ಬಿಹಾರ ದರ್ಶನದಲ್ಲಿ ಎಣ್ಣೆ ದರ್ಶನ ಮಾಡಿದ ಗುರುಗಳು 
ದೇಶ

ಪ್ರವಾಸಕ್ಕೆ ಹೋಗಿ ಫುಲ್ ಟೈಟ್ ಆದ ಶಿಕ್ಷಕರು: ಬಿಹಾರ ದರ್ಶನ ದಲ್ಲಿ ಎಣ್ಣೆ ದರ್ಶನ ಮಾಡಿ ಜೈಲು ಪಾಲಾದ ಗುರುಗಳು! Teachers Drink Liquor

ಪ್ರಮುಖ ಮುಖ್ಯಾಂಶಗಳು

  • ಪ್ರವಾಸದಲ್ಲಿ ಮಕ್ಕಳ ಮುಂದೆ ಸರಾಯಿ ಸೇವಿಸಿದ ಶಿಕ್ಷಕರು
  • ಬಿಹಾರ ದರ್ಶನದಲ್ಲಿ ಎಣ್ಣೆ ದರ್ಶನ ಮಾಡಿದ ಗುರುಗಳು
  • ಪಾನ ಮತ್ತರಾದ ಐದು ಶಿಕ್ಷಕರು ಪೊಲೀಸರ ವಶಕ್ಕೆ
ಬಿಹಾರ: ಮಕ್ಕಳಿಗೆ ಸರಿಯಾದ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ಮಾಡಿಸುವವರೆಂದರೆ ಅವರು ಗುರುಗಳು. ಆದರೆ ಈ ಗುರುಗಳೇ ತಪ್ಪು ದಾರಿ ಹಿಡಿದ ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಮುಖ್ಯಮಂತ್ರಿಗಳ ಬಿಹಾರ ದರ್ಶನ ಯೋಜನೆಯಡಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಐವರು ಶಿಕ್ಷಕರು, ಅಲ್ಲಿ ಮಾಡಬಾರದ್ದನ್ನು ಮಾಡಿ ಈಗ ಜೈಲು ಪಾಲಾಗಿದ್ದಾರೆ. ಮಕ್ಕಳ ಎದುರೇ ಮದ್ಯ ಸೇವಿಸಿ (Teachers Drink Liquor) ಮೋಜು ಮಾಡಿದ ಈ ಮಹಾನ್ ಗುರುಗಳ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ನಡೆದಿದ್ದೇನು?

ಬಿಹಾರ ಸರ್ಕಾರದ ಬಿಹಾರ ದರ್ಶನ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆಂದು ನೇಪಾಳಕ್ಕೆ ಕರೆದೊಯ್ಯಲಾಗಿತ್ತು. ಪ್ರವಾಸ ಮುಗಿಸಿ ಸುಪೌಲ್ ಜಿಲ್ಲೆಯ ಭಾರತ-ನೇಪಾಳ ಗಡಿಯ ಮೂಲಕ ಮರಳಿ ಬರುವಾಗ ಭೀಮನಗರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿನ ಶಿಕ್ಷಕರ ನಡವಳಿಕೆ ಕಂಡು ಪೊಲೀಸರಿಗೆ ಅನುಮಾನ ಬಂದಿದೆ.
ತಕ್ಷಣವೇ ಪೊಲೀಸರು ಉಸಿರು ವಿಶ್ಲೇಷಕ ಯಂತ್ರದ (Breathalyzer) ಮೂಲಕ ಪರೀಕ್ಷೆ ನಡೆಸಿದಾಗ, ಐವರು ಶಿಕ್ಷಕರು ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಬಿಹಾರದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ (Liquor Ban), ಆದರೂ ಕಾನೂನು ಪಾಲಿಸಬೇಕಾದ ಶಿಕ್ಷಕರೇ ಹೀಗೆ ಮದ್ಯ ಸೇವಿಸಿ ಸಿಕ್ಕಿಬಿದ್ದಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಯಾರೀ ಕಿಲಾಡಿ ಶಿಕ್ಷಕರು?

ಬಂಧಿತ ಶಿಕ್ಷಕರನ್ನು ಶಿವಾಂಶ್ ಕುಮಾರ್, ದೀಪನಾರಾಯಣ ರಾಮ್, ಇಂಗ್ಲಿಷ್ ಕುಮಾರ್, ಧೀರೇಂದ್ರ ಕುಮಾರ್ ಮತ್ತು ಮಿಥು ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರು ಇವರನ್ನು ತಪಾಸಣೆಗೆ ಒಳಪಡಿಸಿದಾಗ ಐವರೂ ಪಾಸಿಟಿವ್ ಬಂದಿದ್ದಾರೆ. ಅಂದರೆ, ಮಕ್ಕಳ ಜೊತೆಗಿದ್ದರೂ ಕೂಡ ಇವರು ಮದ್ಯದ ಅಮಲಿನಲ್ಲಿದ್ದರು ಎಂಬುದು ಸಾಬೀತಾಗಿದೆ.
ಈ ಬಗ್ಗೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ಪ್ರಿಯದರ್ಶಿ, ಗಡಿಯಲ್ಲಿ ನಾವು ನಿರಂತರ ತಪಾಸಣೆ ನಡೆಸುತ್ತೇವೆ. ಈ ಶಿಕ್ಷಕರು ನೇಪಾಳದಿಂದ ಬರುವಾಗ ಅವರ ಮೇಲೆ ಅನುಮಾನ ಬಂದು ಪರೀಕ್ಷೆ ನಡೆಸಿದೆವು. ಐವರೂ ಮದ್ಯ ಸೇವಿಸಿರುವುದು ಪತ್ತೆಯಾದ ತಕ್ಷಣವೇ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರ ಆಕ್ರೋಶ: ಅಮಾನತ್ತಿಗೆ ಆದೇಶ!

ಈ ಘಟನೆ ಹೊರಬೀಳುತ್ತಿದ್ದಂತೆ ಬಿಹಾರದಾದ್ಯಂತ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಭವಿಷ್ಯ ರೂಪಿಸಬೇಕಾದವರು ಇವರೇನಾ? ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕುಡಿದು ಮಜಾ ಮಾಡುವುದು ಎಷ್ಟು ಸರಿ? ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ವಿಷಯದ ಗಂಭೀರತೆಯನ್ನು ಮನಗಂಡ ಸುಪೌಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾವನ್ ಕುಮಾರ್ ಅವರು ತಕ್ಷಣವೇ ಈ ಐವರು ಶಿಕ್ಷಕರನ್ನು ಕೆಲಸದಿಂದ ಅಮಾನತುಗೊಳಿಸಲು ಆದೇಶಿಸಿದ್ದಾರೆ. ಅಲ್ಲದೆ, ಇಲಾಖಾ ಮಟ್ಟದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ,(ಏಜನ್ಸೀಸ್​).