ತಾರಿಖ್ ರೆಹಮಾನ್ 
ದೇಶ

ಇಂದು ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ; ಭಾರತದಿಂದ ಸ್ಪೀಕರ್ ಓಂ ಬಿರ್ಲಾ ಭಾಗಿ | Tariq Rahman

ಢಾಕಾ: ಇತ್ತೀಚೆಗೆ ನಡೆದ ಬಾಂಗ್ಲಾ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಬಾಂಗ್ಲಾದೇಶ ರಾಷ್ಟ್ರೀಯತವಾದಿ ಪಕ್ಷ(ಬಿಎನ್​ಪಿ) ಅಧಿಕಾರಕ್ಕೆ ಬಂದಿದ್ದು, ಅದರ ಮುಖ್ಯಸ್ಥ ತಾರಿಖ್ ರೆಹಮಾನ್(Tariq Rahman) ಇಂದು(ಫೆ. 17) ಬಾಂಗ್ಲಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಾಂಗ್ಲಾದ ಸಂಸತ್ ಭವನದಲ್ಲಿ ಬೆಳಿಗ್ಗೆ 9:30 ಕ್ಕೆ ಸಂಸತ್ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಅಲ್ಲಿಯೇ ಪ್ರಧಾನಿಯಾಗಿ ತಾರಿಖ್ ರೆಹಮಾನ್ ಪ್ರಮಾಣ ಸ್ವೀಕರಿಸುವ ಸಾಧ್ಯತೆ ಇದೆ. ಸಂಜೆ 4.00 ಗಂಟೆಗೆ ಸಚಿವರ ಪ್ರಮಾಣವಚನಕ್ಕಾಗಿ ಮತ್ತೊಂದು ಅಧಿವೇಶನ ನಡೆಯಲಿದೆ ಎನ್ನಲಾಗಿದೆ.
ಈ ಸಮಾರಂಭದಲ್ಲಿ ಭಾರತದ ಪರವಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಈ ಭಾಗವಹಿಸುವಿಕೆಯೂ ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಿನ ಆಳವಾದ ಮತ್ತು ಶಾಶ್ವತವಾದ ಸ್ನೇಹವನ್ನು ಒತ್ತಿಹೇಳುತ್ತದೆ. ಎರಡೂ ರಾಷ್ಟ್ರಗಳನ್ನು ಬಂಧಿಸುವ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಭಾರತದ ದೃಢವಾದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದೆ.
ಸೋಮವಾರ ಸಂಜೆ ಮಧ್ಯಂತರ ಸರ್ಕಾರದ ಅವಧಿ ಮುಗಿದಿದ್ದು, ಹಂಗಾಮಿ ಮುಖ್ಯಸ್ಥನ ಸ್ಥಾನಕ್ಕೆ ಮೊಹಮ್ಮದ್ ಯೂನಸ್ ರಾಜೀನಾಮೆ ನೀಡಿದ್ದಾರೆ. 2024 ರಲ್ಲಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಫೆ. 12ರಂದು ನಡೆದ 13ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್​ಪಿ ಭರ್ಜರಿ ಗೆಲುವು ಸಾಧಿಸಿದೆ.
ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾಗಿರುವ ರೆಹಮಾನ್, 17 ವರ್ಷಗಳ ಕಾಲ ದೇಶಭ್ರಷ್ಟರಾಗಿ ವಿದೇಶದಲ್ಲಿ ನೆಲೆಸಿದ್ದರು. 2024ರ ಸಾಮೂಹಿಕ ದಂಗೆ ಬಳಿಕ ಮತ್ತು ಶೇಖ್ ಹಸೀನಾ ಸರ್ಕಾರ ಪತನವಾಗಿ ವರ್ಷದ ನಂತರ ಚುನಾವಣೆ ಹಿನ್ನೆಲೆ ಮತ್ತು ಕಳೆದ ಡಿಸೆಂಬರ್​ನಲ್ಲಿ ತಾಯಿ ಖಲೀದಾ ಜಿಯಾ ನಿಧನರಾದ ಬಳಿಕ ರೆಹಮಾನ್ ಇತ್ತೀಚೆಗೆ ಸ್ವದೇಶಕ್ಕೆ ಆಗಮಿಸಿದ್ದರು.
ಚುನಾವಣೆಯಲ್ಲಿ 300 ಸ್ಥಾನಗಳ ಪೈಕಿ 151ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಭಾರಿ ಬಹುಮತವನ್ನು ಪಡೆದಿದೆ. ಅದರ ಮೈತ್ರಿಕೂಟ ಸೇರಿ 212 ಸ್ಥಾನಗಳಾಗುತ್ತವೆ. ಇನ್ನೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಜಮಾತ್-ಇ-ಇಸ್ಲಾಮಿ 77 ಸ್ಥಾನಗಳೊಂದಿಗೆ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನೂ ಶೇಖ್ ಹಸೀನಾ ಅವರ ಅವಾಮಿ ಲೀಗ್​ ಪಕ್ಷವನ್ನು ನಿಷೇಧಿಸಲಾಗಿತ್ತು (ಏಜೆನ್ಸೀಸ್).