CM Vijay | ಮುಖ್ಯಮಂತ್ರಿ ಜೋಸೆಫ್ ವಿಜಯ್
ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು 543 ರಲ್ಲೇ ಶಾಶ್ವತವಾಗಿ ಕಾಯ್ದಿರಿಸಲು ಅಗತ್ಯವಿರುವ ಸಂವಿಧಾನ ತಿದ್ದುಪಡಿಗಳನ್ನು ತರುವಂತೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪುನರ್ವಿಂಗಡಣೆ ಹಾಗೂ ಶೇ. 33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಬುಧವಾರ (ಆಗಸ್ಟ್ 12) ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಉಲ್ಲೇಖಿಸಿ ಮುಖ್ಯಮಂತ್ರಿಗಳು ಈ ಪತ್ರವನ್ನು ಬರೆದಿದ್ದಾರೆ.
ಶಿಕ್ಷೆ ವಿಧಿಸಬೇಡಿ ಎಂದ ವಿಜಯ್!
ಮುಖ್ಯಮಂತ್ರಿಗಳ ಪ್ರಕಾರ, ಲೋಕಸಭೆಯ ಒಟ್ಟು ಬಲವನ್ನು 543 ಸ್ಥಾನಗಳಿಗೆ ಶಾಶ್ವತವಾಗಿ ನಿಗದಿಪಡಿಸಬೇಕು ಹಾಗೂ ರಾಜ್ಯಗಳ ನಡುವೆ ಈಗಿರುವ ಸ್ಥಾನಗಳ ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ವಿಧಾನಸಭೆಯ ನಿರ್ಣಯದಲ್ಲಿ ಕೋರಲಾಗಿದೆ. ಅದರೊಂದಿಗೆ ಮುಂಬರುವ ಲೋಕಸಭಾ ಚುನಾವಣೆ ಮತ್ತು ತದನಂತರದ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಈ ನಿರ್ಣಯದ ಮೂಲಕ ಒತ್ತಾಯಿಸಲಾಗಿದೆ. ತಮಿಳುನಾಡು ಶಾಸನಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯದ ಪ್ರತಿಯನ್ನು ಲಗತ್ತಿಸುತ್ತಿದ್ದು, ಶಾಸನಸಭೆಯ ನಿರ್ಣಯವನ್ನು ಪರಿಗಣಿಸಿ ಈ ನಿಟ್ಟಿನಲ್ಲಿ ಅಗತ್ಯ ಸಂವಿಧಾನ ತಿದ್ದುಪಡಿಗಳನ್ನು ತರಬೇಕಾಗಿ ವಿಜಯ್ ತಮ್ಮ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಮುಂದಿನ ಜನಗಣತಿಯ ನಂತರ ಸಂವಿಧಾನದ ವಿಧಿ 81(2)(a) ಅಡಿಯಲ್ಲಿ ಈಗಿರುವ ಸ್ಥಾನ ಹಂಚಿಕೆ ನಿಯಮಗಳನ್ನು ಅನ್ವಯಿಸಿದರೆ ದಕ್ಷಿಣದ ರಾಜ್ಯಗಳು ತಮ್ಮ ಸಂಸದೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳಬಹುದು ಎಂಬ ಕಳವಳಗಳ ನಡುವೆ ಈ ವಿಷಯವನ್ನು ವಿಧಾನಸಭೆಯಲ್ಲಿ ಚರ್ಚಿಸಲಾಗಿತ್ತು. 1967 ರಲ್ಲಿ ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ 41 ರಿಂದ 39 ಕ್ಕೆ ಇಳಿಕೆಯಾದಾಗ ರಾಜ್ಯವು ಈಗಾಗಲೇ ಸಂಸದೀಯ ಪ್ರಾತಿನಿಧ್ಯದ ಕಡಿತವನ್ನು ಅನುಭವಿಸಿತ್ತು ಎಂಬುದನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದ್ದಾರೆ.
ಈ ಪ್ರಸ್ತಾಪಕ್ಕೆ ಪ್ರಮುಖ ವಿರೋಧ ಪಕ್ಷವಾದ ಡಿಎಂಕೆ ಹಾಗೂ ಆಡಳಿತಾರೂಢ ಟಿವಿಕೆಯ ಮಿತ್ರಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ಸೂಚಿಸಿವೆ. ಪುನರ್ವಿಂಗಡಣೆ ವಿಷಯದಲ್ಲಿ ತಮಿಳುನಾಡಿನ ಹಿತಾಸಕ್ತಿಗಳನ್ನು ಕಾಯಲು ತಮ್ಮ ಪಕ್ಷವು ವರ್ಷಗಳಿಂದ ಅನೇಕ ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
1971 ರ ನಂತರ ದಾಖಲಾದ ಜನಸಂಖ್ಯೆಯನ್ನು ಆಧರಿಸಿ ಪ್ರಸ್ತುತ ಸ್ಥಾನಗಳ ಹಂಚಿಕೆಯನ್ನು ಬದಲಾಯಿಸುವ ಪ್ರಯತ್ನವು ದಕ್ಷಿಣದ ರಾಜ್ಯಗಳ ಮೇಲೆ ಅನ್ಯಾಯದ ಪ್ರಭಾವ ಬೀರುತ್ತದೆ ಎಂದು ಶಾಸನಸಭೆಯ ನಿರ್ಣಯದಲ್ಲಿ ವಾದಿಸಲಾಗಿದೆ. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ, ಆರ್ಥಿಕ ಪ್ರಗತಿ ಸಾಧಿಸಿದ ಹಾಗೂ ಆರೋಗ್ಯ ಮತ್ತು ಸಾರ್ವಜನಿಕ ಕಲ್ಯಾಣ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ ರಾಜ್ಯಗಳಿಗೆ ಸಂಸದೀಯ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಮೂಲಕ ಶಿಕ್ಷೆ ವಿಧಿಸಬಾರದು ಎಂದು ನಿರ್ಣಯದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ(ಏಜೆನ್ಸೀಸ್).