ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮೇಲಿನ ಆರೋಪಗಳನ್ನು ತಳ್ಳಿಹಾಕಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ ಚುನಾವಣಾ ಆಯೋಗ. 
ದೇಶ

SIR ನಿರ್ಧಾರ ಒಬ್ಬರದಲ್ಲ, ಮೂವರ ಒಮ್ಮತದ್ದು: ಜ್ಞಾನೇಶ್ ಕುಮಾರ್ 'ಏಕಪಕ್ಷೀಯ ನಿರ್ಧಾರ' ತೆಗೆದುಕೊಂಡಿಲ್ಲ! ಸುಪ್ರೀಂ ಕೋರ್ಟ್​ನಲ್ಲಿ ಚುನಾವಣಾ ಆಯೋಗದ ಖಡಕ್ ಕೌಂಟರ್! Election Commission

ನವದೆಹಲಿ: ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಎದ್ದಿರುವ ಭಾರೀ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ (ECI) ಸುಪ್ರೀಂ ಕೋರ್ಟ್‌ಗೆ ಮಹತ್ವದ ಅಫಿಡವಿಟ್ ಸಲ್ಲಿಸಿದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ತಾವೊಬ್ಬರೇ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳನ್ನು ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದೆ. "ಯಾರೊಬ್ಬರೂ ಇಲ್ಲಿ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಂಡಿಲ್ಲ, ಎಲ್ಲಾ ತೀರ್ಮಾನಗಳೂ ಮೂವರು ಆಯುಕ್ತರ ಒಮ್ಮತದಿಂದಲೇ ಆಗಿವೆ" ಎಂದು ಆಯೋಗ ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದೆ.

ಕೇವಲ ಒಂದೇ ಒಂದು ಮಾಧ್ಯಮ ವರದಿಯನ್ನು ಇಟ್ಟುಕೊಂಡು ಇಡೀ ಆಯೋಗದ ಕಾರ್ಯವೈಖರಿಯನ್ನೇ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಈ ಅಫಿಡವಿಟ್‌ಗೆ ಮುಖ್ಯ ಆಯುಕ್ತರು ಸೇರಿದಂತೆ ಇಬ್ಬರೂ ಚುನಾವಣಾ ಆಯುಕ್ತರು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದೆ.

ಆಂತರಿಕ ಚರ್ಚೆಗಳು ಅಂತಿಮ ತೀರ್ಮಾನಗಳಲ್ಲ!

ಆಯೋಗದೊಳಗೆ ನಡೆಯುವ ಚರ್ಚೆಗಳ ಬಗ್ಗೆ ವಿವರಣೆ ನೀಡಿರುವ ECI, ಕಡತಗಳನ್ನು ಪರಿಶೀಲಿಸುವಾಗ ಅಧಿಕಾರಿಗಳು ಅಥವಾ ಆಯುಕ್ತರು ತಮ್ಮ ವೈಯಕ್ತಿಕ ಸಲಹೆ, ಅಭಿಪ್ರಾಯ ಅಥವಾ ಪ್ರಶ್ನೆಗಳನ್ನು ವ್ಯಕ್ತಪಡಿಸುವುದು ಸಹಜ ಪ್ರಕ್ರಿಯೆ. ಆದರೆ ಅಂತಹ ಆಂತರಿಕ ಚರ್ಚೆಗಳನ್ನೇ 'ಆಯೋಗದ ಅಂತಿಮ ತೀರ್ಮಾನ' ಎಂದು ಬಿಂಬಿಸಲು ಸಾಧ್ಯವಿಲ್ಲ. 2023ರ ಮುಖ್ಯ ಚುನಾವಣಾ ಆಯುಕ್ತರ ಕಾಯಿದೆಯ ಸೆಕ್ಷನ್ 18ರ ಅಡಿಯಲ್ಲಿ ಇವು ಔಪಚಾರಿಕ ಆದೇಶಗಳಾಗುವುದಿಲ್ಲ ಎಂದು ಆಯೋಗ ಸ್ಪಷ್ಟವಾಗಿ ಹೇಳಿದೆ.

