ಲಖನೌ: 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದಿಂದ ಗೆಲ್ಲಲಿದೆ ಎಂದು ಬುಧವಾರ(ನ. 18) ವಿಶ್ವಾಸ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 320ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ್ದಾರೆ.
ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಕಿಡಿಕಾರಿದ್ದಾರೆ.
ಪಕ್ಷವು ಸಾರ್ವಜನಿಕರ ಬೆಂಬಲವನ್ನು ಪಡೆಯುತ್ತದೆ ಎಂದಿರುವ ಅವರು, ಯಾವುದೇ ಮಹಿಳೆ, ಯುವಕರು, ವ್ಯಾಪಾರಿ ಅಥವಾ ಬಡವರನ್ನು ಕೇಳಿ, ಅವರು ಸರ್ಕಾರ ಅಧಿಕಾರಕ್ಕೆ ಮರಳಬೇಕು ಎಂದು ಹೇಳುತ್ತಾರೆ. ಅಭಿವೃದ್ಧಿಯನ್ನು ಇಷ್ಟಪಡದವರು, ಪ್ರತಿ ಉಪಕ್ರಮದಲ್ಲಿ ನಕಾರಾತ್ಮಕತೆಯನ್ನು ನೋಡುತ್ತಾರೆ ಮತ್ತು ಅವ್ಯವಸ್ಥೆಯ ವಾತಾವರಣವನ್ನು ಬಯಸುತ್ತಾರೆ ಎಂದು ತಿಳಿಸಿದ್ದಾರೆ.
ಸುಧಾರಿತ ಕಾನೂನು ಮತ್ತು ಸುವ್ಯವಸ್ಥೆಯನ್ನು ಆರ್ಥಿಕ ಬೆಳವಣಿಗೆಯೊಂದಿಗೆ ಜೋಡಿಸಿದ ಅವರು, ಗಲಭೆಗಳು ಮತ್ತು ಕರ್ಫ್ಯೂಗಳ ವಾತಾವರಣದಲ್ಲಿ ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಅಸಾಧ್ಯ ಎಂದಿದ್ದಾರೆ. ಮತ್ತು ಕಳೆದ ದಶಕದಲ್ಲಿ ತಮ್ಮ ಸರ್ಕಾರ 2.30 ಲಕ್ಷ ಪೊಲೀಸ್ ಸಿಬ್ಬಂದಿ ನೇಮಕಾತಿಯನ್ನು ಪೂರ್ಣಗೊಳಿಸಿದೆ. ಇನ್ನೂ 32,000 ಸಿಬ್ಬಂದಿಯ ನೇಮಕಾತಿ ಅಂತಿಮ ಹಂತದಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ.
ಇನ್ನೂ ಎಸ್ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ಅವರು, ಮತದಾರರ ಪಟ್ಟಿಗಳ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಸ್ವಾಗತಾರ್ಹ ಕ್ರಮ. ಮೃತ ವ್ಯಕ್ತಿಗಳು ಮತ್ತು ನಾಗರಿಕರಲ್ಲದವರ ಹೆಸರುಗಳನ್ನು ತೆಗೆದುಹಾಕಬೇಕು. ಮತ್ತು ಪ್ರತಿಯೊಬ್ಬ ಅರ್ಹ ವಯಸ್ಕ ಭಾರತೀಯ ನಾಗರಿಕರನ್ನು ಸೇರಿಸಬೇಕು ಎಂದಿದ್ದರೆ.
ಇನ್ನೂ ಮತ ಕಳ್ಳತನದ ಆರೋಪ, ಎಸ್ಐಆರ್ ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳ(ಇವಿಎಂ) ಕುರಿತು ಪ್ರಶ್ನೆ ಎತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮ ಚುನಾವಣಾ ಸೋಲುಗಳಿಗೆ ಕಾಂಗ್ರೆಸ್ ಪಕ್ಷವು ಸಾಂವಿಧಾನಿಕ ಸಂಸ್ಥೆಗಳನ್ನೇ ದೂಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಗೆದ್ದಾಗ ಅದು ಅವರ ಗೆಲುವು, ಆದರೆ ಸೋತಾಗ ಮಾತ್ರ ಇವಿಎಂ ತಪ್ಪಾಗಿರುತ್ತದೆ, ಎಸ್ಐಆರ್ ತಪ್ಪಾಗಿರುತ್ತದೆ. ಹಾಗೂ ಚುನಾವಣಾ ಆಯೋಗವೇ ಅದಕ್ಕೆ ಹೊಣೆಯಾಗಿರುತ್ತದೆ. ಕಾಂಗ್ರೆಸ್ ಪಕ್ಷವು ಸಾಂವಿಧಾನಿಕ ಸಂಸ್ಥೆಗಳ ಘನತೆಯನ್ನು ಕುಗ್ಗಿಸುತ್ತಿದೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).