ಭೋಪಾಲ್: ಮಧ್ಯಪ್ರದೇಶದ ಹೇತಾಂಪುರ್ ರೈಲು ನಿಲ್ದಾಣದ ಬಳಿ ಭಾನುವಾರ(ಜೂ. 14) ಭೀಕರ ರೈಲು ಅಪಘಾತ(Train accident) ಸಂಭವಿಸಿದ್ದು, ರೈಲು ಇಳಿದು ಹಳಿ ಮೇಲೆ ನಿಂತವರಿಗೆ ಪಾತಾಳಕೋಟ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಮಗು ಮತ್ತು ಮೂವರು ಮಹಿಳೆಯರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಖಜುರಾಹೊ-ಉದಯಪುರ ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಉಹಾಪೋಹ ಹರಡಿದ ಹಿನ್ನೆಲೆ ಭಯಭೀತರಾದ ಕೆಲವು ಪ್ರಯಾಣಿಕರು ಸರಪಳಿ ಎಳೆದಿದ್ದರಿಂದ ರೈಲು ನಿಂತಿತು. ಬಳಿಕ ಅನೇಕ ಪ್ರಯಾಣಿಕರು ಬೋಗಿಗಳಿಂದ ಹೊರಬಂದು ಪಕ್ಕದ ಹಳಿಗಳ ಮೇಲೆ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಪಾತಾಳಕೋಟ್ ಎಕ್ಸ್‌ಪ್ರೆಸ್ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ರೈಲ್ವೆ ಪೊಲೀಸರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಪಘಾತದ ಬಳಿಕ ರೈಲ್ವೆ ಹಳಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎನ್ನಲಾಗಿದೆ.
ಇನ್ನೂ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಉದಯಪುರ ಸಿಟಿ ಎಕ್ಸ್‌ಪ್ರೆಸ್‌ಗೆ ನಿಜವಾಗಿಯೂ ಬೆಂಕಿ ಹೊತ್ತಿಕೊಂಡಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ರೈಲ್ವೆ ಇಲಾಖೆ ತನಿಖೆಯನ್ನು ಪ್ರಾರಂಭಿಸಿದೆ. ಜೊತೆಗೆ ಪೊಲೀಸರು ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).