ಸ್ವಚ್ಛ ಸರ್ವೇಕ್ಷಣ್ 2025-26 ಪಟ್ಟಿ ಪ್ರಕಟ! ಈ ಬಾರಿ ದೇಶದ ನಂಬರ್ 1 ಸ್ವಚ್ಛ ನಗರಿ ಯಾವ ರಾಜ್ಯಕ್ಕೆ? Swachh Survekshan 
ದೇಶ

ಸ್ವಚ್ಛ ಸರ್ವೇಕ್ಷಣ್ 2025-26 ಪಟ್ಟಿ ಪ್ರಕಟ! ಈ ಬಾರಿ ದೇಶದ ನಂಬರ್ 1 ಸ್ವಚ್ಛ ನಗರಿ ಯಾವ ರಾಜ್ಯಕ್ಕೆ? Swachh Survekshan

Swachh Survekshan: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಈ ಬಾರಿ ಭಾರಿ ಬದಲಾವಣೆಯೇ ಕಂಡುಬಂದಿದ್ದು, ಸತತ ಎಂಟು ವರ್ಷಗಳಿಂದ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಧ್ಯಪ್ರದೇಶದ ಇಂದೋರ್‌ಗೆ ಸ್ವಚ್ಛ ಸರ್ವೇಕ್ಷಣ್ 2025-26ರ ಪಟ್ಟಿಯಲ್ಲಿ ಮೊದಲ ಸ್ಥಾನ ಕೈತಪ್ಪಿದೆ. ಇಂದೋರ್​ನ ಹಿಂದಿಕ್ಕಿ, ನವಿ ಮುಂಬೈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.

ನವಿ ಮುಂಬೈ ದೇಶದ ನಂಬರ್ ಒನ್ ಸ್ವಚ್ಛ ನಗರವಾಗಿ ಹೊರಹೊಮ್ಮಿದ್ದು, ಸೂರತ್ ಮತ್ತು ವಿಜಯವಾಡ ನಂತರದಲ್ಲಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ 2025-26ರ ವರದಿಯಲ್ಲಿ, ಕಳೆದ ಎಂಟು ವರ್ಷಗಳಿಂದ ಸತತವಾಗಿ ಅಗ್ರಸ್ಥಾನವನ್ನು ಅಲಂಕರಿಸುತ್ತಿದ್ದ ಇಂದೋರ್​ ಈ ಬಾರಿ ಮೊದಲ ಮೂರು ಸ್ಥಾನದಿಂದ ಕೆಳಗಿಳಿದಿರುವುದು ಕೆಲವರಲ್ಲಿ ತೀರ ಆಶ್ಚರ್ಯ ಮೂಡಿಸಿದೆ.

ಇಂದು ದೆಹಲಿಯಲ್ಲಿ ಆಯೋಜಿಸಿದ ಸಮಾರಂಭದಲ್ಲಿ ವಿಜೇತ ನಗರಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ವರ್ಷದ ಸಮೀಕ್ಷೆಯಲ್ಲಿ ದೇಶದ 4,700ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳು ಭಾಗವಹಿಸಿದ್ದವು ಎಂದು ವರದಿಗಳು ಉಲ್ಲೇಖಿಸಿವೆ.

ಅಷ್ಟಕ್ಕೂ ಇಂದೋರ್‌ಗೆ ಯಾವ ಸ್ಥಾನ?

ಕಳೆದ ಎಂಟು ವರ್ಷಗಳಿಂದ ಸತತವಾಗಿ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಇಂದೋರ್ ಈ ಬಾರಿ ವಿಭಿನ್ನ ವಿಭಾಗದಲ್ಲಿ ಸ್ಪರ್ಧಿಸಿದೆ. ಕೇಂದ್ರ ಸರ್ಕಾರ ಹೊಸದಾಗಿ ಪರಿಚಯಿಸಿರುವ 'ಸ್ವಚ್ಛ ಶಹರ್ ಜೋಡಿ' ಯೋಜನೆಯಡಿ ಇಂದೋರ್‌ಗೆ ತನ್ನ ಪಾಲುದಾರ ನಗರವಾದ ದೇಪಾಲ್‌ಪುರದೊಂದಿಗೆ 'ಮೆಂಟರ್ ಸಿಟಿ' ವಿಭಾಗದಲ್ಲಿ ಎರಡನೇ ಸ್ಥಾನ ಲಭಿಸಿದೆ. ಈ ವಿಭಾಗದಲ್ಲಿ ಅಹಮದಾಬಾದ್ ತನ್ನ ಪಾಲುದಾರ ನಗರವಾದ ಸನಂದ್‌ನೊಂದಿಗೆ ಮೊದಲ ಸ್ಥಾನ ಪಡೆದಿದೆ. ತಿರುಪತಿ ಮತ್ತು ಅದರ ಪಾಲುದಾರ ನಗರ ಕುಪ್ಪಂ ಮೂರನೇ ಸ್ಥಾನ ಗಳಿಸಿವೆ.

