ದೆಹಲಿ ಗದ್ದುಗೆಯ ನಿದ್ದೆಗೆಡಿಸಿದ ದಳಪತಿ! ಹಿಂದುತ್ವ ಮತ್ತು ದ್ರಾವಿಡ ಸಿದ್ದಾಂತಕ್ಕೆ ಬ್ರೇಕ್! ತಲ್ಲಣ ಸೃಷ್ಟಿಸಿದ ನಿಯೋ-ದ್ರಾವಿಡಿಯನ್ ಕ್ರಾಂತಿ!
ಚೆನ್ನೈ: ತಮಿಳುನಾಡಿನ ಐತಿಹಾಸಿಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, ದಶಕಗಳ ಡಿಎಂಕೆ ಮತ್ತು ಎಐಎಡಿಎಂಕೆ ದ್ವಿಮುಖ ಪ್ರಾಬಲ್ಯವನ್ನು ಮುರಿದು ಇತ್ತೀಚೆಗಷ್ಟೇ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ, ದಳಪತಿ ವಿಜಯ್ ಅವರು ಜಾಗತಿಕ ತಮಿಳರ(Neo Dravidian Revolution) ಭಾವನಾತ್ಮಕ ಅಸ್ಮಿತೆಯನ್ನು ಕೆರಳಿಸುವ ಹೊಸ ರಾಜಕೀಯ ಆಟಕ್ಕೆ ಕೈಹಾಕಿದ್ದಾರೆ.
LTTE ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರ ಪುಣ್ಯಸ್ಮರಣೆಯ ದಿನದಂದು ಮುಖ್ಯಮಂತ್ರಿ ವಿಜಯ್ ಅವರು ನೀಡಿದ ಭಾವನಾತ್ಮಕ ಶ್ರದ್ಧಾಂಜಲಿ, ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸೌಂಡ್ ಮಾಡುತ್ತಿದ್ದು, ಹೊಸ ಸಿದ್ಧಾಂತದ ಚರ್ಚೆಯನ್ನು ಹುಟ್ಟುಹಾಕಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ ವಿಜಯ್, ಮುಲ್ಲಿವೈಕ್ಕಾಲ್ ಕಹಿ ನೆನಪುಗಳನ್ನು ನಾವು ಎಂದಿಗೂ ಎದೆಯಲ್ಲಿ ಹೊತ್ತು ಸಾಗುತ್ತೇವೆ ಎಂದು ಬರೆಯುವ ಮೂಲಕ ಸಿಎಂ ವಿಜಯ್ ಅವರು ಶ್ರೀಲಂಕಾ ಅಂತರ್ಯುದ್ಧದಲ್ಲಿ ಮಡಿದ ಸಾವಿರಾರು ತಮಿಳರ ಬಲಿದಾನವನ್ನು ನೆನೆದಿದ್ದಾರೆ. ಮುಖ್ಯಮಂತ್ರಿಯೊಬ್ಬರು ಬಹಿರಂಗವಾಗಿ ಪ್ರಭಾಕರನ್ ಮತ್ತು ಈಳಂ ತಮಿಳರ ಪರ ಧ್ವನಿ ಎತ್ತುತ್ತಿರುವುದು ಭಾರತೀಯ ರಾಜತಾಂತ್ರಿಕ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದೆ.
ದ್ರಾವಿಡ ಸಿದ್ಧಾಂತ ಮತ್ತು ತಮಿಳು ರಾಷ್ಟ್ರೀಯತೆಯ ಮಹಾ ಸಂಗಮ!
