16 ನಿಲ್ದಾಣಗಳಲ್ಲಿ ಮೆಟ್ರೋ ಸೇವೆ ಸ್ಥಗಿತ
- ದೆಹಲಿಯಲ್ಲಿ NEET ಅಕ್ರಮ ವಿರೋಧಿ ಪ್ರತಿಭಟನೆ ತೀವ್ರ!
- 16 ಮೆಟ್ರೋ ನಿಲ್ದಾಣಗಳು ಸ್ಥಗಿತ, RAF ಪಡೆ ನಿಯೋಜನೆ
- ಸಾರ್ವಜನಿಕ ಆಸ್ತಿ ನಾಶ ಹಿನ್ನಲೆ ಕ್ರಮ
ನವದೆಹಲಿ: ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನೀಟ್ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ.
ಸೋಮವಾರ (ಜು.20) ದಿಂದ ಆರಂಭವಾಗಿರುವ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನಲೆ ದೆಹಲಿಯಲ್ಲಿ ಸುಮಾರು 16 ನಿಲ್ದಾಣಗಳಲ್ಲಿ ಮೆಟ್ರೋ ಸೇವೆಗಳನ್ನು ನಿಲ್ಲಿಸಲಾಗಿದೆ (Metro Services Suspended) ಎಂದು ತಿಳಿದು ಬಂದಿದೆ.
ಸಾರ್ವಜನಿಕ ಆಸ್ತಿ ನಾಶ ಹಿನ್ನಲೆ ಕ್ರಮ!
ಸೋಮವಾರ ದೆಹಲಿಯಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಯಲ್ಲಿ ಪ್ರತಿಭಟನಾಕಾರರು ನೂರಾರು ಕಡೆಗಳಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ನಾಶ ಪಡಿಸಿದ ಹಿನ್ನಲೆ ಲೋಕ ಕಲ್ಯಾಣ್ ಮಾರ್ಗದಿಂದ ಶಿವಾಜಿ ಸ್ಟೇಡಿಯಂ ವರೆಗಿನ ನಿಲ್ದಾಣಗಳಲ್ಲಿ ಮೆಟ್ರೋ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ದೆಹಲಿ ಮೆಟ್ರೋ ಆಡಳಿತ ತಿಳಿಸಿದೆ.
ಪ್ರತಿಭಟನೆಗೆ ಸೇರುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರು ಹಿನ್ನಲೆ ಮೆಟ್ರೋ ನಿಲ್ದಾಣಗಳ ರಕ್ಷಣೆಗಾಗಿ, ಕೇಂದ್ರ ಮೀಸಲು ಪಡೆ ಹಾಗೂ ತ್ವರಿತ ಕಾರ್ಯ ಪಡೆ (RAF) ಗಳನ್ನು ಸೇವೆ ನಿಲ್ಲಿಸಿರುವ ಮೆಟ್ರೋ ನಿಲ್ದಾಣಗಳಲ್ಲಿ ನಿಯೋಜನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಮುಂದುವರಿದ ಸಿಜೆಪಿ ಹೋರಾಟ!
ಜಂತರ್ ಮಂತರ್ನಲ್ಲಿ ಬೀಡು ಬಿಟ್ಟಿರುವ ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ತಮ್ಮ ಎಂದಿನ ಬೇಡಿಕೆಗಳಾದ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ, ಸೋನಮ್ ವಾಂಗ್ಚುಕ್ ಜೊತೆ ಮಾತುಕತೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಒಂದು ಕೋಟಿ ಪರಿಹಾರವನ್ನು ನೀಡಬೇಕೆಂದು ಕೋರಿದ್ದಾರೆ, (ಏಜನ್ಸೀಸ್).