ನದಿ, ಕರಾವಳಿ ನಗರಗಳಲ್ಲೂ ಸ್ವಚ್ಛತಾ ಸ್ಪರ್ಧೆ

ಸ್ವಚ್ಛ ಸರ್ವೇಕ್ಷಣ್‌ನಲ್ಲಿ ವಿವಿಧ ವಿಶೇಷ ವಿಭಾಗಗಳಲ್ಲಿಯೂ ನಗರಗಳನ್ನು ಗುರುತಿಸಲಾಗಿದೆ. ಮಧ್ಯಪ್ರದೇಶದ ರೇವಾ ಅತ್ಯಂತ ಸ್ವಚ್ಛ ನದಿ ತೀರದ ನಗರವಾಗಿ ಮೊದಲ ಸ್ಥಾನ ಪಡೆದಿದೆ. ಛತ್ತೀಸ್‌ಗಢದ ಬಿಲಾಸಪುರ ಎರಡನೇ ಹಾಗೂ ಉತ್ತರ ಪ್ರದೇಶದ ವಾರಾಣಸಿ ಮೂರನೇ ಸ್ಥಾನದಲ್ಲಿವೆ. ಇನ್ನು, ಕರಾವಳಿ ನಗರಗಳ ವಿಭಾಗದಲ್ಲಿ ಒಡಿಶಾದ ಪುರಿ ಮೊದಲ ಸ್ಥಾನ ಪಡೆದರೆ, ಕೇರಳದ ಆಲಪ್ಪುಳ ಎರಡನೇ ಮತ್ತು ಮಹಾರಾಷ್ಟ್ರದ ರತ್ನಗಿರಿ ಮೂರನೇ ಸ್ಥಾನ ಪಡೆದಿವೆ.

ಹಿಮಾಲಯ ಪ್ರದೇಶಗಳಿಗೂ ಪ್ರಶಸ್ತಿ

ಹಿಮಾಲಯ ಪ್ರದೇಶದ ನಗರಗಳ ವಿಭಾಗದಲ್ಲಿ ಉತ್ತರಾಖಂಡದ ರುದ್ರಪುರ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ. ಜಮ್ಮು ಎರಡನೇ ಹಾಗೂ ಶೋಪಿಯಾನ್ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಜನಸಂಖ್ಯೆ ಆಧಾರಿತ ವಿಭಾಗಗಳಲ್ಲೂ ಪ್ರಶಸ್ತಿ

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಗ್ರೇಟರ್ ವಿಶಾಖಪಟ್ಟಣಂ ಮೊದಲ ಸ್ಥಾನ ಪಡೆದಿದೆ. 3 ಲಕ್ಷದಿಂದ 10 ಲಕ್ಷದವರೆಗಿನ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಉಜ್ಜಯಿನಿ ಅಗ್ರಸ್ಥಾನದಲ್ಲಿದೆ. ಇನ್ನು, 50 ಸಾವಿರದಿಂದ 3 ಲಕ್ಷ ಜನಸಂಖ್ಯೆಯ ವಿಭಾಗದಲ್ಲಿ ಮಧ್ಯಪ್ರದೇಶದ ದೇವಾಸ್ ಮೊದಲ ಸ್ಥಾನ ಪಡೆದಿದೆ. ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಎರಡನೇ ಹಾಗೂ ಸಾಗರ್ ಮೂರನೇ ಸ್ಥಾನ ಗಳಿಸಿವೆ.

20 ಸಾವಿರದಿಂದ 50 ಸಾವಿರ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ವೀಟಾ ಮೊದಲ ಸ್ಥಾನ ಪಡೆದಿದೆ. ಒಡಿಶಾದ ಆಸ್ಕಾ ಎರಡನೇ ಹಾಗೂ ಗೋವಾದ ಪಣಜಿ ಮೂರನೇ ಸ್ಥಾನದಲ್ಲಿವೆ.

3000ಕ್ಕೂ ಹೆಚ್ಚು ಮೌಲ್ಯಮಾಪಕರಿಂದ ಸಮೀಕ್ಷೆ

ಈ ಬಾರಿಯ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯು 'ಸ್ವಚ್ಛತೆಯ ಹೊಸ ಪ್ರಯತ್ನ – ಕೈಜೋಡಿಸಿ, ಒಟ್ಟಾಗಿ ಸ್ವಚ್ಛತೆ ಮಾಡೋಣ' ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಿತು. ದೇಶಾದ್ಯಂತ 3 ಸಾವಿರಕ್ಕೂ ಹೆಚ್ಚು ತರಬೇತಿ ಪಡೆದ ಮೌಲ್ಯಮಾಪಕರು ನಗರಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಜಿಪಿಎಸ್ ಆಧಾರಿತ ನೈಜ ಸಮಯದ ಮೇಲ್ವಿಚಾರಣೆಯನ್ನೂ ಬಳಸಿಕೊಳ್ಳಲಾಯಿತು.

ದಾಖಲೆಗಳ ಸಲ್ಲಿಕೆಯಿಂದ ಹಿಡಿದು ಪರಿಶೀಲನೆಯವರೆಗಿನ ಪ್ರಕ್ರಿಯೆಯನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ನಡೆಸಲಾಗಿದ್ದು, ಪಾರದರ್ಶಕತೆ ಮತ್ತು ಗುಣಮಟ್ಟದ ಪರಿಶೀಲನೆಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ,(ಏಜೆನ್ಸೀಸ್).