ಆಸ್ಪತ್ರೆಗೆ ಕೇವಲ 3 ಕಿ.ಮೀ ದೂರವಿದ್ದಾಗ ಆಂಬ್ಯುಲೆನ್ಸ್‌ನಲ್ಲಿ ಖಾಲಿಯಾದ ಆಕ್ಸಿಜನ್ 
ದೇಶ

ಆಸ್ಪತ್ರೆ ಕೇವಲ ಮೂರು ಕಿ.ಮೀ ದೂರವಿತ್ತು....ಆಂಬ್ಯುಲೆನ್ಸ್​ನಲ್ಲಿ ಖಾಲಿಯಾದ ಆಕ್ಸಿಜನ್​: ತಾಯಿ ಮಡಿಲಲ್ಲೇ ಪ್ರಾಣ ಚೆಲ್ಲಿದ ಯುವಕ! Patient Died due to Oxygen Shortage

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆಗೆ ಕೇವಲ 3 ಕಿ.ಮೀ ದೂರವಿದ್ದಾಗ ಆಂಬ್ಯುಲೆನ್ಸ್‌ನಲ್ಲಿ ಖಾಲಿಯಾದ ಆಕ್ಸಿಜನ್
  • ತಾಯಿ ಮಡಿಲಲ್ಲೇ ಪ್ರಾಣ ಬಿಟ್ಟ ಯುವಕ
  • ಮಧ್ಯಪ್ರದೇಶದ ಮಂಡಲದಲ್ಲಿ ನಡೆದಿರುವ ಘಟನೆ; ವಿಡಿಯೋ ವೈರಲ್​
ಮಧ್ಯಪ್ರದೇಶ: ಡಯಾಲಿಸಿಸ್​ಗೆಂದು ಆಸ್ಪತ್ರೆಗೆ ಸಾಗುತ್ತಿದ್ದ ರೋಗಿವೊಬ್ಬನಿಗೆ ಸರಿಯಾಗಿ ಆಕ್ಸಿಜನ್​ ಪೂರೈಕೆಯಾಗದೆ ಸಾವನ್ನಪ್ಪಿರುವ (Patient Died due to Oxygen Shortage) ಘಟನೆ ಮಧ್ಯಪ್ರದೇಶದ ಮಂಡಲದಲ್ಲಿ ವರದಿಯಾಗಿದೆ.
21 ವರ್ಷದ ಅಜಿತ್ ಬರಯ್ಯ ಎಂಬ ಯುವಕನಿಗೆ ನೀಡಿದ್ದ ಆಕ್ಸಿಜನ್​ ಖಾಲಿಯಾಗಿ ಆಂಬ್ಯುಲೆನ್ಸ್​ನಲ್ಲಿ, ತಮ್ಮ ತಂದೆ-ತಾಯಿ ಕಣ್ಣೆದುರಲ್ಲೇ ಪ್ರಾಣ ಚೆಲ್ಲಿರುವ ದಾರುಣ ಘಟನೆ ನಡೆದಿದೆ.

ಮಾಹಿತಿ ಪ್ರಕಾರ, ಈ ಘಟನೆಯು ಜುಲೈ 27 ರಂದು ನಡೆದಿದ್ದು, ಈಗ ಈ ಘಟನೆ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದು, ದೇಶದ ಆರೋಗ್ಯ ವ್ಯವಸ್ಥೆಗೆ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ.

ವಿಡಿಯೋನಲ್ಲೇನಿದೆ?

ಇತ್ತೀಚೆಗೆ ಮಧ್ಯಪ್ರದೇಶದ ಮಂಡಲದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಈ ವಿಡಿಯೋನಲ್ಲಿ, ಆಂಬ್ಯುಲೆನ್ಸ್​ನಲ್ಲಿ ತಂದೆ-ತಾಯಿ ಜೊತೆಗೆ ಮಗ ಅಜಿತ್ ಮುಖಕ್ಕೆ ಆಕ್ಸಿಜನ್​ ಮಾಸ್ಕ್​​ ಹಾಕಿ ಕುಳಿತಿದ್ದಾನೆ. ಆದರೆ ಆಕ್ಸಿಜನ್​ ಸಪ್ಲೈ ಖಾಲಿಯಾದ ಕಾರಣ ಉಸಿರಾಡಲು ಸಾಧ್ಯವಾಗದೇ ತಾಯಿಯ ಮಡಿಲಲ್ಲೇ ಕೊನೆಯುಸಿರೇಳೆದಿದ್ದಾನೆ.

ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ಮೃತನ ತಂದೆ, ಅಂದು ನನ್ನ ಮಗನಿಗೆ ಡಯಾಲಿಸಿಸ್​ ಮಾಡಿಸಬೇಕಿತ್ತು. ಆಂಬ್ಯುಲೆನ್ಸ್​ಗೆ ಕರೆ ಮಾಡಿದ ಒಂದು ಗಂಟೆ ತಡವಾಗಿ ನಮ್ಮ ಮನೆಗೆ ಬಂದಿದೆ. ಆಸ್ಪತ್ರೆ ತಲುಪಲು ಮೂರು ಕಿ.ಮೀ ಇದ್ದಾಗ ಆಕ್ಸಿಜನ್​ ಖಾಲಿಯಾಗಿದ್ದು, ನನ್ನ ಮಗನ ಉಸಿರಾಟದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಅವನು ಆಂಬ್ಯುಲೆನ್ಸ್​​ನಲ್ಲಿಯೇ ಪ್ರಾಣ ಚೆಲ್ಲಿದ್ದಾನೆಂದು ಹೇಳಿದ್ದಾರೆ. ಅಂದು ನನ್ನ ಮಗನಿಗೆ ಸರಿಯಾಗಿ ಆಕ್ಸಿಜನ್​ ದೊರಕ್ಕಿದ್ದರೆ ಇಂದು ಅವನು ಜೀವಂತವಾಗಿರುತ್ತಿದ್ದ ಎಂದು ಕಣ್ಣೀರನ್ನು ಸುರಿಸಿದ್ದಾರೆ.

ಮುಂದುವರಿದ ತನಿಖೆ!

ಈ ಘಟನೆ ರಾಜ್ಯದ್ಯಂತ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆ,

ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಡಿ. ಜೆ. ಮೊಹಂತಿ ಒಂದು ಸಮಿತಿಯನ್ನು ರಚಿಸಿದ್ದು, ಈ ಅವಗಢಕ್ಕೆ ಕಾರಣವೇನು? ಇದರಲ್ಲಿ ಆಂಬುಲೆನ್ಸ್​ ಪಾಲೆಷ್ಟು? ಆಕ್ಸಿಜನ್​ ಏಕೆ ಸರಿಯಾಗಗಿ ಪೂರೈಕೆಯಾಗಿಲ್ಲ? ಇದಕ್ಕೆ ಹೊಣೆಯಾರು? ಮೊದಲಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲಾಗುತ್ತಿದ್ದು, ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುದಾಗಿ ಮೊಹಂತಿ ಭರವಸೆ ನೀಡಿದ್ದಾರೆ,

(ಏಜನ್ಸೀಸ್​).