ದೇಶ

ನ.11ರವರೆಗೂ ಆಂಧ್ರ, ತಮಿಳುನಾಡು ಸೇರಿದಂತೆ ಈ ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ; ಭಾರತೀಯ ಹವಾಮಾನ ಇಲಾಖೆ

  • ನ.​11ರವರೆಗೂ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ.

  • ಮುರಾಸು ಚಂಡ ಮಾರುತದ ಎಫೆಕ್ಟ್​​​​ ಆಂಧ್ರಪ್ರದೇಶ, ತೆಲಂಗಾಣದಲ್ಲಿನ ಭಾರಿ ಮಳೆ.

  • ಭಾರಿ ಮಳೆಗೆ ರಸ್ತೆ, ಮನೆ, ಶಾಲೆಗಳು ಜಲಾವೃತ ಜನಜೀವನ ಅಸ್ತವ್ಯಸ್ತ.

ನವದೆಹಲಿ: ಮುರಾಸು ಚಂಡಮಾರುತದ ಪ್ರಭಾವದ ಹಿನ್ನೆಲೆ ಈ ಬಾರಿ ದೀಪಾವಳಿ ಹೊತ್ತಿನಲ್ಲಿ ನವೆಂಬರ್​ 11ರವರೆಗೂ ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಪುದುಚೇರಿ, ಕರ್ನಾಟಕ ಸೇರಿದಂತೆ ಇತರ ಕೆಲವು ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ.

ಇಂದು (ನವೆಂಬರ್ 6) ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಒಡಿಶಾ ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗಲಿದೆ. 30-40 ಕಿ.ಮೀ. ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎಂದು ಮತ್ತು ಎಲ್ಲೆಲ್ಲಿ ಮಳೆಯಾಗಲಿದೆ?

ತಮಿಳುನಾಡು, ಪುದುಚೇರಿ, ಕೊಡೈಕೆನಾಲ್​ ಹಾಗೂ ಆಂಧ್ರಪ್ರದೇಶ ಮತ್ತು ಯಾನಂ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆಯ ಲಕ್ಷದ್ವೀಪ, ರಾಯಲಸೀಮೆ ಮತ್ತು ದಕ್ಷಿಣ ಒಳನಾಡಿನಲ್ಲಿ ನ.11ರವರೆಗೂ ಮಳೆಯಾಗಲಿದೆ. ನವೆಂಬರ್.7 ರವರೆಗೆ ತೆಲಂಗಾಣದಲ್ಲಿ ಮಳೆಯಾಗಲಿದೆ.

ಆಂಧ್ರದ ಕರಾವಳಿ ಪ್ರದೇಶವಾದ ಯಾನಂ, ರಾಯಲಸೀಮೆ ಹಾಗೂ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ನ.9ರವರೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಮತ್ತು ಗುಡುಗು ಸಹಿತ ಮಿಂಚು ಇರಲಿದೆ.

ನವೆಂಬರ್ 10ರಂದು ಜಮ್ಮು-ಕಾಶ್ಮೀರ, ಲಡಾಖ್​, ಮುಜರಾಬಾದ್​​ ಸುತ್ತಮುತ್ತ ಹಾಗೂ ಹಿಮಾಚಲ ಪ್ರದೇಶದಲ್ಲಿ ನ.11ರವರೆಗೂ ಮಳೆಯಾಗಲಿದ್ದು, ನ.9ರಂದು ಉತ್ತರಾಖಂಡದಲ್ಲಿ ವರುಣ ಅಬ್ಬರಿಸಲಿದ್ದಾನೆ ಎನ್ನಲಾಗಿದೆ. ನ.9ರಿಂದ 11ರವರೆಗೆ ಅಂಡಮಾನ್​ ಮತ್ತು ನಿಕೋಬಾರ್​​ ದ್ವೀಪದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ನ.8ರಿಂದ ಅಸ್ಸಾಂ, ಮೇಘಾಲಯದಲ್ಲಿ ವರುಣಾರ್ಭಟವಿದ್ದರೆ, ನವೆಂಬರ್ 5-11 ರ ಅವಧಿಯಲ್ಲಿ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಮುರಾಸು ತಂದಿಟ್ಟ ಫಜೀತಿ

ಮುರಾಸು ಚಂಡಮಾರುತದಿಂದಾಗಿ ನ.3ರಂದು ನಸುಕಿನ ಮುಂಜಾವಿನಲ್ಲಿ ಮೀನು ಹಿಡಿಯಲು ಹೋದ ದೋಣಿ ಮುಗುಚಿ ಬಿದ್ದು 9 ಮಂದಿ ಮೀನುಗಾರರು ಮೃತಪಟ್ಟರು. ಆಂಧ್ರಪ್ರದೇಶ ಕರಾವಳಿಯ ಬಳಿ ಕಾಸಿಮೇಡುವಿನಲ್ಲಿ ಈ ಘಟನೆ ನಡೆದಿತ್ತು. ಮುರಾಸು ಚಂಡ ಮಾರುತದಿಂದ ಆಂಧ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡಿದೆ. ಆ ಬಗ್ಗೆ ಎಕ್ಸ್​ನಲ್ಲಿ ಹಂಚಿಕೊಂಡಿರುವ ವಿಡಿಯೋಗಳು ವೈರಲ್ ಆಗಿದೆ, ( ಏಜೆನ್ಸೀಸ್).