ಮುಂಬೈ: ಬೆಳ್ಳಿತೆರೆ ಮೇಲೆ ಅವರ ಧ್ವನಿ ಕೇಳಿದರೆ ಸಾಕು, ಎಂಥವರೂ ಒಮ್ಮೆ ನಡುಗುತ್ತಿದ್ದರು. 70 ಮತ್ತು 80ರ ದಶಕದ ಬಾಲಿವುಡ್ ಸಿನಿಮಾಗಳಲ್ಲಿ ತಮ್ಮ ಕ್ರೂರ ನಟನೆ, ಖಡಕ್ ಲುಕ್‌ನಿಂದಲೇ ಹೆಸರು ಮಾಡಿದ್ದ ಖ್ಯಾತ ಖಳನಟ ಎಂದರೆ ಅದು ಡ್ಯಾನಿ ಡೆನ್ಜೊಂಗ್ಪಾ (Danny Denzongpa) ಆಗಿದ್ದಾರೆ.
'ಅಗ್ನಿಪಥ್', 'ಹಮ್', 'ಘಾತಕ್'ನಂತಹ ಹಿಟ್ ಸಿನಿಮಾಗಳಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಈ ಸ್ಟಾರ್ ನಟನಿಗೆ ಸಿನಿಮಾಗಿಂತಲೂ ದೊಡ್ಡದೊಂದು ಬಿಸಿನೆಸ್ ಸಾಮ್ರಾಜ್ಯವಿದೆ ಎಂಬ ಸಂಗತಿ ನಿಮಗೆ ಗೊತ್ತಿದೆಯಾ? ಇವರೇನು ಸಮಾನ್ಯ ಉದ್ಯಮಿಯಲ್ಲ, ಬದಲಿಗೆ ಮದ್ಯದ ದೊರೆ ಎಂದೇ ಖ್ಯಾತರಾಗಿದ್ದ ವಿಜಯ್ ಮಲ್ಯ ಅವರನ್ನೇ ವ್ಯಾಪಾರದಲ್ಲಿ ಮಣಿಸಿದ ಇತಿಹಾಸ ಇವರದ್ದಾಗಿದೆ.
ಮೂಲತಃ ಸಿಕ್ಕಿಂನವರಾದ ಡ್ಯಾನಿ ಅವರಿಗೆ ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಕನಸಿತ್ತು. ಆದರೆ 1960ರ ಭಾರತ-ಚೀನಾ ಯುದ್ಧದ ಭೀಕರತೆಯನ್ನು ಕಣ್ಣಾರೆ ಕಂಡ ಅವರ ತಾಯಿ, ಮಗ ಸೇನೆಗೆ ಹೋಗುವುದು ಬೇಡವೆಂದು ಪಟ್ಟುಹಿಡಿದರು
ತಾಯಿಯ ಮಾತಿಗೆ ಗೌರವ ಕೊಟ್ಟ ಡ್ಯಾನಿ, ಸಂಗೀತ ಮತ್ತು ನಟನೆಯ ಕಡೆ ಮುಖ ಮಾಡಿದರು. ಪುಣೆಯ ಪ್ರತಿಷ್ಠಿತ FTII ಸಂಸ್ಥೆಯಲ್ಲಿ ನಟನೆ ಕಲಿತು, ಮಾಯಾನಗರಿ ಮುಂಬೈಗೆ ಕಾಲಿಟ್ಟರು. ನೋಡನೋಡುತ್ತಿದ್ದಂತೆ ಬಾಲಿವುಡ್‌ನ ನಂಬರ್ ಒನ್ ವಿಲನ್ ಆಗಿ ಇಡೀ ದೇಶದಲ್ಲೇ ಮನೆಮಾತಾದರು.
ಮುಂಬೈನಲ್ಲಿ ಕೋಟ್ಯಂತರ ರೂಪಾಯಿ, ಸಿಕ್ಕಾಪಟ್ಟೆ ಖ್ಯಾತಿ ಸಿಕ್ಕರೂ ಡ್ಯಾನಿ ಅವರ ಮನಸ್ಸು ಮಾತ್ರ ತಮ್ಮ ತವರು ಸಿಕ್ಕಿಂ ಕಡೆಗೇ ಇರುತ್ತಿತ್ತು. ವರ್ಷದ ಅರ್ಧ ಭಾಗವನ್ನು ಪ್ರಕೃತಿಯ ಮಡಿಲಿನಲ್ಲಿ ಕಳೆಯಲು ನಿರ್ಧರಿಸಿದ ಅವರು, ತಮ್ಮ ಊರಾದ 'ಯುಕ್ಸೋಮ್' ಹೆಸರಿನಲ್ಲೇ 1987ರಲ್ಲಿ 'ಯುಕ್ಸೋಮ್ ಬ್ರೂರೀಸ್' (Yuksom Breweries) ಎಂಬ ಬಿಯರ್ ತಯಾರಿಕಾ ಘಟಕ ಆರಂಭಿಸಿದರು.
