ಸಾಂದರ್ಭಿಕ ಚಿತ್ರ 
ದೇಶ

ಉಗ್ರ ಕೃತ್ಯಕ್ಕೆ ಸಂಚು; ಪಾಕ್​ ಐಎಸ್​ಐ ಮತ್ತು ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ; 9 ಆರೋಪಿಗಳನ್ನು ಬಂಧಿಸಿದ ಪೊಲೀಸರು | Terror plot

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು(Terror plot) ರೂಪಿಸುತ್ತಿದ್ದ, ಪಾಕ್​ ಬೇಹುಗಾರಿಕೆ ಸಂಸ್ಥೆ ಐಎಸ್​ಐ ಹಾಗೂ ಉಗ್ರ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದ 9 ಆರೋಪಿಗಳನ್ನು ದೆಹಲಿ ವಿಶೇಷ ಘಟಕ ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಮೇ 30) ವರದಿಯಾಗಿದೆ.
ಆರೋಪಿಗಳು ದೆಹಲಿ, ಮುಂಬೈ ಮತ್ತು ಪಂಜಾಬ್‌ನವರು ಎಂದು ಹೇಳಲಾಗಿದ್ದು, ಅವರಲ್ಲಿ ಕೆಲವರು ವಿದೇಶಿಯರೂ ಇದ್ದಾರೆ ಎನ್ನಲಾಗಿದೆ. ಜೊತೆಗೆ ಪೊಲೀಸರು ಅವರಿಂದ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಆರೋಪಿಗಳು ಪರಮಾಣು ವಿದ್ಯುತ್ ಸ್ಥಾವರಗಳು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಸಂಚು ರೂಪಿಸಿದ್ದರು. ಜೊತೆಗೆ ಭದ್ರತಾ ಪಡೆಗಳನ್ನು ಗುರಿಯಾಗಿಸಿದ್ದರು ಎಂದು ಹೇಳಿದ್ದಾರೆ.
ಈ ಪಿತೂರಿಯಲ್ಲಿ ಪಾಕಿಸ್ತಾನದ ಪಾತ್ರದ ವ್ಯಾಪ್ತಿಯನ್ನು ತನಿಖೆ ಮಾಡುತ್ತಿದ್ದೇವೆ. ಈ ಗುಂಪಿಗೆ ಯಾರು ಹಣಕಾಸು ಒದಗಿಸುತ್ತಿದ್ದಾರೆಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದು, ಈ ಗುಂಪಿನ ವಿದೇಶಿ ನಿರ್ವಾಹಕರು ಯಾರು? ಪತ್ತೆ ಹಚ್ಚಲು ವಿಚಾರಣೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).