ಸಹದ್ಯೋಗಿಗೆ ಜಿಮ್​ಗೆ ಹೋಗು ಶೇಪ್​ಗೆ ಬರ್ತೀಯಾ ಅಂತಿದ್ದ ಆರೋಪಿ 
ದೇಶ

TCS ಉದ್ಯೋಗಿಗಳಿಗೆ ನರಕ ದರ್ಶನ: ಕೆಲಸದ ನೆಪದಲ್ಲಿ ಮೈಕೈ ಮುಟ್ಟುತ್ತಿದ್ದ; ಜಿಮ್‌ಗೆ ಹೋಗು, ಶೇಪ್‌ಗೆ ಬರ್ತೀಯಾ ಎನ್ನುತ್ತಿದ್ದ ಕಾಮುಕರು! TCS Nashik

ಪ್ರಮುಖ ಮುಖ್ಯಾಂಶಗಳು

  • ನಾಸಿಕ್‌ನ TCS ನಲ್ಲಿ ಲೈಗಿಂಕ ಕಿರುಕುಳ ಪ್ರಕರಣ
  • ಸಹದ್ಯೋಗಿಗೆ ಜಿಮ್​ಗೆ ಹೋಗು ಶೇಪ್​ಗೆ ಬರ್ತೀಯಾ ಅಂತಿದ್ದ ಆರೋಪಿ
  • ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ನಡೆದಿರುವ ಹಿನ್ನಲೆ ದಾಖಲಾಗಿರುವ ಪ್ರಕರಣ
ನಾಸಿಕ್: ಮಹಾರಾಷ್ಟ್ರದ ನಾಸಿಕ್​ನಲ್ಲಿರುವ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS Nashik) ಘಟಕದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಬಲವಂತದ ಧಾರ್ಮಿಕ ಮತಾಂತರದ ಕರಾಳ ಮುಖದ ಬೆನ್ನಲ್ಲೇ, ಈಗ ಲೈಂಗಿಕ ಕಿರುಕುಳದ ಆಘಾತಕಾರಿ ದೂರು ದಾಖಲಾಗಿದೆ. ಕಚೇರಿಯ ಒಳಗೇ ಮಹಿಳಾ ಉದ್ಯೋಗಿಗಳಿಗೆ ನರಕ ದರ್ಶನ ಮಾಡಿಸುತ್ತಿದ್ದ ಆರೋಪಿಗಳ ವಿರುದ್ಧ ಮತ್ತೊಬ್ಬ ಸಂತ್ರಸ್ತೆ ಧೈರ್ಯವಾಗಿ ಮುಂದೆ ಬಂದು ದೂರು ನೀಡಿದ್ದಾಳೆ.

ಕೆಲಸದ ನೆಪದಲ್ಲಿ ಮೈಕೈ ಮುಟ್ಟುತ್ತಿದ್ದರು!

ಬಂಧಿತ ಆರೋಪಿಗಳಾದ ಶಾರುಖ್ ಖುರೇಷಿ ಮತ್ತು ರಾಜಾ ಮೆಮನ್ ಎಂಬುವವರು ತನ್ನನ್ನು ದೈಹಿಕ ಮತ್ತು ಮಾನಸಿಕವಾಗಿ ಎಷ್ಟು ಹಿಂಸಿಸಿದ್ದಾರೆ ಎಂಬುದನ್ನು ಸಂತ್ರಸ್ತೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವರ್ಷದ ಜನವರಿಯಲ್ಲಿ ಆರಂಭವಾದ ಈ ಕಿರುಕುಳ, ದಿನಕಳೆದಂತೆ ಮಿತಿ ಮೀರಿದೆ.
ಸಂತ್ರಸ್ತೆಯ ದೂರಿನ ಪ್ರಕಾರ, ಶಾರುಖ್ ಖುರೇಷಿ ಕೆಲಸದ ನೆಪದಲ್ಲಿ ಆಕೆಯನ್ನು ತನ್ನ ಕ್ಯಾಬಿನ್‌ಗೆ ಕರೆಸಿಕೊಂಡು, ನಿನಗೆ ಬಾಯ್‌ಫ್ರೆಂಡ್ ಇದ್ದಾನಾ? ನಿನ್ನ ಎಕ್ಸ್ ಬಾಯ್‌ಫ್ರೆಂಡ್ ಯಾರು? ಎಂದು ಖಾಸಗಿ ಬದುಕಿನ ಬಗ್ಗೆ ಅಸಭ್ಯವಾಗಿ ಪ್ರಶ್ನಿಸುತ್ತಿದ್ದನಂತೆ. ಹಾಗೆಯೇ ಕೆಲಸ ಮಾಡುವ ವೇಳೆ ನನ್ನ ಭುಜ, ತೋಳುಗಳನ್ನು ಮುಟ್ಟುತ್ತಿದ್ದ, ಆತ ನೋಡುವ ರೀತಿಯೇ ಅಸಹ್ಯ ಹುಟ್ಟಿಸುವಂತಿತ್ತು ಎಂದು ಮಹಿಳೆ ನೋವು ತೋಡಿಕೊಂಡಿದ್ದಾರೆ.

