12 ವರ್ಷಗಳ ರಹಸ್ಯಕ್ಕೆ ಬಿತ್ತು ಅಧಿಕೃತ ಮುದ್ರೆ! ಮಹಾರಾಷ್ಟ್ರದಲ್ಲಿ ಮುಸ್ಲಿಂ ಮೀಸಲಾತಿ ಅಂತ್ಯದ ಹಿಂದಿರುವ 'ಆ' ಒಂದು ಕಾರಣವೇನು..?
ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಮುಸ್ಲಿಂ ಸಮುದಾಯಕ್ಕೆ(Muslim Reservation) ನೀಡಲಾಗಿದ್ದ ಶೇ. 5ರಷ್ಟು ಮೀಸಲಾತಿಯನ್ನು ಅಧಿಕೃತವಾಗಿ ರದ್ದುಗೊಳಿಸಿ ಮಂಗಳವಾರ (ಫೆ.17) ಮಹತ್ವದ ಸರ್ಕಾರಿ ನಿರ್ಣಯವನ್ನು (GR) ಹೊರಡಿಸಿದೆ. ಈ ನಿರ್ಧಾರದೊಂದಿಗೆ 2014ರಿಂದ ಇದ್ದ ಕಾನೂನು ಗೊಂದಲಗಳಿಗೆ ತೆರೆ ಬಿದ್ದಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸರ್ಕಾರದ ಈ ನಿರ್ಧಾರಕ್ಕೆ ಅಸಲಿ ಕಾರಣವೇನು..?
ಸರ್ಕಾರದ ಪ್ರಕಾರ, ಇದು ಹೊಸ ನಿರ್ಧಾರವಲ್ಲ ಬದಲಾಗಿ ಹಳೆಯ ಕಾನೂನು ಸ್ಥಿತಿಯನ್ನು ಅಧಿಕೃತಗೊಳಿಸುವ ಕ್ರಮವಾಗಿದೆ. ಇದರ ಹಿಂದಿನ ಪ್ರಮುಖ ಕಾರಣಗಳು ಇಲ್ಲಿವೆ.
ಸುಗ್ರೀವಾಜ್ಞೆ ಅವಧಿ ಮುಕ್ತಾಯ: 2014ರಲ್ಲಿ ಕಾಂಗ್ರೆಸ್-ಎನ್‌ಸಿಪಿ ಸರ್ಕಾರವು ಚುನಾವಣೆಗೆ ಮುನ್ನ ಸುಗ್ರೀವಾಜ್ಞೆಯ ಮೂಲಕ ಈ ಮೀಸಲಾತಿಯನ್ನು ತಂದಿತ್ತು. ಆದರೆ 2014 ಡಿಸೆಂಬರ್ 23 ರೊಳಗೆ ಇದನ್ನು ಶಾಸನಸಭೆಯಲ್ಲಿ ಕಾನೂನಾಗಿ ಪರಿವರ್ತಿಸದ ಕಾರಣ ಅದು ತಾನಾಗಿಯೇ ರದ್ದಾಗಿತ್ತು.
ನ್ಯಾಯಾಲಯದ ತಡೆ: ಬಾಂಬೆ ಹೈಕೋರ್ಟ್ ಈ ಮೀಸಲಾತಿಯ ಅನುಷ್ಠಾನಕ್ಕೆ 2014ರ ನವೆಂಬರ್‌ನಲ್ಲೇ ತಡೆಯಾಜ್ಞೆ ನೀಡಿತ್ತು. ನಂತರ ಸುಪ್ರೀಂ ಕೋರ್ಟ್ ಕೂಡ ಈ ರದ್ದತಿಯನ್ನು ಎತ್ತಿ ಹಿಡಿದಿತ್ತು.
ದಾಖಲೆಗಳ ರದ್ದತಿ: ಈ ಮೀಸಲಾತಿ ಅಡಿಯಲ್ಲಿ ನೀಡಲಾಗಿದ್ದ ಜಾತಿ ಪ್ರಮಾಣಪತ್ರಗಳು ಮತ್ತು ಸಿಂಧುತ್ವ ಪ್ರಮಾಣಪತ್ರಗಳು ಇನ್ನು ಮುಂದೆ ಅಮಾನ್ಯವಾಗಲಿವೆ.
ಏನೆಲ್ಲಾ ಬದಲಾಗಲಿದೆ..?
ಶಿಕ್ಷಣ ಮತ್ತು ಉದ್ಯೋಗ: ಸರ್ಕಾರಿ ಮತ್ತು ಅರೆ-ಸರ್ಕಾರಿ ಉದ್ಯೋಗಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸಿಗುತ್ತಿದ್ದ ಶೇ. 5ರಷ್ಟು ಪ್ರತ್ಯೇಕ ಕೋಟಾ ಇನ್ನು ಮುಂದೆ ಇರುವುದಿಲ್ಲ.
ಸೌಲಭ್ಯಗಳ ಸ್ಥಗಿತ: ವಿಶೇಷ ಹಿಂದುಳಿದ ವರ್ಗ-ಎ (SBC-A) ಅಡಿಯಲ್ಲಿ ಹೊಸದಾಗಿ ಜಾತಿ ಪ್ರಮಾಣಪತ್ರ ಅಥವಾ ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರಗಳನ್ನು ವಿತರಿಸುವುದನ್ನು ಸರ್ಕಾರ ನಿಲ್ಲಿಸಿದೆ.
ಹಳೆಯ ಸುತ್ತೋಲೆಗಳು ಅನೂರ್ಜಿತ: 2014 ಮತ್ತು 2015ರಲ್ಲಿ ಈ ಮೀಸಲಾತಿ ಸಂಬಂಧ ಹೊರಡಿಸಲಾಗಿದ್ದ ಎಲ್ಲಾ ಸರ್ಕಾರಿ ಆದೇಶಗಳನ್ನು ಈ ಹೊಸ ನಿರ್ಣಯವು ರದ್ದುಪಡಿಸಿದೆ.
ರಾಜಕೀಯ ಕೆಸರೆರಚಾಟ
ಸರ್ಕಾರದ ಈ ಕ್ರಮವನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುತ್ತಿದೆ ಎಂದು ಕಾಂಗ್ರೆಸ್ ನಾಯಕಿ ವರ್ಷಾ ಗಾಯಕ್ವಾಡ್ ಟೀಕಿಸಿದರೆ, ಇದು ಕೇವಲ ಆಡಳಿತಾತ್ಮಕ ತಿದ್ದುಪಡಿ, ಕಾನೂನುಬದ್ಧವಾಗಿ ಅಸ್ತಿತ್ವದಲ್ಲೇ ಇಲ್ಲದ ಮೀಸಲಾತಿಯನ್ನು ಅಧಿಕೃತವಾಗಿ ತೆಗೆದುಹಾಕಿದ್ದೇವೆ ಎಂದು ಆಡಳಿತ ಪಕ್ಷ ಸಮರ್ಥಿಸಿಕೊಂಡಿದೆ,(ಏಜೆನ್ಸೀಸ್).