ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಪ್ರಮಾಣವಚನ
- ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಪ್ರಮಾಣವಚನ
- ನೆಚ್ಚಿನ ನಟನನ್ನು ನೋಡಲು 650 ಕಿ.ಮೀ ನಡೆದು ಬಂದ ಅಭಿಮಾನಿ ದಂಪತಿ
- ಕೇರಳದಿಂದ ಜರ್ನಿ ಆರಂಭಿಸಿ ಇಂದು (ಮೇ.10) ತಮಿಳುನಾಡನ್ನು ತಲುಪಿದ ಕಪಲ್ಸ್
ಚೆನ್ನೈ: ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿ, ಮಿತ್ರ ಪಕ್ಷಗಳ ಬೆಂಬಲದಿಂದ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಬಹುಮತವನ್ನು ಸಾಬೀತು ಪಡಿಸಿ, ಇಂದು (ಮೇ.10) ದಳಪತಿ ವಿಜಯ್ (Thalapathy Vijay) ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಿಎಂ ನೋಡಲು 650 ಕಿ.ಮೀ ನಡೆದ ದಂಪತಿ!
ದಳಪತಿ ವಿಜಯ್ ಅವರ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅತಿಹೆಚ್ಚು ಸ್ಥಾನವನ್ನು ಗೆದ್ದಿರುವ ಪಕ್ಷವಾಗಿ ಹೊರಹೊಮ್ಮಿತು. ಈ ವಿಷಯ ತಿಳಿದ ಕೇರಳದ ಕೆ.ಎಸ್.ಮೊಹಮ್ಮದ್ ರಫಿ ಹಾಗೂ ಆತನ ಪತ್ನಿ ಸಿ.ಪಿ ಉಮ್ಮು ಶಹನಮೋಲ್ ಗುರುವಾರ (ಮೇ.7) ತಮ್ಮ ಊರಿನಿಂದ ಚೆನ್ನೈಗೆ ಪಾದಯಾತ್ರೆ ಆರಂಭಸಿದ್ದಾರೆ.
ತಮ್ಮ ನೆಚ್ಚಿನ ನಟ ರಾಜ್ಯದ ಮುಖ್ಯಮಂತ್ರಿಯಾಗುವುದನ್ನು ನೋಡಲು ತಾವು ಬಂದಿರುವುದಾಗಿ ಈ ದಂಪತಿ ತಿಳಿಸಿದ್ದಾರೆ. ಈ ಜೋಡಿ ಹೆಗಲಿಗೆ ಬ್ಯಾಗ್ನ್ನು ಏರಿಸಿಕೊಂಡು, ಬಿರು ಬಿಸಿಲಿಗೆ ಅಂಜದೆ, ಟೆಂಟ್ನಲ್ಲಿ ವಾಸಮಾಡುತ್ತಾ ಇಂದು (ಮೇ.10) ತಮಿಳುನಾಡನ್ನು ತಲುಪಿದ್ದಾರೆ.
ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ನಲ್ಲಿ ವ್ಲಾಗ್ ಮೂಲಕ ತಮ್ಮ ಪ್ರಯಾಣದ ವಿಡಿಯೋವನ್ನು ಹಂಚಿಕೊಂಡಿರುವ ಈ ಜೋಡಿ, ತಮ್ಮ ನೆಚ್ಚಿನ ನಟ ರಾಜಕೀಯದಲ್ಲಿ ಯಶಸ್ಸು ಕಂಡಿರುವುದು ಸಂತಸ ನೀಡಿದ್ದು, ತಮಿಳುನಾಡನ್ನು ತಲುಪಿ ವಿಜಯ್ಗೆ ಶುಭ ಕೋರುವುದು ನಮ್ಮ ಗುರಿ ಎಂದು ಅವರು ತಿಳಿಸಿದ್ದಾರೆ.
ವಿಡಿಯೋ ವೈರಲ್!
ಇವರ ಈ ವ್ಲಾಗಿಂಗ್ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟ-ರಾಜಕಾರಣಿ ದಳಪತಿ ವಿಜಯ್ ಅಭಿಮಾನಿಗಳು ಈ ದಂಪತಿಗಳ ವ್ಲಾಗ್ನ ವಿಡಿಯೋಗಳನ್ನು ಎಲ್ಲೆಡೆ ಹಂಚಿಕೊಂಡಿದ್ದಾರೆ. ಅಂತಯೇ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ನೀವು ನಿಜವಾದ ದಳಪತಿ ಅಭಿಮಾನಿಗಳು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಚಪ್ಪಲಿ ಬದಲು ಶೂ ಹಾಕಿಕೊಳ್ಳಿ, ಇಲ್ಲದಿದ್ದರೆ ಕಾಲಿಗೆ ಸಮಸ್ಯೆಯಾಗಬಹುದು ಎಂದು ಹೇಳಿದ್ದಾರೆ. ಅಂತು ಇವರು ತಮಿಳುನಾಡನ್ನು ತಲುಪಿದ್ದಾರೆ, ಯಾರಾದರೂ ಇವರನ್ನು ವಿಜಯ್ಗೆ ಭೇಟಿ ಮಾಡಿಸಿ ಎನ್ನುವುದು ನೆಟ್ಟಿಗರ ವಿನಂತಿಯಾಗಿದೆ, (ಏಜನ್ಸೀಸ್).