ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

ರಾಜ್ಯಗಳಿಗೆ ಅನುದಾನ ನೀಡದೇ ಕೇಂದ್ರ ಕೃತಕ ಆರ್ಥಿಕ ಬಿಕ್ಕಟ್ಟು ಸೃಷ್ಟಿಸುತ್ತಿದೆ: ಸಿಎಂ ಎಂ.ಕೆ.ಸ್ಟಾಲಿನ್ | CM M K Stalin

ಚೆನ್ನೈ: ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನಗಳನ್ನು ಕಡಿತ, ಹಣವನ್ನು ಬಿಡುಗಡೆ ಮಾಡದಿರುವ ಮೂಲಕ ಹಾಗೂ ರಾಜ್ಯದ ತೆರಿಗೆ ಆದಾಯವನ್ನು ಕಡಿಮೆ ಮಾಡ್ತಿರುವ ಜಿಎಸ್​ಟಿ ಸಂಬಂಧಿತ ಬದಲಾವಣೆಗಳಿಂದ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೃತಕ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್(CM M K Stalin) ಆರೋಪಿಸಿದ್ದಾರೆ.
ತಮಿಳುನಾಡು ರಾಜ್ಯ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಂಘಗಳ ಒಕ್ಕೂಟವಾದ ಜಾಕ್ಟೋ-ಜಿಯೊ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ನಾವು ಸರ್ಕಾರಿ ನೌಕರರನ್ನು ರಾಜಕೀಯವಾಗಿ ಮಾತ್ರವಲ್ಲದೆ ಆಡಳಿತಾತ್ಮಕವಾಗಿಯೂ ನಿರ್ವಹಿಸುವ ಮೂಲಕ ಅವರ ಬೇಡಿಕೆಗಳನ್ನು ಈಡೇರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಎಐಎಡಿಎಂಕೆ ಆಡಳಿತಾವಧಿಯಲ್ಲಿ ಹಳೆಯ ಪಿಂಚಣಿ ಯೋಜನೆ ತೆಗೆದು ಹಾಕಲಾಗಿತ್ತು. ಕಳೆದ 22 ವರ್ಷಗಳಿಂದ ನಿರಂತರ ಬೇಡಿಕೆಯಿತ್ತು. ಇಂದು ಡಿಎಂಕೆ ಸರ್ಕಾರದ ಸಹಾನುಭೂತಿ ಸರ್ಕಾರವಾಗಿದೆ. ಈ ಬಗ್ಗೆ ಸಮಿತಿ ರಚಿಸಿ, ಆ ಸಮಿತಿಯ ವರದಿಯನ್ನು ಕ್ಯಾಬಿನೆಟ್​ನಲ್ಲಿ ಚರ್ಚಿಸಲಾಗಿತ್ತು. ನೌಕರರ ಕಲ್ಯಾಣ, ಹಣಕಾಸಿನ ವಾಸ್ತವತೆಗಳು ಹಾಗೂ ಭವಿಷ್ಯದ ಬಾಧ್ಯತೆಗಳನ್ನು ಪರಿಗಣಿಸಿದ ಬಳಿಕ ಟಿಎಪಿಎಸ್ ಅನ್ನು ಮರಳಿ ಜಾರಿಗೆ ತರಲಾಯಿತು ಎಂದು ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರವು ಪಿಂಚಣಿ ನಿಧಿಗೆ ₹13,000 ಕೋಟಿ ಮತ್ತು ನಂತರ ವಾರ್ಷಿಕವಾಗಿ ₹11,000 ಕೋಟಿ ಕೊಡುಗೆ ನೀಡುತ್ತಿದೆ. ತೀವ್ರ ಆರ್ಥಿಕ ಒತ್ತಡಗಳ ಹೊರತಾಗಿಯೂ, ಸರ್ಕಾರಿ ನೌಕರರು ಮತ್ತು ಶಿಕ್ಷಕರ ಕಲ್ಯಾಣವನ್ನು ರಕ್ಷಿಸಲು ತಮಿಳುನಾಡು ಸರ್ಕಾರವು ಈ ಎಲ್ಲಾ ವೆಚ್ಚಗಳನ್ನು ಭರಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ದ್ರಾವಿಡ ಮಾದರಿ 2.0 ಸರ್ಕಾರದ ಅಡಿಯಲ್ಲಿ ನಿಮ್ಮ ಬೇಡಿಕೆಗಳು, ಕನಸುಗಳು ಮತ್ತು ನಿರೀಕ್ಷೆಗಳು ಖಂಡಿತವಾಗಿಯೂ ಈಡೇರುತ್ತವೆ. ನಾವು ನಿಮ್ಮೊಂದಿಗೆ ನಿಂತಂತೆ ನೀವು ನಮ್ಮೊಂದಿಗೆ ನಿಲ್ಲುತ್ತೀರಿ. ನಾವು ಒಟ್ಟಾಗಿ ಗೆಲ್ಲೋಣ ಎಂದಿದ್ದಾರೆ (ಏಜೆನ್ಸೀಸ್).