Trump 
ದೇಶ

"ಭಾರತಕ್ಕೆ ಧನ್ಯವಾದ": ಹೈದರಾಬಾದ್‌ನ ರಸ್ತೆಗೆ ತನ್ನ ಹೆಸರಿಟ್ಟಿದ್ದಕ್ಕೆ ಫಿದಾ ಆದ ಟ್ರಂಪ್!

ಹೈದರಾಬಾದ್: ತೆಲಂಗಾಣ ಸರ್ಕಾರವು ಹೈದರಾಬಾದ್‌ನ ಅಮೆರಿಕ ದೂತಾವಾಸದ ಸಮೀಪದ ರಸ್ತೆಗೆ 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump) ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ. "ಈ ರೀತಿಯ ಗೌರವ ಪಡೆದ ಮೊದಲ ಅಮೆರಿಕ ಅಧ್ಯಕ್ಷ ನಾನು" ಎಂದು ಟ್ರಂಪ್ ಹೇಳಿದ್ದಾರೆ.
ಟ್ರುತ್ ಸೋಷಿಯಲ್‌ನಲ್ಲಿ ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ತೆಲಂಗಾಣ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಹಾಗೂ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಜಿಯೊ ಗೋರ್ ಅವರು ರಸ್ತೆ ನಾಮಫಲಕ ಅನಾವರಣಗೊಳಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.

'ಭಾರತಕ್ಕೆ ಧನ್ಯವಾದ'

"ಹೈದರಾಬಾದ್‌ನ ಹೊಸ ಡೊನಾಲ್ಡ್ ಟ್ರಂಪ್ ಅವೆನ್ಯೂ. ಈ ರೀತಿಯ ಗೌರವ ಪಡೆದ ಮೊದಲ ಅಮೆರಿಕ ಅಧ್ಯಕ್ಷ ನಾನು. ಭಾರತಕ್ಕೆ ಧನ್ಯವಾದಗಳು," ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ℹ️

ಅಮೆರಿಕ ದೂತಾವಾಸದ ಪಕ್ಕದಲ್ಲೇ ರಸ್ತೆ

'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ಹೆಸರಿಸಲಾದ ರಸ್ತೆ ಹೈದರಾಬಾದ್‌ನ ಅಮೆರಿಕ ದೂತಾವಾಸದ ಪಕ್ಕದಲ್ಲಿದೆ. ಅಲ್ಲದೆ ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್ ಸೇರಿದಂತೆ ಹಲವು ಪ್ರಮುಖ ಅಮೆರಿಕದ ತಂತ್ರಜ್ಞಾನ ಕಂಪನಿಗಳ ಕಚೇರಿಗಳೂ ಇದೇ ಪ್ರದೇಶದಲ್ಲಿವೆ.
ತೆಲಂಗಾಣ ಸರ್ಕಾರದ ಸ್ಪಷ್ಟನೆ
ಈ ರಸ್ತೆ ನಾಮಕರಣವು ಅಮೆರಿಕಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ಹಾಗೂ ಭಾರತ-ಅಮೆರಿಕ ಸಂಬಂಧಗಳಲ್ಲಿ ಹೈದರಾಬಾದ್‌ನ ಹೆಚ್ಚುತ್ತಿರುವ ಮಹತ್ವವನ್ನು ಗುರುತಿಸುವ ಪ್ರಯತ್ನವಾಗಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ. ಈ ಬೆಳವಣಿಗೆ ಭಾರತ-ಅಮೆರಿಕ ಸಂಬಂಧಗಳ ನಡುವಿನ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಗಮನ ಸೆಳೆದಿದೆ,(ಏಜೆನ್ಸೀಸ್​).