Devendra Fadnavis (ಚಿತ್ರ X) 
ದೇಶ

ರಾಮಾಯಣ ಸಿನಿಮಾಗೆ ಆಸ್ಕರ್ ಸಿಗ್ಲೇಬೇಕು!...ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಮಹತ್ವದ ಹೇಳಿಕೆ Devendra Fadnavis

ಮುಂಬೈ: ನಿರ್ದೇಶಕ ನಿತೀಶ್ ತಿವಾರಿ ಅವರ ಬಿಗ್ ಬಜೆಟ್ ಸಿನಿಮಾ 'ರಾಮಾಯಣ' ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಫಡ್ನವೀಸ್, ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗದಿದ್ದರೆ ಅಕಾಡೆಮಿ ಜ್ಯೂರಿ ಬಗ್ಗೆ ನನಗೆ ತೀವ್ರ ನಿರಾಸೆಯಾಗಲಿದೆ. ಇದು ಕೇವಲ ಒಂದು ದಶಕದ ಚಿತ್ರವಲ್ಲ, ಇಡೀ ಸಹಸ್ರಮಾನದ ಶ್ರೇಷ್ಠ ಸಿನಿಮಾ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಹಿಂದೆಯೂ 'ವೇವ್ಸ್ ಸಮ್ಮಿಟ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರೊಂದಿಗೆ ರಾಮಾಯಣ ಚಿತ್ರದ ಪ್ರದರ್ಶನ ಮಂಟಪವನ್ನು ವೀಕ್ಷಿಸಿದ್ದ ಫಡ್ನವೀಸ್, ಭಾರತದ ಪುರಾತನ ಕಥೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಪ್ರಸ್ತುತಪಡಿಸುತ್ತಿರುವ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಪ್ರಯತ್ನವನ್ನು ಬಣ್ಣಿಸಿದ್ದಾರೆ.
2026ರ ಅತ್ಯಂತ ನಿರೀಕ್ಷಿತ ಹಾಗೂ ಬಹುಕೋಟಿ ವೆಚ್ಚದ ಮಹಾಕಾವ್ಯ ಆಧಾರಿತ ಚಿತ್ರ 'ರಾಮಾಯಣ' ಸಿನಿಮಾ ಪ್ರಪಂಚದಾದ್ಯಂತ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡಿದ್ದ ಟ್ರೇಲರ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಇದೀಗ ಚಿತ್ರತಂಡ ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಈ ಸಿನಿಮಾದ ಇಂಗ್ಲಿಷ್​ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.

ಹೊಸ ಇಂಗ್ಲಿಷ್ ಟ್ರೇಲರ್ ಹಾಗೂ ತಂತ್ರಜ್ಞಾನದ ಸ್ಪರ್ಶ

ಈ ಚಿತ್ರದ ಅಂತರರಾಷ್ಟ್ರೀಯ ವಿತರಣೆಯ ಹಕ್ಕನ್ನು ಪಡೆದುಕೊಂಡಿರುವ 'ಸೋನಿ ಪಿಕ್ಚರ್ಸ್' ತನ್ನ ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್​ನ್ನು ಹಂಚಿಕೊಂಡಿದೆ. ಈ ಟ್ರೇಲರ್​ನ ವಿಶೇಷತೆಯೆಂದರೆ, ಸಾಮಾನ್ಯ ಡಬ್ಬಿಂಗ್ ಸಿನಿಮಾಗಳಂತೆ ಕಾಣದೆ ಪಾತ್ರಗಳ ಲಿಪ್​ ಸಿಂಕ್​ನ್ನು ಇಂಗ್ಲಿಷ್​ಗೆ ತಕ್ಕಂತೆ ಹೊಂದಿಸಲಾಗಿದೆ. ಇದಕ್ಕಾಗಿ 'ಬ್ರಹ್ಮ ಎಐ' (Brahma AI) ತಂತ್ರಜ್ಞಾನವನ್ನು ಬಳಸಲಾಗಿದ್ದು, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಆಧುನಿಕ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಬಳಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ದೀಪಾವಳಿ ಹಬ್ಬಕ್ಕೆ ಪ್ರಪಂಚದಾದ್ಯಂತ ಗ್ರ್ಯಾಂಡ್ ರಿಲೀಸ್!

ಈ ಸಿನಿಮಾ 2026ರ ನವೆಂಬರ್ 6 ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಆದಾಗ್ಯೂ, ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಗೆ ಎರಡು ದಿನ ಮುಂಚಿತವಾಗಿಯೇ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇದು ಹಿಂದೆಂದೂ ಕಾಣದಂತಹ ಮಹಾಕಾವ್ಯದ ಪಯಣಕ್ಕೆ ಸಾಕ್ಷಿಯಾಗಿ ಎಂದು ಸೋನಿ ಪಿಕ್ಚರ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ತಾರಾಗಣ ಹಾಗೂ ದೈತ್ಯ ಬಜೆಟ್

ಪ್ರಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ರಾಮಾಯಣ ಭಾಗ-1' ಸುಮಾರು 1,400 ರಿಂದ 1,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಎರಡೂ ಭಾಗಗಳು ಸೇರಿ ಒಟ್ಟು 3,000 ಕೋಟಿ ಬಜೆಟ್ ಮೀಸಲಿಡಲಾಗಿದೆ.
ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ.
ಇಷ್ಟೇ ಅಲ್ಲದೆ ಅರುಣ್ ಗೋವಿಲ್ (ದಶರಥ), ಇಂದಿರಾ ಕೃಷ್ಣನ್ (ಕೌಸಲ್ಯ), ಲಾರಾ ದತ್ತಾ (ಕೈಕೇಯಿ), ಸೋನಲ್ ಝಾ (ಸುಮಿತ್ರಾ), ಸೀಮಾ ಪಹ್ವಾ (ಮಂಥರೆ), ಆದಿನಾಥ್ ಕೊಠಾರೆ (ಭರತ), ನಿತೀಶ್ ಭಾರದ್ವಾಜ್ (ಶತ್ರುಘ್ನ), ಶೋಭನಾ (ಕೈಕೇಸಿ), ವಿವೇಕ್ ಒಬೆರಾಯ್ (ವಿದ್ಯುತ್ಜಿಹ್ವ), ಹರೀಶ್ ಉತ್ತಮನ (ವಿಭೀಷಣ) ಮತ್ತು ಫೈಸಲ್ ಮಲಿಕ್ (ಕುಂಭಕರ್ಣ) ಸೇರಿದಂತೆ ಭಾರತೀಯ ಚಿತ್ರರಂಗದ ದಂಡೇ ಈ ಚಿತ್ರದಲ್ಲಿದೆ (ಏಜೆನ್ಸೀಸ್​).