SIR ಗೆ ಮೂವರ ಒಪ್ಪಿಗೆಯಿದೆ!

ಜೂನ್ 2025, ಅಕ್ಟೋಬರ್ 2025 ಹಾಗೂ ಮೇ 2026 ರಲ್ಲಿ ಹೊರಡಿಸಲಾದ ಮೂರೂ ವಿಶೇಷ ತೀವ್ರ ಪರಿಷ್ಕರಣೆ (SIR) ಆದೇಶಗಳು ಆಯೋಗದ ಸರ್ವಾನುಮತದ ನಿರ್ಧಾರಗಳೇ ಆಗಿವೆ. ಮೊದಲು ಒಬ್ಬ ಆಯುಕ್ತರು ಕಡತ ಪರಿಶೀಲಿಸಿದರೆ, ಬಳಿಕ ಇನ್ನೊಬ್ಬರು ನೋಡುತ್ತಾರೆ. ಅಂತಿಮವಾಗಿ ಮುಖ್ಯ ಚುನಾವಣಾ ಆಯುಕ್ತರ ಮುಂದೆ ಕಡತ ಮಂಡನೆಯಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಡಿಜಿಟಲ್ ರೂಪದಲ್ಲೇ ಒಪ್ಪಿಗೆ ಪಡೆದು ದಾಖಲಿಸಿಕೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ವಿವರಿಸಿದೆ.

'ಫಾರ್ಮ್ 6' ಬದಲಾಗಿದೆಯಾ? ಆಯೋಗ ಹೇಳಿದ್ದೇನು?

ಮತದಾರರ ನೋಂದಣಿಗೆ ಬಳಸುವ 'ನಮೂನೆ 6' (Form 6)ರಲ್ಲಿ ಅನಧಿಕೃತ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೂ ಆಯೋಗ ತೆರೆ ಎಳೆದಿದೆ. "ಫಾರ್ಮ್ 6 ಅನ್ನು ಬದಲಿಸುವ ಅಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರವೇ ಹೊರತು ನಮಗಲ್ಲ. SIR ಪ್ರಕ್ರಿಯೆಗೆ ಬೇಕಾಗಿರುವ ಘೋಷಣಾ ಪತ್ರ ಕೇವಲ ಪ್ರತ್ಯೇಕ ದಾಖಲೆಯಷ್ಟೇ" ಎಂದು ಆಯೋಗ ತಿಳಿಸಿದೆ.

ಆದರೆ, ಆನ್‌ಲೈನ್‌ನಲ್ಲಿ ಅರ್ಜಿಯನ್ನು ತೋರಿಸುವ ವಿಧಾನದಿಂದ ಜನರಿಗೆ ಗೊಂದಲ ಉಂಟಾಗಿರಬಹುದು ಎಂಬುದನ್ನು ಒಪ್ಪಿಕೊಂಡಿರುವ ಆಯೋಗ, ಅಕ್ಟೋಬರ್ 21 ರಿಂದಲೇ ಆನ್‌ಲೈನ್‌ನಲ್ಲೂ ನಮೂನೆ 6 ಮತ್ತು ಘೋಷಣಾ ಪತ್ರವನ್ನು ಪ್ರತ್ಯೇಕವಾಗಿ ಕಾಣುವಂತೆ ವಿಭಜಿಸಲಾಗಿದೆ ಎಂದು ಹೇಳಿದೆ. ಅಲ್ಲದೆ, ಪರಿಷ್ಕರಣೆ ವೇಳೆ ವಿವರ ಮ್ಯಾಪ್ ಆಗದ ಸಾಮಾನ್ಯ ಮತದಾರರು ಕಚೇರಿ ಅಥವಾ ವಿಚಾರಣೆಗೆ ಅಲೆಯಬೇಕಿಲ್ಲ; ಬೂತ್ ಮಟ್ಟದ ಅಧಿಕಾರಿಗಳೇ (BLO) ಮನೆ ಮನೆಗೆ ತೆರಳಿ ದಾಖಲೆ ಸಂಗ್ರಹಿಸುತ್ತಾರೆ ಎಂದು ಜನಸಾಮಾನ್ಯರಿಗೆ ಅಭಯ ನೀಡಿದೆ.