ವಿಜಯ್ ಅವರ ಈ ನಡೆ ಕೇವಲ ಸಿನಿಮಾ ಶೈಲಿಯ ರಾಜಕೀಯ ಪ್ರಚಾರವಲ್ಲ, ಬದಲಿಗೆ ಇದರ ಹಿಂದೆ ಅತ್ಯಂತ ಆಳವಾದ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ತಮಿಳುನಾಡಿನ ಹಳೆಯ ದ್ರಾವಿಡ ಸಿದ್ಧಾಂತ (ಸಾಮಾಜಿಕ ನ್ಯಾಯ, ಮೀಸಲಾತಿ, ಜಾತೀಯತೆ ವಿರೋಧ) ಹಾಗೂ ಕಟು ತಮಿಳು ರಾಷ್ಟ್ರೀಯತೆಯನ್ನು (ತಮಿಳು ಅಸ್ಮಿತೆ ಮತ್ತು ಜಾಗತಿಕ ತಮಿಳರ ಒಕ್ಕೂಟ) ಒಟ್ಟಿಗೆ ಸೇರಿಸಿ ಹೊಸದೊಂದು ನಿಯೋ-ದ್ರಾವಿಡಿಯನ್ ಚೌಕಟ್ಟನ್ನು ನಿರ್ಮಿಸಲು ವಿಜಯ್ ಯತ್ನಿಸುತ್ತಿದ್ದಾರೆ.
ದ್ರಾವಿಡ ಸಿದ್ಧಾಂತ ಮತ್ತು ತಮಿಳು ರಾಷ್ಟ್ರೀಯತೆ ಈ ಮಣ್ಣಿನ ಎರಡು ಕಣ್ಣುಗಳು ಎಂದು ಘೋಷಿಸುವ ಮೂಲಕ ಈ ಎರಡು ಭಿನ್ನ ಸಿದ್ಧಾಂತಗಳ ನಡುವಿನ ಕಂದಕವನ್ನು ಮುಚ್ಚಲು ವಿಜಯ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ದ್ರಾವಿಡ ಸಿದ್ಧಾಂತ: ತಮಿಳುನಾಡಿನ ಆಡಳಿತಕ್ಕೆ ಸಾಮಾಜಿಕ ನ್ಯಾಯ, ಜನಕಲ್ಯಾಣ ಯೋಜನೆಗಳು ಮತ್ತು ಜಾತ್ಯತೀತತೆಯ ಅಡಿಪಾಯ ನೀಡುತ್ತದೆ.
ತಮಿಳು ರಾಷ್ಟ್ರೀಯತೆ: ಯುವ ಜನತೆಯನ್ನು ಸೆಳೆಯಲು ಮತ್ತು ಪ್ರಾದೇಶಿಕ ಹೆಮ್ಮೆಯನ್ನು ಜಾಗೃತಗೊಳಿಸಲು ಬೇಕಾದ ತೀವ್ರ ಭಾವನಾತ್ಮಕ ಶಕ್ತಿಯನ್ನು ಒದಗಿಸುತ್ತದೆ.
ಸೀಮನ್ ಮತ್ತು 'ನಾಮ್ ತಮಿಳರ್ ಕಚ್ಚಿ' ಕೋಟೆಗೆ ಭೀಕರ ಲಗ್ಗೆ!
ಕಳೆದ ಒಂದು ದಶಕದಿಂದ ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (NTK) ಪಕ್ಷವು ತಮಿಳು ರಾಷ್ಟ್ರೀಯತೆ ಮತ್ತು ಪ್ರಭಾಕರನ್ ಅವರ ಸಿದ್ಧಾಂತದ ಮೇಲೆ ಏಕಸ್ವಾಮ್ಯ ಹೊಂದಿತ್ತು. ಆದರೆ ಈಗ TVK ಪಕ್ಷದ ಉದಯ ಮತ್ತು ವಿಜಯ್ ಅವರ ಆಕ್ರಮಣಕಾರಿ ಹೆಜ್ಜೆಗಳಿಂದಾಗಿ ಎನ್‌ಟಿಕೆ ಪಕ್ಷದ ಪ್ರಮುಖ ನಾಯಕರು ಮತ್ತು ಯುವ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ವಿಜಯ್ ಅವರತ್ತ ಆಕರ್ಷಿತರಾಗುತ್ತಿದ್ದಾರೆ.
