ಅಸ್ಸಾಂನಲ್ಲಿ ಅಖಾಡ ರೆಡಿ, ಶತ್ರುಗಳಿಗೆ ನಡುಕ! ಹಿಮಂತ ಬಿಸ್ವ ಶರ್ಮಾ ಬಿಚ್ಚಿಟ್ಟ ಆ ಸೀಕ್ರೆಟ್ ಡೀಲ್ ಏನು..? 
ದೇಶ

ಅಸ್ಸಾಂನಲ್ಲಿ ಅಖಾಡ ರೆಡಿ, ಶತ್ರುಗಳಿಗೆ ನಡುಕ! ಹಿಮಂತ ಬಿಸ್ವ ಶರ್ಮಾ ಬಿಚ್ಚಿಟ್ಟ ಆ ಸೀಕ್ರೆಟ್ ಡೀಲ್ ಏನು..? Himanta Biswa Sharma

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆಯ ರಣಕಣ ಸಜ್ಜಾಗುತ್ತಿದ್ದು, ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟವು ತನ್ನ ಸೀಟು ಹಂಚಿಕೆಯ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಭಾನುವಾರ ರಾಜ್ಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sharma), ಮೈತ್ರಿಕೂಟದ ಸೀಟು ಹಂಚಿಕೆ ಈಗ ಡನ್ ಡೀಲ್ ಎಂದಿದ್ದಾರೆ. ಯಾರು ಎಲ್ಲಿ ಸ್ಪರ್ಧಿಸಬೇಕು ಎಂಬುದು ಅಂತಿಮವಾಗಿದೆ ಎಂದು ಘೋಷಿಸುವ ಮೂಲಕ ವಿರೋಧ ಪಕ್ಷಗಳಿಗೆ ಶಾಕ್ ನೀಡಿದ್ದಾರೆ.

ಮೈತ್ರಿಕೂಟದ ಬಲ ಮತ್ತು ಸೀಟು ಹಂಚಿಕೆ

ಅಸ್ಸಾಂನಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿ ಅಸೋಮ್ ಗಣ ಪರಿಷತ್ (AGP), ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL), ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (BPF) ಪ್ರಮುಖ ಪಾಲುದಾರರಾಗಿದ್ದಾರೆ. ಇವರ ಜೊತೆಗೆ ರಾಭಾ ಹಸೋಂಗ್ ಜೌಥಾ ಸಂಗ್ರಾಮ ಸಮಿತಿ (RHJSS) ಮತ್ತು ಜನಶಕ್ತಿ ಪಾರ್ಟಿ (JP) ಕೂಡ ಎನ್‌ಡಿಎ ಭಾಗವಾಗಿವೆ.
ಈ ಬಗ್ಗೆ ಮಾತನಾಡಿರುವ ಆಸ್ಸಾಂ ಸಿಎಂ, ನಮ್ಮ ಮೈತ್ರಿಕೂಟವು ಸಂಪೂರ್ಣವಾಗಿದೆ. ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲಗಳಿಲ್ಲ. ರಾಜ್ಯ ನಾಯಕತ್ವವು ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಹಸ್ತಾಂತರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆ: ಹೊಸ ಸವಾಲುಗಳು

2026ರ ಅಸ್ಸಾಂ ಚುನಾವಣೆ ವಿಶೇಷವಾದುದು. ಏಕೆಂದರೆ, 2023ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. 126 ಸದಸ್ಯ ಬಲದ ವಿಧಾನಸಭೆಯಲ್ಲಿ ಹಲವು ಕ್ಷೇತ್ರಗಳ ಭೌಗೋಳಿಕ ಗಡಿಗಳು ಬದಲಾಗಿವೆ. ಕೆಲವು ಮೀಸಲಾತಿ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿ ಮಾರ್ಪಟ್ಟಿದ್ದರೆ, ಇನ್ನು ಕೆಲವು ಸಾಮಾನ್ಯ ಕ್ಷೇತ್ರಗಳು ಮೀಸಲಾತಿ ಪಟ್ಟಿಗೆ ಸೇರಿವೆ. ಈ ಬದಲಾವಣೆಯು ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಹೊಸ ಲೆಕ್ಕಾಚಾರಗಳನ್ನು ಅನಿವಾರ್ಯವಾಗಿಸಿದೆ.

ಪ್ರಸ್ತುತ ಬಲಾಬಲ

ಆಡಳಿತ ಪಕ್ಷ (NDA): ಬಿಜೆಪಿ (64), ಎಜಿಪಿ (9), ಯುಪಿಪಿಎಲ್ (7), ಬಿಪಿಎಫ್ (3).
ವಿರೋಧ ಪಕ್ಷ: ಕಾಂಗ್ರೆಸ್ (26), ಎಐಯುಡಿಎಫ್ (15), ಸಿಪಿಐ(ಎಂ) (1).
ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಬಿಜೆಪಿಯು ಫೆಬ್ರವರಿ 15ರ ಒಳಗೇ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸುವ ಗುರಿ ಹೊಂದಿತ್ತು. ಈಗ ಆ ಗುರಿಯನ್ನು ತಲುಪಿರುವುದಾಗಿ ಸಿಎಂ ಹೇಳಿದ್ದಾರೆ. ಅಸ್ಸಾಂನಲ್ಲಿ ಅಭಿವೃದ್ಧಿಯ ಮಂತ್ರದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲು ಎನ್‌ಡಿಎ ಸರ್ವಸನ್ನದ್ಧವಾಗಿದೆ,(ಏಜೆನ್ಸೀಸ್).