ಸ್ಥಳೀಯರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಶುರುವಾದ ಈ ಸಣ್ಣ ಉದ್ಯಮ, ಕೆಲವೇ ವರ್ಷಗಳಲ್ಲಿ ಭಾರತದ ಮೂರನೇ ಅತಿದೊಡ್ಡ ಮತ್ತು ಇಡೀ ಈಶಾನ್ಯ ಭಾರತದ ನಂಬರ್ ಒನ್ ಬ್ರೂವರಿ ಕಂಪನಿಯಾಗಿ ಬೆಳೆದು ನಿಂತಿತು.
2009ರಲ್ಲಿ ಕಿಂಗ್‌ಫಿಶರ್ ಒಡೆಯ ವಿಜಯ್ ಮಲ್ಯ ಅವರ ಯುನೈಟೆಡ್ ಬ್ರೂರೀಸ್ (UB) ಈಶಾನ್ಯ ಭಾರತದ ಮಾರುಕಟ್ಟೆಯನ್ನು ಆವರಿಸಿಕೊಳ್ಳಲು ಪ್ಲಾನ್ ಮಾಡಿತ್ತು. ಮಲ್ಯ ತಮ್ಮ ಗಡಿಯೊಳಗೆ ಬಂದರೆ ತಮ್ಮ ಕಂಪನಿಗೆ ಹೊಡೆತ ಬೀಳುತ್ತದೆ ಎಂದು ಮೊದಲೇ ಊಹಿಸಿದ ಡ್ಯಾನಿ ಸುಮ್ಮನೆ ಕೂರಲಿಲ್ಲ.
ಅಸ್ಸಾಂನಲ್ಲಿದ್ದ 'ರೈನೋ ಏಜೆನ್ಸೀಸ್' ಕಂಪನಿಯನ್ನು ದಿಢೀರನೇ ಬರೋಬ್ಬರಿ 40 ಕೋಟಿ ನೀಡಿ ಖರೀದಿಸಿಬಿಟ್ಟರು. ಬಿಲಿಯನ್ ಡಾಲರ್ ಕಂಪನಿಯನ್ನೇ ಕಟ್ಟಿ ಆಳುತ್ತಿದ್ದ ಮಲ್ಯಗೆ ಒಂದು ಪ್ರಾದೇಶಿಕ ಕಂಪನಿಯ ಒಡೆಯನಾಗಿ ಡ್ಯಾನಿ ಸೆಡ್ಡು ಹೊಡೆದ ರೀತಿ ಇಂದಿಗೂ ಕಾರ್ಪೊರೇಟ್ ವಲಯದಲ್ಲಿ ಚರ್ಚೆಯಾಗುವ ರೋಚಕ ಅಧ್ಯಾಯವಾಗಿದೆ.
ಡ್ಯಾನಿ ಅವರ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 83 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ತಮ್ಮ ಈ ವ್ಯಾಪಾರದ ಬಗ್ಗೆ ಡ್ಯಾನಿ ಯಾವತ್ತೂ ಮುಚ್ಚುಮರೆ ಮಾಡಿಲ್ಲ. "ನಟನೆ ನನಗೆ ಆಕಸ್ಮಿಕವಾಗಿ ಸಿಕ್ಕಿದ್ದು ಅಷ್ಟೇ, ನನ್ನ ಅಸಲಿ ಜೀವನೋಪಾಯವೇ ಈ ಬ್ರೂವರಿ ಉದ್ಯಮ" ಎಂದು ಅವರು ನೇರವಾಗಿಯೇ ಹೇಳಿಕೊಂಡಿದ್ದರು.
ಬಿಸಿನೆಸ್‌ನಲ್ಲಿ ಕೋಟಿ ಕೋಟಿ ಹಣ ಹರಿದುಬರುತ್ತಿದ್ದ ಕಾರಣ, ಡ್ಯಾನಿ ಯಾವತ್ತೂ ಹಣಕ್ಕಾಗಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. "ಮುಂಬೈನ ಕೆಟ್ಟ ಬೇಸಿಗೆಯಲ್ಲಿ ನಾನು ಶೂಟಿಂಗ್ ಮಾಡಲ್ಲ, ಚಳಿಗಾಲದ ನವೆಂಬರ್‌ನಿಂದ ಜನವರಿ ಮಧ್ಯೆ ಮಾತ್ರ ನಟಿಸುತ್ತೇನೆ. ಭಾನುವಾರ ನನಗೆ ರಜೆ ಇರಲೇಬೇಕು" ಎಂದು ನಿರ್ಮಾಪಕರಿಗೆ ನೇರವಾಗಿ ಕಂಡೀಷನ್ ಹಾಕುತ್ತಿದ್ದರಂತೆ. 2003ರಲ್ಲಿ ಕೇಂದ್ರ ಸರ್ಕಾರದಿಂದ 'ಪದ್ಮಶ್ರೀ' ಗೌರವ ಪಡೆದ ಡ್ಯಾನಿ, ರಜನಿಕಾಂತ್ ಜತೆ 'ರೋಬೊ', ಅಕ್ಷಯ್ ಕುಮಾರ್ ಜತೆ 'ಬೇಬಿ' ಹಾಗೂ 2022ರಲ್ಲಿ ಅಮಿತಾಭ್ ಬಚ್ಚನ್ ಜತೆ 'ಊಂಚಾಯಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, (ಏಜೆನ್ಸೀಸ್).