Anna University professor
ಚೆನ್ನೈ: ತಮಿಳುನಾಡಿನಲ್ಲಿ ಬಿರಿಯಾನಿ ಮಾರಾಟಗಾರ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಮಾಸುವ ಮುನ್ನವೇ, ಇಲ್ಲಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾಲಯದಲ್ಲಿ (Anna University) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಇಂಟರ್ನ್ಶಿಪ್ ಕೊಡಿಸುವ ಆಮಿಷವೊಡ್ಡಿ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರೊಫೆಸರ್ ಎ. ಜ್ಞಾನವೇಲ್ ಬಾಬು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿಯ ಆರೋಪವೇನು?
ಸಂತ್ರಸ್ತೆ ಎರಡನೇ ವರ್ಷದಲ್ಲಿ ಓದುತ್ತಿರುವಾಗ ಪ್ರೊಫೆಸರ್ ಎ. ಜ್ಞಾನವೇಲ್ ಬಾಬುಗೆ ಆಕೆಯ ಕುಟುಂಬ ಸಂಕಷ್ಟ ಎದುರಿಸುತ್ತಿದ್ದದ್ದನ್ನು ತಿಳಿದಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆತ, ಆಕೆಗೆ ಸುಲಭವಾಗಿ ಇಂಟರ್ನ್ಶಿಪ್ ಕೊಡಿಸುವುದಾಗಿ ಆಮಿಷವೊಡ್ಡಿದ್ದ. ಮೂರನೇ ವರ್ಷದ ಪದವಿಯಲ್ಲಿದ್ದಾಗ ಕಿರುಕುಳ ಹೆಚ್ಚಾಯಿತು.
ಒಳುಡುಪುಗಳ ಬಗ್ಗೆ ಪ್ರಶ್ನೆ ಮಾಡೋದು. ಮುಟ್ಟಿನ ಬಗ್ಗೆ, ಮದುವೆ ಹೀಗೆ ಅಸಭ್ಯವಾಗಿ ವೈಯಕ್ತಿಕ ವಿಚಾರದ ಬಗ್ಗೆ ಒತ್ತಾಯ ಪೂರ್ವಕಾಗಿ ಮಾತನಾಡುತ್ತಿದ್ದರು. ನಿತ್ಯವೂ ತಡರಾತ್ರಿ ಹತ್ತು ಗಂಟೆಯ ನಂತರ ಕರೆ ಮಾಡುವುದು. ಅಶ್ಲೀಲ ಸಂದೇಶ ಕಳುಹಿಸುವುದು. ಹೊರಗೆ ಸುತ್ತಾಡಲು ಬರುವಂತೆ ಒತ್ತಾಯ ಮಾಡುತ್ತಿದ್ದರು. ಹಣದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ ಎನ್ನುವ ಆರೋಪ ಮಾಡಿದ್ದಾರೆ. ಒಮ್ಮೆ ಪ್ರೊಫೆಸರ್ ಕಿರುಕುಳ ತಾಳಲಾರದೆ ನಂಬರ್ ಅನ್ನೇ ಆಕೆ ಬ್ಲಾಕ್ ಮಾಡಿದ್ದಳು. ಜೊತೆಗೆ ಸೋಶಿಯಲ್ ಮೀಡಿಯಾ ಎಲ್ಲವನ್ನು ನಿರ್ಬಂಧಿಸಿದ್ದಳು. ಆದರೂ ಬಿಡದ ಕಾಮುಕ ಪ್ರೊಫೆಸರ್ ಆಕೆಯ ಸ್ನೇಹಿತರ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.
ಈ ಹಿಂದೆಯೂ ಕೇಸ್ ದಾಖಲು
ಪ್ರೊಫೆಸರ್ ಎ. ಜ್ಞಾನವೇಲ್ ಬಾಬು ವಿರುದ್ಧ ಲೈಂಗಿಕ ಕಿರುಕುಳ ಸಂಬಂಧ ಕೇಸ್ ದಾಖಲಾಗುತ್ತಿರುವುದು ಇದೇ ಮೊದಲೇನಲ್ಲ. ಅನೇಕ ವಿದ್ಯಾರ್ಥಿನಿಯರಿಗೆ ಇದೇ ರೀತಿ ಕಿರುಕುಳ ನೀಡಿದ್ದ ಎಂಬುದಾಗಿ ದೂರಿದ್ದರು ಎನ್ನಲಾಗಿದೆ.
ಪ್ರೊಫೆಸರ್ ಅಮಾನತು
ಶುಕ್ರವಾರ ಅಣ್ಣಾ ವಿವಿಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ, ಪ್ರೊಫೆಸರ್ನನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಆಂತರಿಕ ದೂರು ಸಮಿತಿ ಮತ್ತು ಪೊಲೀಸರ ತನಿಖೆ ಮುಗಿಯುವವರೆಗೂ ಈ ಆದೇಶ ಜಾರಿಯಲ್ಲಿರಲಿದೆ ಎಂದು ಹೇಳಲಾಗಿದೆ.
ಕೇಸ್ ದಾಖಲು
ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ತಮಿಳುನಾಡು ಮಹಿಳಾ ಕಿರುಕುಳ ನಿಷೇಧ ಕಾಯ್ದೆ 1998 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 78ರ ಅಡಿಯಲ್ಲಿ 'ಸ್ಟಾಕಿಂಗ್' ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸುದ್ದಿ ಹರಡುತ್ತಲೇ ಜ್ಞಾನವೇಲ್ ಬಾಬು ಪರಾರಿಯಾಗಿದ್ದ. ಚೆನ್ನೈ ಪೊಲೀಸರ ವಿಶೇಷ ತಂಡ ತಿರುನಲ್ವೇಲಿಯಲ್ಲಿ ಆತನನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಚೆನ್ನೈಗೆ ಕರೆತಂದಿದ್ದಾರೆ.
ವಿದ್ಯಾರ್ಥಿನಿಯರು ಹೇಳಿದ್ದಿಷ್ಟು
ಪ್ರೊಫೆಸರ್ ವಿರುದ್ಧ ದೂರು ಕೊಟ್ರೆ ಮಾರ್ಕ್ಸ್ ಕೊಡೋದಿಲ್ಲ ಎನ್ನುವ ಭಯ ನಮಗೆ ಇದೆ. ಜೊತೆಗೆ ಇದು ನಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಸಮಸ್ಯೆಯಾಗುತ್ತದೆ ಎನ್ನುವ ಆತಂಕ ಎಂದಿಗೂ ಇರುತ್ತದೆ. ಹೀಗಾಗಿ ನಾವು ಎಲ್ಲವನ್ನು ಸಹಿಸಿಕೊಳ್ಳುತ್ತೇವೆ. ಕುಟುಂಬದ ಬೆಂಬಲವಿದ್ದರೇ ಧೈರ್ಯದಿಂದ ಎದುರಿಸುತ್ತೇವೆ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).