ಚೆನ್ನೈ: ಮಹಿಳೆಯರಿಗೆ ಅವಮಾನಿಸುವಂತಹ ಹೇಳಿಕೆಯನ್ನು ನಾನು ನೀಡಿಲ್ಲ, ಟಿವಿಕೆ ಸರ್ಕಾರ ನನ್ನನ್ನು ಭಯೋತ್ಪಾದಕನಂತೆ ನಡೆಸಿಕೊಂಡಿದ್ದು, ಸುಳ್ಳು ಪ್ರಕರಣಗಳಿಗೆ ಹೆದರಲ್ಲ ಎಂದು ಡಿಎಂಕೆ ನಾಯಕ ಮತ್ತು ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಉಧಯನಿಧಿ ಸ್ಟಾಲಿನ್(Udhayanidhi Stalin) ಹೇಳಿದ್ದಾರೆ.
ನಟಿ ತ್ರಿಷಾ ಉದ್ದೇಶಿಸಿ ಆಕ್ಷೇಪಾರ್ಹ ಹಾಗೂ ಅಸಭ್ಯ ಹೇಳಿಕೆ ನೀಡಿರುವ ಆರೋಪಕ್ಕೆ ತಂಜಾವೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಮಂಗಳವಾರ(ಆ. 04) ಠಾಣೆಯ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮಾತನಾಡಿರುವ ಅವರು, ತಮ್ಮ ವಿರುದ್ಧದ ಡಬಲ್ ಮೀನಿಂಗ್ ಹೇಳಿಕೆ ಆರೋಪ ಆಧಾರರಹಿತ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಮಾತ್ರ ನಾನು ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ನಿಜವಾದ ಸಮಸ್ಯೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ರೈತರ ಕಲ್ಯಾಣಕ್ಕಾಗಿ ಕಾವೇರಿ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸುವಾಗ ಒಂದೇ ಅರ್ಥದಲ್ಲಿ ಮಾತನಾಡಿದ್ದೇನೆ. ಯಾವುದೇ ದ್ವಂದ್ವಾರ್ಥದ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿವಿಕೆ ಸರ್ಕಾರವನ್ನು ಸರ್ಕಸ್ ಕ್ಯಾಂಪ್ ಎಂದು ಟೀಕಿಸಿದ ಉದಯನಿಧಿ, ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ನನಗೂ ಪತ್ನಿ, ಸಹೋದರಿ ಮತ್ತು ಮಗಳು ಇದ್ದಾರೆ. ಯಾವುದೇ ಮಹಿಳೆಯರಿಗೆ ಅವಮಾನಿಸಿಲ್ಲ. ಆದರೆ ಸರ್ಕಾರ ನನ್ನನ್ನು ವಿಚಾರಣೆಗೆ ಕರೆದೊಯ್ಯುವ ನೆಪದಲ್ಲಿ ಸಾರ್ವಜನಿಕ ಹಣವನ್ನು ಬಳಸಿಕೊಂಡು ಸುಮಾರು 3,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭಯೋತ್ಪಾದಕನಂತೆ ರಸ್ತೆ ಮೂಲಕ ಚೆನ್ನೈನಿಂದ ತಂಜಾವೂರಿಗೆ ಕರೆದೊಯ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆಯ ಸಂದರ್ಭದಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ(ಆ. 04) ಬೆಳಿಗ್ಗೆ 11 ಗಂಟೆ ಸುಮಾರಿಗೆ ನೀಲಂಕರೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ಅವರ ನಿವಾಸದಿಂದ ತಂಜಾವೂರು ಮತ್ತು ನೀಲಂಕರೈ ಪೊಲೀಸರ ಜಂಟಿ ತಂಡವು ಉದಯನಿಧಿ ಅವರನ್ನು ವಿಚಾರಣೆಗಾಗಿ ಬಂಧಿಸಿತು. ತಡರಾತ್ರಿ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ (ಏಜೆನ್ಸೀಸ್).