಂದಿದ್ದಾರೆ.

ಆಮದು ಮಾಡಿಕೊಳ್ಳುತ್ತಿದ್ದೆವೆ ಎಂದ ಮಾತ್ರಕ್ಕೆ ನಮ್ಮಲ್ಲಿ ಸಕ್ಕರೆ ದಾಸ್ತಾನು ಕಡಿಮೆಯಾಗಿದೆ ಎಂದಲ್ಲ. 2025-26 ರಲ್ಲಿ ದೇಶೀಯ ತಯಾರಿಕೆ ಸಕ್ಕರೆಯ ಸುಮಾರು 2.79 ಕೋಟಿ ಟನ್​ ಸಕ್ಕರೆ ನಮ್ಮ ಬಳಿಯಿದೆ ಎಂದು ತಿಳಿಸಿದ್ದಾರೆ.


ಇದರಲ್ಲಿ ಕೇವಲ 24 ಲಕ್ಷ ಟನ್​ ಸಕ್ಕರೆಯನ್ನು ಮಾತ್ರ ಇಥೆನಾಲ್​ ತಯಾರಿಕೆಗೆ ನೀಡಲಾಗುತ್ತಿದೆ. ಭಾರತ ವರ್ಷಕ್ಕೆ 3 ಕೋಟಿ ಟನ್​​ ಸಕ್ಕರೆಯನ್ನು ಉತ್ಪಾದಿಸುತ್ತದೆ. ಹಾಗೆ ನೋಡಿದರೆ ನಮ್ಮ ಬಳಿ ಸಾಕಷ್ಟು ಸಕ್ಕರೆಯಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

45 ದಿನಗಳಲ್ಲಿ ಬೆಲೆ ಇಳಿಗೆ ನಿಶ್ಚಿತ!

ಭಾರತದ ನಂತರ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಥೈಲ್ಯಾಂಡ್​ ಕೂಡ ಸಕ್ಕರೆ ಕೊರತೆಯಿಂದೆ ಬಳಲುತ್ತಿದೆ. ಹೀಗಾಗಿ ನಾವು ಬ್ರೆಜಿಲ್​ನಿಂದ ಸಕ್ಕರೆ ಆಮದಿಗೆ ಮುಂದಾಗಿದ್ದು, ಹಡಗಿನ ಮೂಲಕ ಸಕ್ಕರೆ ತಲುಪಲು 40 ರಿಂದ 45 ದಿನ ತಗಲುತ್ತದೆ.

ಈ ಸಕ್ಕರೆ ಬಂದ ದಿನದಿಂದ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಗುಜರಾತ್​ ರಾಜ್ಯಗಳಿಗೆ ಬಂದಿಳಿಯಲಿದ್ದು, ಅಲ್ಲಿಂದ ಭಾರತದಾದ್ಯಂತ ಸರಬರಾಜಾಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.


ಆದರೆ, ನಾವು ಮಾಡುತ್ತಿದ್ದ ರಫ್ತಿನ ಪ್ರಮಾಣ ಕಡಿಮೆ ಆಗಿದೆ. ಈ ವರ್ಷ ಕೇವಲ 8 ಲಕ್ಷ ಟನ್​ ಮಾತ್ರ ರಫ್ತಾಗಿದೆ. ಹೀಗಾಗಿ ಕೆಲ, ದೇಶದೊಳಗೆ ಸಕ್ಕರೆಯನ್ನು ಅಧಿಕ ಬೆಲೆಗೆ ಮಾರಬೇಕಾದ ಪರಿಸ್ಥಿತಿ ಎದುರಾಗಿದ್ದು, ಆಮದು ಮಾಡಿಕೊಂಡ ಸಕ್ಕರೆ ನಮ್ಮನ್ನು ತಲುಪಿದ ನಂತರ ಸಕ್ಕರೆ ಬೆಲೆ ಇಳಿಕೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ, (ಏಜನ್ಸೀಸ್​).