ಟಿವಿಕೆ ಪಕ್ಷದ ಬಾವುಟದಲ್ಲಿರುವ ಕೆಂಪು ಮತ್ತು ಹಳದಿ ಬಣ್ಣಗಳು, ಯುದ್ಧದ ಆನೆಗಳು ಹಾಗೂ ವಾಗೈ ಹೂವಿನ ಚಿತ್ರಗಳು ತಮಿಳರ ಸಾಂಸ್ಕೃತಿಕ ಮತ್ತು ಸಮರ ಇತಿಹಾಸವನ್ನು ನೆನಪಿಸುತ್ತವೆ. ಇದು ನೇರವಾಗಿ ತಮಿಳು ರಾಷ್ಟ್ರೀಯವಾದಿಗಳ ಹೃದಯಕ್ಕೆ ಲಗ್ಗೆ ಇಟ್ಟಿದೆ.
ನಾಸ್ತಿಕತೆ Vs ಸಂಸ್ಕೃತಿ: ಧರ್ಮದ ಸಂಘರ್ಷಕ್ಕೆ ವಿಜಯ್ ಹೊಸ ತಿರುವು!
ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ರಾಜಕಾರಣವು ಪೆರಿಯಾರ್ ಅವರ ಪ್ರಭಾವದಿಂದಾಗಿ ತೀವ್ರ ನಾಸ್ತಿಕತೆ ಮತ್ತು ಹಿಂದೂ ಧರ್ಮದ ಆಚರಣೆಗಳ ವಿರೋಧದ ಮೇಲೆ ನಿಂತಿತ್ತು. ಇದು ಇಂದಿನ ಆಧುನಿಕ ಹಾಗೂ ಧಾರ್ಮಿಕ ಮನೋಭಾವದ ತಮಿಳು ಯುವಕರಲ್ಲಿ ಎಲ್ಲೋ ಒಂದು ಕಡೆ ಅಸಮಾಧಾನ ಮೂಡಿಸಿತ್ತು. ವಿಜಯ್ ಅವರು ಈ ಸೂಕ್ಷ್ಮತೆಯನ್ನು ಅರಿತುಕೊಂಡಿದ್ದಾರೆ.
ಧರ್ಮವನ್ನು ನೇರವಾಗಿ ವಿರೋಧಿಸುವ ಬದಲು, ಅವರು ಇಡೀ ವಿಷಯವನ್ನು ತಮಿಳು ಸಾಂಸ್ಕೃತಿಕ ಹೆಮ್ಮೆಯನ್ನಾಗಿ ಬದಲಾಯಿಸಿದ್ದಾರೆ. ಮುರುಗನ್ ಆರಾಧನೆ, ಶೈವ ಧರ್ಮ ಮತ್ತು ಸ್ಥಳೀಯ ದೇವತೆಗಳ ಆರಾಧನೆಯನ್ನು ತಮಿಳು ಸಂಸ್ಕೃತಿಯ ಭಾಗವಾಗಿ ಬಿಂಬಿಸುವ ಮೂಲಕ ಸಿಎಂ ವಿಜಯ್, ನಾಸ್ತಿಕ Vs ಆಸ್ತಿಕ ಎಂಬ ಚರ್ಚೆಯನ್ನು ಬದಿಗೆ ಸರಿಸಿ, ಹೆಮ್ಮೆಯ ತಮಿಳಿಗ Vs ಹೊರಗಿನವನು ಎಂಬ ಹೊಸ ಸಿದ್ಧಾಂತವನ್ನು ತೇಲಿಬಿಟ್ಟಿದ್ದಾರೆ. ಇದು ಬಿಜೆಪಿ ಪ್ರವರ್ಧಮಾನಕ್ಕೆ ತರುತ್ತಿರುವ ಪ್ಯಾನ್-ಇಂಡಿಯಾ ಹಿಂದುತ್ವ ರಾಜಕಾರಣಕ್ಕೂ ಪ್ರಾದೇಶಿಕ ತಡೆಗೋಡೆ ನಿರ್ಮಿಸುವ ತಂತ್ರವಾಗಿದೆ,(ಏಜೆನ್ಸೀಸ್).