ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ (SIR) ಅಕ್ರಮ ನಡೆದಿದೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿಪಕ್ಷಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಮುಂದಾಗಿದ್ದಾರೆ.
ಜಂತರ್ ಮಂತರ್ ಕಡೆಗೆ ತೆರಳುತ್ತಿದ್ದ ದೆಹಲಿಯ ಮಾಜಿ ಸಿಎಂ ಅತಿಶಿ, ಯೋಗೇಂದ್ರ ಯಾದವ್ ಸೇರಿದಂತೆ ಬರೋಬ್ಬರಿ 1,000ಕ್ಕೂ ಅಧಿಕ ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿರುವುದು ದೊಡ್ಡ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಈ ದಮನಕಾರಿ ಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿಯ (CJP) ಸ್ಥಾಪಕ ಅಭಿಜಿತ್ ದಿಪ್ಕೆ ತೀವ್ರವಾಗಿ ಕಿಡಿಕಾರಿದ್ದಾರೆ. ದೆಹಲಿ ಪೊಲೀಸರು ಕೇಂದ್ರ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ನಾಗರಿಕರ ಮೂಲಭೂತ ಹಕ್ಕನ್ನು ಹತ್ತಿಕ್ಕುವುದು ಖಂಡನೀಯ ಎಂದು ಅಭಿಜಿತ್ ದಿಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ದೆಹಲಿ ಪೊಲೀಸರು ಅಮಿತ್ ಶಾ ಅವರ ಕೈಗೊಂಬೆಗಳಂತೆ ವರ್ತಿಸುವುದನ್ನು ತಕ್ಷಣ ನಿಲ್ಲಿಸಬೇಕು. ಭಿನ್ನಾಭಿಪ್ರಾಯಗಳನ್ನು ಬಲವಂತವಾಗಿ ಹತ್ತಿಕ್ಕುವ ಮೂಲಕ ದೆಹಲಿ ಪೊಲೀಸರು ತಮ್ಮ ಇಲಾಖೆಗೆ ಹಾಗೂ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ನಿಮಗೆ ನಾಚಿಕೆಯಾಗಬೇಕು," ಎಂದು ದಿಪ್ಕೆ ಟೀಕಿಸಿದ್ದಾರೆ.
ಇದೇ ವೇಳೆ ಮುಂಬೈ ಮತ್ತು ದೆಹಲಿ ಪೊಲೀಸರ ಕಾರ್ಯವೈಖರಿಯನ್ನು ಅವರು ಹೋಲಿಸಿದ್ದು, ಮುಂಬೈ ಪೊಲೀಸರು ಶಾಂತಿಯುತ ಪ್ರತಿಭಟನೆಗೆ ಅವಕಾಶ ಕಲ್ಪಿಸುವ ಉತ್ತಮ ಸಂಪ್ರದಾಯ ಹೊಂದಿದ್ದಾರೆ. ದೆಹಲಿ ಪೊಲೀಸರು ಕೂಡ ಇತಹ ಕ್ರಮವನ್ನೇ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಅಕ್ಟೋಬರ್ 10 ರಂದು ದೆಹಲಿಯಲ್ಲಿ ಯುವ ಭಾರತೀಯರ ಬೃಹತ್ ಸಮಾವೇಶ ನಡೆಯಲಿದೆ ಎಂದು ಘೋಷಿಸಿದ್ದಾರೆ.
ಎಎಪಿ (AAP), ಐಸಾ (AISA), ಎಸ್‌ಎಫ್‌ಐ (SFI), ಎನ್‌ಎಸ್‌ಯುಐ (NSUI) ಮತ್ತು ಯೂತ್ ಕಾಂಗ್ರೆಸ್ ಮುಖಂಡರು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆಗೆ ಕರೆ ನೀಡಿದ್ದರು.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಜಂತರ್ ಮಂತರ್ ಸುತ್ತಮುತ್ತ ಹಾಗೂ ದೆಹಲಿಯ ಇತ್ತೀಚಿನ ವಿವಿಧ ಕಡೆಗಳಿಂದ ಒಟ್ಟು 1,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆಯಿಂದಲೇ ಸುಮಾರು 200 ಮಂದಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಬಂಧಿತರನ್ನು ಬಸ್‌ಗಳಲ್ಲಿ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಜಂತರ್ ಮಂತರ್ ಸುತ್ತಮುತ್ತ 5,000ಕ್ಕೂ ಹೆಚ್ಚು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, (ಏಜೆನ್ಸೀಸ್).