ಚೆನ್ನೈ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಸಮಯದಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ(chicken biryani) ತಮಿಳುನಾಡು ಸರ್ಕಾರ ಮುಂದಾಗಿದೆ. ಶಾಲಾ ಶಿಕ್ಷಣ ಇಲಾಖೆ ಸಿಎಂ ಸಿ.ಜೋಸೆಫ್ ವಿಜಯ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ಮತ್ತು ಅಂತಿಮ ನಿರ್ಧಾರವನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ ಎಂದು ಶನಿವಾರ(ಆ. 01) ವರದಿಯಾಗಿದೆ.
ಇನ್ನೂ ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್ ಸಮರ್ಥಿಸಿಕೊಂಡಿದ್ದು, ಮಕ್ಕಳಿಗೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾಪವು ಪರಿಗಣನೆಯಲ್ಲಿದೆ. ಈ ಬಗ್ಗೆ ಸಿಎಂ ವಿಜಯ್ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಈರೋಡ್ನಲ್ಲಿ ಮಾತನಾಡಿರುವ ಅವರು, ತಮಿಳುನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಯಾವಾಗಲೂ ಪೌಷ್ಟಿಕಾಂಶ ಕ್ರಾಂತಿಯೊಂದಿಗೆ ಕೈಜೋಡಿಸಿದೆ. ಅದೇ ರೀತಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ಬಡಿಸುವುದನ್ನು ಪರಿಗಣಿಸಲು ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕಾಮರಾಜರ್ ಮಧ್ಯಾಹ್ನದ ಊಟ ಯೋಜನೆಯನ್ನು ಪರಿಚಯಿಸಿದರು, ಕಲೈನಾರ್ ಕರುಣಾನಿಧಿ ಮೊಟ್ಟೆಗಳನ್ನು ಸೇರಿಸಿದರು, ಎಂಜಿಆರ್ ಅದನ್ನು ಪೌಷ್ಟಿಕ ಊಟ ಕಾರ್ಯಕ್ರಮವಾಗಿ ಪರಿವರ್ತಿಸಿದರು. ಮತ್ತು ಜಯಲಲಿತಾ ವಾರವಿಡೀ ಮೊಟ್ಟೆ ವಿತರಣೆಯನ್ನು ವಿಸ್ತರಿಸಿದರು. ಅದೇ ರೀತಿ, ಸರ್ಕಾರಿ ಶಾಲೆಗಳಲ್ಲಿ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ಪರಿಚಯಿಸುವ ಬಯಕೆ ನನಗಿದೆ ಎಂದಿದ್ದಾರೆ.
ಬೆಳೆಯುತ್ತಿರುವ ಮಕ್ಕಳಿಗೆ ಸಾಕಷ್ಟು ಪ್ರೋಟೀನ್ ಬೇಕು. ಚಿಕನ್ ಬಿರಿಯಾನಿ ತಿನ್ನುವುದರಿಂದ ಮಕ್ಕಳು ಹಾಳಾಗುವುದಿಲ್ಲ. ಮತ್ತು ಈ ವಿಷಯವನ್ನು ರಾಜಕೀಯಗೊಳಿಸಬಾರದು. ಸಸ್ಯಹಾರಿ ಮಕ್ಕಳಿಗೆ ಸಸ್ಯಹಾರಿ ಊಟ ಮಾಡಬಹುದು, ಮಾಂಸಾಹಾರ ಸೇವಿಸುವ ಮಕ್ಕಳು ಬಿರಿಯಾನಿ ಸೇವಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).