ಚೆನ್ನೈ: ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ಮತ್ತು ರಾಜಕಾರಣಿ ದಳಪತಿ ವಿಜಯ್(Thalapathy Vijay) ನೇತೃತ್ವದ ಟಿವಿಕೆ ಎರಡನೇ ಸ್ಥಾನ ಪಡೆದು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಕರೂರ್ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಹೇಳಿದ್ದಾರೆ.
ಕರೂರ್ನಲ್ಲಿ ಶುಕ್ರವಾರ(ಮಾ. 06) ಮಾತನಾಡಿರುವ ಅವರು, ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಎಐಎಡಿಎಂಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ನನ್ನ ಪ್ರಕಾರ ವಿಜಯ್ಗೆ ಯುವಕರ ಬೆಂಬಲ ಬಹಳಷ್ಟು ಇದೆ. ಅವರ ಪಕ್ಷ ಎರಡನೇ ಸ್ಥಾನಕ್ಕೆ ಬಂದು ಅವರು ವಿಪಕ್ಷ ನಾಯಕರಾಗುವ ಸಾಧ್ಯತೆ ಖಂಡಿತವಾಗಿಯೂ ಇದೆ ಎಂದಿದ್ದಾರೆ.
ಪ್ರಸ್ತುತ ಪ್ರಮುಖ ವಿಪಕ್ಷವಾಗಿರುವ ಎಐಎಡಿಎಂಕೆ ಮೂರನೇ ಸ್ಥಾನಕ್ಕೆ ಹೋಗುತ್ತದೆ. ಇದು ತಮಿಳುನಾಡಿನಲ್ಲಿ ಆ ಪಕ್ಷ ಎದುರಿಸುವ ಕೊನೆಯ ಚುನಾವಣೆಯಾಗಲಿದೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡವರಿಗಿಂತ ಹೊಸಬರಿಗೆ ಚುನಾವಣಾ ಅಂಕಗಣಿತ ಅನುಕೂಲಕರವಾಗಿರುತ್ತದೆ. ತಮಿಳುನಾಡಿನ ಜನರು ಬಿಜೆಪಿಯನ್ನು ಒಳಗೊಂಡ ಮೈತ್ರಿಕೂಟಕ್ಕೆ ಎಂದಿಗೂ ಮತ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಬಗ್ಗೆ ಮಾತನಾಡಿರುವ ಅವರು, ಒಕ್ಕೂಟದ ಬಲವನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಪಕ್ಷವೂ ಸಹ ಕೆಲವು ತ್ಯಾಗಗಳನ್ನು ಮಾಡಬೇಕಾಗಿತ್ತು ಎಂದು ನಾನು ಭಾವಿಸುತ್ತೇನೆ. ಅದನ್ನು ಮಾಡಿದ್ದೇವೆ. ಜವಾಬ್ದಾರಿಯುತ ಪಕ್ಷವಾಗಿ ಕೆಲವೊಮ್ಮೆ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಮಿತ್ರಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್ ಬುಧವಾರ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಕಾಂಗ್ರೆಸ್‌ಗೆ 28 ವಿಧಾನಸಭಾ ಸ್ಥಾನಗಳನ್ನು ಮತ್ತು ಒಂದು ರಾಜ್ಯಸಭಾ ಸ್ಥಾನವನ್ನು ಡಿಎಂಕೆ ಹಂಚಿಕೆ ಮಾಡಿದೆ (ಏಜೆನ್ಸೀಸ್).