ಕೆ.ಅಣ್ಣಾಮಲೈ ಮತ್ತು ಪಿಯೂಷ್ ಗೊಯಲ್ 
ದೇಶ

ತಮಿಳುನಾಡು ಚುನಾವಣೆ: ಅಣ್ಣಾಮಲೈಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದೇಕೆ? ಪಿಯೂಷ್ ಗೊಯಲ್ ಹೇಳಿದ್ದೇನು ? | Annamalai

ಚೆನ್ನೈ: ತಮಿಳುನಾಡು ಚುನಾವಣೆಗೆ ಶುಕ್ರವಾರ(ಏ. 03) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರ ಹೆಸರು ಬಿಟ್ಟಿರುವುದು ಚರ್ಚೆಯನ್ನು ಹುಟ್ಟು ಹಾಕಿದ್ದು, ಇದು ಪಕ್ಷದ ಒಳಗಿನ ಭಿನ್ನಮತ ಅಥವಾ ಕಾರ್ಯತಂತ್ರದ ಭಾಗವೇ ಎಂಬ ಪ್ರಶ್ನೆ ಈಗ ಮೂಡಿದೆ.
ಈ ಕುರಿತು ಚೆನ್ನೈನಲ್ಲಿ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ಉಸ್ತುವಾರಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೊಯಲ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಲವು ವರ್ಷಗಳಿಂದ ಜನರಿಗಾಗಿ ಕೆಲಸ ಮಾಡುತ್ತಿರುವ ತಮಿಳುನಾಡಿನ ಹಿರಿಯ ಬಿಜೆಪಿ ಕಾರ್ಯಕಾರಿಣಿಗಳಿಗೆ ಅವಕಾಶ ನೀಡಲಾಗಿದೆ. ನಮ್ಮ ಎಲ್ಲಾ ಅಭ್ಯರ್ಥಿಗಳು ಭಾಷೆ, ಸಂಸ್ಕೃತಿ ಮತ್ತು ಹೆಮ್ಮೆಯನ್ನು ರಕ್ಷಿಸುತ್ತಾರೆ.
ಪಕ್ಷದ ಸದಸ್ಯರ ಭಾವನೆಗಳು ಮತ್ತು ಅಭ್ಯರ್ಥಿಯ ಆಶಯಗಳ ಆಧಾರದ ಮೇಲೆ ಅವಕಾಶಗಳನ್ನು ನೀಡಲಾಗುತ್ತದೆ. ರಾಜ್ಯದಿಂದ ಪಡೆದ ಮಾಹಿತಿ ಮತ್ತು ಪ್ರತಿಯೊಬ್ಬ ಅಭ್ಯರ್ಥಿಯ ಆದ್ಯತೆಗಳು ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅಣ್ಣಾಮಲೈ ಅವರು ಬಿಜೆಪಿಯಲ್ಲಿ ಸಮರ್ಪಣಾಭಾವದಿಂದ ಕೆಲಸ ಮಾಡಬಲ್ಲ ವ್ಯಕ್ತಿ. ಅವರು ನಿರ್ದಿಷ್ಟ ಕ್ಷೇತ್ರಕ್ಕಾಗಿ ಮಾತ್ರವಲ್ಲದೆ ಇಡೀ ರಾಜ್ಯಕ್ಕಾಗಿ ಕೆಲಸ ಮಾಡಲು ಬಯಸಿದ್ದರು ಎಂದು ತಿಳಿಸಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಮಾ. 30ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಏ. 06 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಏ. 23ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 04ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).