ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ಹೈದರಾಬಾದ್: ತಂದೆ-ತಾಯಿಯನ್ನು ನೋಡಿಕೊಳ್ಳದೇ ನಿರ್ಲಕ್ಷ್ಯವಹಿಸಿದ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ತೆಲಂಗಾಣ ನೌಕರರ ಹೊಣೆಗಾರಿಕೆ ಮತ್ತು ಪೋಷಕರ ಬೆಂಬಲ ಮೇಲ್ವಿಚಾರಣೆ ಮಸೂದೆ- 2026 ಅನ್ನು ಭಾನುವಾರ(ಮಾ. 29) ತೆಲಂಗಾಣ ವಿಧಾನಸಭೆ ಅಂಗೀಕರಿಸಿದೆ.
ನಿರ್ಲಕ್ಷ್ಯಕ್ಕೊಳಗಾದ ಪೋಷಕರಿಗೆ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿರುವ ಈ ಮಸೂದೆಯಲ್ಲಿ, ನೌಕರರ ವೇತನದ ಶೇ. 15ರಷ್ಟು ಹಣವನ್ನು ಕಡಿತಗೊಳಿಸಿ ತಂದೆ-ತಾಯಿ ಖಾತೆಗೆ ಹಾಕುವ ಬಗ್ಗೆ ಉಲ್ಲೇಖಿಸುತ್ತದೆ.
ಮಸೂದೆ ಅಂಗೀಕರಿಸಿದ ಬಳಿಕ ವಿಧಾನಸಭೆಯಲ್ಲಿ ಮಾತನಾಡಿರುವ ಸಿಎಂ ರೇವಂತ್ ರೆಡ್ಡಿ, ಇದನ್ನು ಸಾಮಾಜಿಕ ಜವಾಬ್ದಾರಿ ಎಂದು ಕರೆದಿದ್ದು, ನಿರ್ಲಕ್ಷ್ಯದ ಪ್ರಕರಣಗಳಲ್ಲಿ ಪೋಷಕರಿಗೆ ಪಾವತಿಸಲು ನೌಕರರ ಒಟ್ಟು ವೇತನದ ಶೇಕಡಾ 15 ರಷ್ಟು ಅಥವಾ 10,000 ರೂಪಾಯಿ, ಇಲ್ಲ ಯಾವುದು ಕಡಿಮೆಯೋ ಅದನ್ನು ಕಡಿತಗೊಳಿಸುವುದನ್ನು ಕಾನೂನು ಕಡ್ಡಾಯಗೊಳಿಸುತ್ತದೆ ಎಂದು ಹೇಳಿದರು.
ನಿರ್ಲಕ್ಷ್ಯ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಹಿರಿಯ ನಾಗರಿಕರ ಘನತೆಯನ್ನು ಪುನಃಸ್ಥಾಪಿಸಲು ಈ ಕಾನೂನು ಪ್ರಯತ್ನಿಸುತ್ತದೆ. ಹಿರಿಯ ನಾಗರಿಕರ ಆಯೋಗದ ಮುಂದೆ ಮೇಲ್ಮನವಿಗಳಿದ್ದು, ಜಿಲ್ಲಾಧಿಕಾರಿಗಳಂತಹ ಅಧಿಕಾರಿಗಳ ಮೂಲಕ ಪೋಷಕರು ಪರಿಹಾರ ಪಡೆಯಬಹುದು ಎಂದು ತಿಳಿಸಿದರು.
ಯಾವುದೇ ಪೋಷಕರು ತಮ್ಮ ಅಂತಿಮ ವರ್ಷಗಳಲ್ಲಿ ಅಸಹಾಯಕರಾಗಿ ಬಿಡಬಾರದು. ಈ ಕ್ರಮವು ಪ್ರತಿಯೊಂದು ಪ್ರಕರಣವನ್ನು ಪರಿಹರಿಸಲು ಸಾಧ್ಯವಾಗದಿದ್ದರೂ ಸಹ ತಡೆಗಟ್ಟುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾಜಿಕ ಮೌಲ್ಯಗಳು ಮತ್ತು ಭೌತಿಕ ಅನ್ವೇಷಣೆಗಳಲ್ಲಿ ಬದಲಾವಣೆಗಳು ಕುಟುಂಬ ಬಂಧಗಳು ದುರ್ಬಲಗೊಳ್ಳಲು ಪ್ರಮುಖ ಕಾರಣಗಳಾಗಿವೆ. ಕಾನೂನಿನನ್ವಯ ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮ ಹೆತ್ತವರ ಕಡೆಗೆ ಸಮಾನ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೆ ಎಂದರು (ಏಜೆನ್ಸೀಸ್).