ವ್ಯವಸ್ಥೆಯ ವಿರುದ್ಧ ಮಾಜಿ ಸಂಸದೆ ಪ್ರಿಯಾಂಕಾ ಚತುರ್ವೇದಿ ತೀವ್ರ ಆಕ್ರೋಶ 
ದೇಶ

ಲಖನೌನಲ್ಲಿ ಭೀಕರ ಅಗ್ನಿ ದುರಂತ: 15 ಜನ ಬಲಿ; ಘಟನೆ ಆಗುತ್ತೆ, ಪರಿಹಾರ ಸಿಗುತ್ತೆ, ಮುಂದೇನು? ಮಾಜಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಆಕ್ರೋಶ! Priyanka Chaturvedi on Lucknow Fire Tragedy

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶದ ಲಖನೌನಲ್ಲಿ ಮೂರು ಮಹಡಿಯ ವಾಣಿಜ್ಯ ಸಂಕೀರ್ಣದಲ್ಲಿ ಭೀಕರ ಅಗ್ನಿ ಅವಘಡ
  • ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಬೆಂಕಿ ಕಾಣಿಸಿಕೊಂಡು 15 ಮಂದಿ ಬಲಿ
  • ವ್ಯವಸ್ಥೆಯ ವಿರುದ್ಧ ಮಾಜಿ ಸಂಸದೆ ಪ್ರಿಯಾಂಕಾ ಚತುರ್ವೇದಿ ತೀವ್ರ ಆಕ್ರೋಶ
ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ ಹಿನ್ನಲೆ ಸುಮಾರು 15 ಜನ ಮೃತಪಟ್ಟಿರುವ ಕುರಿತು ವರದಿಯಾಗಿದೆ.
ಉಷಾ ಮೆಹ್ತಾ ಮಾರ್ಗದಲ್ಲಿರುವ ಮೂರು ಮಹಡಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಜೀವ ಉಳಿಸಿಕೊಳ್ಳಲು ಅಲ್ಲಿದ್ದ ಜನರು ಕಟ್ಟಡದಿಂದ ಜಿಗಿದಿದ್ದಾರೆ.
ಕಟ್ಟಡದಲ್ಲಿ ಸಿಲುಕಿಂಡಿರುವ ಬಹುತೇಕರು ವಿದ್ಯಾರ್ಥಿಗಳಾಗಿದ್ದು, ಈ ದುರಂತಕ್ಕೆ ಶಿವಸೇನಾ (ಉದ್ಧವ್​ ಬಣ) ನಾಯಕಿ, ಮಾಜಿ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi on Lucknow Fire Tragedy) ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತನಿಖೆ, ಪರಿಹಾರ ಮುಂದೇನು?

ಲಖನೌನಲ್ಲಿ ಸಂಭವಿಸಿರುವ ಅಗ್ನಿ ದುರಂತದ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ, ಇನ್ನೊಂದು ದಿನ, ಮತ್ತೊಂದು ಅಗ್ನಿ ದುರಂತ. ಈ ಘಟನೆಗೂ ಮುನ್ನ ಮಾಳವೀಯ ನಗರದಲ್ಲಿ ಅಗ್ನಿ ದುರಂತವಾಗಿತ್ತು, ಈಗ ಇಲ್ಲಿ. ಈ ರೀತಿ ಘಟನೆಯಾದ ತರುವಾಯ ತನಿಖೆ ನಡೆಸಲಾಗುತ್ತೆ ಆಮೇಲೆ ಪರಿಹಾರ ವಿತರಣೆ, ನಂತರ ಈ ಘಟನೆಯನ್ನು ಎಲ್ಲರೂ ಮರೆತು ಬಿಡುತ್ತಾರೆಂದು ಮಾಜಿ ಸಂಸದೆ ಬೇಸರ ಹೊರಹಾಕಿದ್ದಾರೆ.
ಶಾರ್ಟ್​ ಸರ್ಕ್ಯೂಟ್‌ ತಂದ ಆಪತ್ತು!
ಮೊದಲಿಗೆ ಈ ಕಟ್ಟಡದಲ್ಲಿ ಕೋಚಿಂಗ್ ಸೆಂಟರ್ ಇದೆ ಎಂದು ವರದಿಯಾಗಿತ್ತಾದರೂ, ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಸ್ಪಷ್ಟಪಡಿಸಿದ್ದಾರೆ. ಕಟ್ಟಡದ ನೆಲಮಹಡಿಯಲ್ಲಿ ಸಾಕುಪ್ರಾಣಿಗಳ ಮಾರಾಟ ಮಳಿಗೆ ಇದ್ದು, ಮೇಲಿನ ಮಹಡಿಗಳಲ್ಲಿ ಅನಿಮೇಷನ್ ಮತ್ತು ಗೇಮಿಂಗ್ ತರಬೇತಿ ಕೇಂದ್ರವಿತ್ತು.
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನೆಲಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಅದೃಷ್ಟವಶಾತ್ ರಕ್ಷಣಾ ಕಾರ್ಯಾಚರಣೆಯ ವೇಳೆ ಪೆಟ್ ಶಾಪ್‌ನಲ್ಲಿದ್ದ ಮೂಕ ಪ್ರಾಣಿಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಘಟನೆಯ ತೀವ್ರತೆ ಅರಿತು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ 14ಕ್ಕೂ ಹೆಚ್ಚು ವಾಹನಗಳು, ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ಮತ್ತು ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಕಟ್ಟಡದಿಂದ ಬಿದ್ದು ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ತಿಳಿಸಿದ್ದಾರೆ.

ಪ್ರಧಾನಿ ಮೋದಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಲಖನೌ ಅಗ್ನಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಲಖನೌದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಮೂಲ್ಯ ಜೀವಗಳು ಬಲಿಯಾಗಿರುವುದು ಅತ್ಯಂತ ನೋವು ತಂದಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.
ಪ್ರವಾಸ ಮೊಟಕುಗೊಳಿಸಿದ ಸಿಎಂ ಯೋಗಿ!
ಅಲಿಗಢದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಲಖನೌಗೆ ಮರಳಿದ್ದಾರೆ. ವೇದಿಕೆಯ ಮೇಲೆಯೇ ಭಾಷಣ ಮಾಡುವಾಗ ಭಾವುಕರಾದ ಸಿಎಂ, ನಾನು ಇಂದು ಅಲಿಗಢದಲ್ಲೇ ಇರಬೇಕೆಂದುಕೊಂಡಿದ್ದೆ.
ಆದರೆ ಲಕ್ನೋದಲ್ಲಿ ನಡೆದ ಅಗ್ನಿ ದುರಂತದಲ್ಲಿ ನಮ್ಮ ಕೆಲವು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ತುಂಬಾ ಮನಸ್ಸಿಗೆ ನೋವಾಗಿದೆ. ಹಾಗಾಗಿ ನಾನು ತಕ್ಷಣ ಲಕ್ನೋಗೆ ಮರಳುತ್ತಿದ್ದೇನೆ ಎಂದಿದ್ದಾರೆ, (ಏಜನ್ಸೀಸ್​).