ಗೋವಾದಲ್ಲಿ 97 ಮತದಾರರ ಹೆಸರು ಡಿಲೀಟ್ ರಹಸ್ಯ ಬಯಲು!

ಗೋವಾದಲ್ಲಿ 97 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ವಿವಾದಕ್ಕೂ ಉತ್ತರ ನೀಡಿರುವ ಆಯೋಗ, ಆ 97 ಜನರಲ್ಲಿ 88 ಮಂದಿಯ ಹೆಸರನ್ನು ಈಗಾಗಲೇ ಮರಳಿ ಸೇರಿಸಲಾಗಿದೆ. ಉಳಿದವರಲ್ಲಿ 6 ಜನ ವಿದೇಶದಲ್ಲಿದ್ದರೆ, ಇನ್ನು ಮೂವರು ಪೋರ್ಚುಗೀಸ್ ಪಾಸ್‌ಪೋರ್ಟ್ ಹೊಂದಿರುವ ಕಾರಣ ಅವರ ಹೆಸರು ಕೈಬಿಡಲಾಗಿದೆ ಎಂದು ಸ್ಪಷ್ಟ ಅಂಕಿ-ಅಂಶ ನೀಡಿದೆ. ತಂತ್ರಜ್ಞಾನ ವ್ಯವಸ್ಥೆಯಾದ ECINet ಸಂಪೂರ್ಣ ಸುರಕ್ಷಿತವಾಗಿದ್ದು, ಐಐಟಿ (IIT) ಮತ್ತು ಐಐಎಸ್‌ಸಿ (IISc) ತಜ್ಞರ ಸಮಿತಿ ಇದರ ಮೇಲ್ವಿಚಾರಣೆ ನಡೆಸುತ್ತಿದೆ ಎಂದಿದೆ.

CEC ಕೆಲಸಕ್ಕೆ ಬ್ರೇಕ್ ಹಾಕಲು ಸಾಧ್ಯವಿಲ್ಲ!

ಮುಖ್ಯ ಚುನಾವಣಾ ಆಯುಕ್ತರು ಕರ್ತವ್ಯ ನಿರ್ವಹಿಸದಂತೆ ತಡೆಯಬೇಕು ಎಂಬ ಅರ್ಜಿದಾರರ ಮನವಿಯನ್ನು ಆಯೋಗ ತೀವ್ರವಾಗಿ ವಿರೋಧಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಹುದ್ದೆಯಿಂದ ತೆಗೆದುಹಾಕಲು ಇರುವ ಕಠಿಣ ಸಾಂವಿಧಾನಿಕ ಪ್ರಕ್ರಿಯೆಯ ಹೊರತಾಗಿ ಬೇರೆ ಯಾವುದೇ ಮಾರ್ಗದಲ್ಲಿ ಸಿಇಸಿ ಅವರನ್ನು ಹುದ್ದೆಯಿಂದ ತೆಗೆಯಲು ಅಥವಾ ತಡೆಯಲು ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ತಿಳಿಸಿದೆ. ಇವಿಎಂ ಕುರಿತ ಅರ್ಜಿಗಳನ್ನು ಕೋರ್ಟ್ ಈ ಹಿಂದೆಯೇ ತಿರಸ್ಕರಿಸಿದ್ದನ್ನು ನೆನಪಿಸಿದ ಆಯೋಗ, ದಸರಾ ರಜೆ ಮುಗಿದ ನಂತರ ಪ್ರತಿಯೊಂದು ಅಂಶಕ್ಕೂ ವಿಸ್ತೃತ ಉತ್ತರ ನೀಡುವುದಾಗಿ ತಿಳಿಸಿದೆ, (ಏಜೆನ್ಸೀಸ್​).