ಜಿಮ್‌ಗೆ ಹೋಗು, ಶೇಪ್‌ಗೆ ಬರ್ತೀಯಾ

ಕೇವಲ ಪ್ರಶ್ನೆಗಳಿಗೆ ಸೀಮಿತವಾಗದ ಈ ಕಾಮುಕರು, ಮಹಿಳೆಯ ದೇಹದ ಬಗ್ಗೆಯೂ ಕೀಳುಮಟ್ಟದ ಕಾಮೆಂಟ್ ಮಾಡುತ್ತಿದ್ದರು. ಸುಮಾರು ಒಂದು ವಾರದ ನಂತರ ಮೆಮನ್ ಮತ್ತು ಖುರೇಷಿ ಇಬ್ಬರೂ ಸೇರಿ ಆಕೆಯನ್ನು ಕರೆದು, ನೀನು ತುಂಬಾ ತೆಳ್ಳಗಿದ್ದೀಯಾ, ಸ್ವಲ್ಪ ಜಿಮ್‌ಗೆ ಹೋಗು. ಆಗ ನೀನು ಸರಿಯಾದ ಶೇಪ್‌ಗೆ ಬರುತ್ತೀಯಾ ಮತ್ತು ಆಕರ್ಷಕವಾಗಿ ಕಾಣುತ್ತೀಯಾ ಎಂದು ಹೇಳಿದ್ದರಂತೆ.
ಸಹೋದ್ಯೋಗಿಗಳ ನಡುವೆಯೇ ಈ ರೀತಿ ಬಹಿರಂಗವಾಗಿ ದೇಹದ ಬಗ್ಗೆ ಕಾಮೆಂಟ್ ಮಾಡುತ್ತಿದ್ದುದರಿಂದ ತಾನು ತೀವ್ರ ಮುಜುಗರ ಮತ್ತು ಅವಮಾನ ಅನುಭವಿಸಬೇಕಾಯಿತು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಹಬ್ಬದ ದಿನವೂ ಕಿರುಕುಳ

ಮರಾಠಿಗರ ಪವಿತ್ರ ಹಬ್ಬವಾದ ಗುಡಿ ಪಾಡ್ವಾ ದಿನ ಹೊಸ ಬಟ್ಟೆ ಧರಿಸಿ ಕಚೇರಿಗೆ ಬಂದಾಗ ರಾಜಾ ಮೆಮನ್ ಆಕೆಯನ್ನು ಸುಮ್ಮನೆ ಬಿಟ್ಟಿಲ್ಲ. ಪದೇ ಪದೇ ಸನ್ನೆಗಳ ಮೂಲಕ ಕರೆಯುವುದು, ಅಶ್ಲೀಲವಾಗಿ ದಿಟ್ಟಿಸುವುದು ಮತ್ತು ಆಫೀಸ್​ನಲ್ಲಿ ಯಾರನ್ನಾದರೂ ಪ್ರೀತಿಸುತ್ತಿದ್ದೀಯಾ ಎಂದು ಪೀಡಿಸುವುದು ಮಾಡುತ್ತಿದ್ದನಂತೆ. ಅವನು ನನ್ನನ್ನು ನೋಡುತ್ತಿದ್ದ ರೀತಿ ನನ್ನ ಸಹೋದ್ಯೋಗಿಗಳ ಮುಂದೆ ನನ್ನ ಗೌರವ ಕುಸಿಯುವಂತೆ ಮಾಡುತ್ತಿತ್ತು ಎಂದು ಸಂತ್ರಸ್ತೆ ಹೇಳಿದ್ದಾರೆ.

ದೂರು ನೀಡಲು ಹಿಂಜರಿದ್ದೇಕೆ?

ಇಷ್ಟೆಲ್ಲಾ ನಡೆಯುತ್ತಿದ್ದರೂ ಆಕೆ ಕಂಪನಿಯ ಆಂತರಿಕ ಸಮಿತಿಗೆ (ICC) ದೂರು ನೀಡಲು ಹೆದರಿದ್ದರು. ಕಾರಣ, ಆರೋಪಿಗಳು ಕಂಪನಿಯಲ್ಲಿ ದೊಡ್ಡ ಪ್ರಭಾವ ಹೊಂದಿದ್ದರು. ದೂರು ನೀಡಿದರೆ ತನ್ನ ಕೆಲಸಕ್ಕೆ ತೊಂದರೆಯಾಗಬಹುದು ಅಥವಾ ತನ್ನ ಮಾತನ್ನು ಯಾರೂ ನಂಬಲಿಕ್ಕಿಲ್ಲ ಎಂಬ ಭೀತಿ ಆಕೆಯನ್ನ ಕಾಡಿತ್ತು.

ತನಿಖೆ ಎಲ್ಲಿಗೆ ಬಂದಿದೆ?

ಏಪ್ರಿಲ್ ಆರಂಭದಲ್ಲಿ ಮೊದಲ ಬಾರಿಗೆ ಈ ಮತಾಂತರ ಮತ್ತು ಕಿರುಕುಳದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪ್ರಕರಣ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಈಗಾಗಲೇ ಏಳು ಮಂದಿ ಆರೋಪಿಗಳನ್ನು ಕೆಲಸದಿಂದ ಅಮಾನತು ಮಾಡಿದೆ. ಕಂಪನಿಯು ಜೀರೋ ಟಾಲರೆನ್ಸ್ ನೀತಿಯನ್ನು ಅನುಸರಿಸುವುದಾಗಿ ತಿಳಿಸಿದೆ.
ಪ್ರಸ್ತುತ ನಾಸಿಕ್ ಪೊಲೀಸರು ಈ ಇಬ್ಬರೂ ಕಾಮುಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಯೊಂದರ ಕಚೇರಿಯ ನಾಲ್ಕು ಗೋಡೆಗಳ ನಡುವೆ ಇಂತಹ ಧರ್ಮಾಂಧತೆ ಮತ್ತು ಲೈಂಗಿಕ ವಿಕೃತಿ ಅಡಗಿರುವುದು ಈಗ ಇಡೀ ಕಾರ್ಪೊರೇಟ್ ವಲಯವನ್ನೇ ಬೆಚ್ಚಿಬೀಳಿಸಿದೆ ಎಂದರೆ ಸುಳ್ಳಲ್ಲ,(ಏಜನ್ಸೀಸ್​).