Suvendu Adhikari | ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ
ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ, ಈ ಬಾರಿ ರಾಜ್ಯದ ಜನತೆ ಅವರಿಗೆ ಮತದಾನದ ಮೂಲಕ ಸೂಕ್ತ ಉತ್ತರ ನೀಡಲಿದ್ದು, ಭಾರತೀಯ ಜನತಾ ಪಕ್ಷ ನಿಶ್ಚಿತವಾಗಿ ಅಧಿಕಾರಕ್ಕೆ ಬರಲಿದೆ ಎಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ಕೇವಲ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಟಿಎಂಸಿ ಸರ್ಕಾರವು ಒಳನುಸುಳುವಿಕೆಯನ್ನು ಬೆಂಬಲಿಸುತ್ತಿದ್ದು, ಇದೇ ಕಾರಣಕ್ಕೆ ಬಾಂಗ್ಲಾದೇಶದ ಗಡಿಯಲ್ಲಿ ಬೇಲಿ ಹಾಕಲು ಗಡಿ ಭದ್ರತಾ ಪಡೆಗೆ (ಬಿಎಸ್‌ಎಫ್) ಭೂಮಿಯನ್ನು ಒದಗಿಸಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ ಎಂದರು.
ರಾಜ್ಯದಲ್ಲಿ ಜನಸಂಖ್ಯಾ ಬದಲಾವಣೆ ವೇಗವಾಗಿ ನಡೆಯುತ್ತಿದ್ದು, ಪ್ರಸ್ತುತ ಒಂಬತ್ತು ಜಿಲ್ಲೆಗಳು ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಾಗಿ ಮಾರ್ಪಟ್ಟಿವೆ. ಈ ಚುನಾವಣೆ ಕೇವಲ ಭವಾನಿಪುರ ಕ್ಷೇತ್ರಕ್ಕೆ ಸೀಮಿತವಲ್ಲ, ಇದು ಇಡೀ ಪಶ್ಚಿಮ ಬಂಗಾಳದ ಭವಿಷ್ಯ ಮತ್ತು ಭಾರತದ ಭದ್ರತೆಗೆ ಸಂಬಂಧಿಸಿದ್ದಾಗಿದೆ. ಅಭಿಷೇಕ್ ತಮ್ಮ ಇಡೀ ರಾಜಕೀಯ ಜೀವನದಲ್ಲಿ ಯಾವುದೇ ನೈಜ ಹೋರಾಟವನ್ನು ಕಂಡಿಲ್ಲ. ಮಮತಾ ಬ್ಯಾನರ್ಜಿ ಸೋದರಳಿಯ ಎಂಬುದೊಂದೇ ಅವರ ಏಕೈಕ ಸಾಧನೆ ಮತ್ತು ಐಡೆಂಟಿಟಿ ಎಂದು ಲೇವಡಿ ಮಾಡಿದರು.
ಬಿಜೆಪಿ ಸಿಎಂ ಅಭ್ಯರ್ಥಿಯ ಬಗ್ಗೆ ಹೇಳಿದ್ದೇನು..?
ನಾನು ವಿರೋಧ ಪಕ್ಷದ ನಾಯಕನಾಗಿ ಬಿಜೆಪಿಯ ಸಂಪೂರ್ಣ ಬೆಂಬಲವನ್ನು ಹೊಂದಿದ್ದು, ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ. ಮಮತಾ ಬ್ಯಾನರ್ಜಿ ಉದ್ಯೋಗ ಮತ್ತು ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದು, ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರೂ ಕೂಡ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸುತ್ತಾ, ಮೊದಲ ಹಂತದ ಮತದಾನದಲ್ಲಿ ಬಿಜೆಪಿ ಸುಮಾರು 110 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದರು.
ಮಮತಾ ಬ್ಯಾನರ್ಜಿ ನಿರಂತರವಾಗಿ ಹಿಂದೂಗಳನ್ನು ನಿಂದಿಸುತ್ತಲೇ ಬಂದಿದ್ದು, ಮಹಾ ಕುಂಭಮೇಳ ಮತ್ತು ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯನ್ನು ಟೀಕಿಸಿದ ಏಕೈಕ ನಾಯಕಿ ಇವರೇ, ಬೇರೆ ಯಾವುದೇ ರಾಜ್ಯದ ವಿರೋಧ ಪಕ್ಷದ ಮುಖ್ಯಮಂತ್ರಿಗಳು ಮಾಡದಂತಹ ಟೀಕೆಯನ್ನು ದೀದಿ ಮಾಡಿದ್ದು, ಈ ಬಾರಿ ಜನರಿಂದಲೇ ನಾಶವಾಗಲಿದ್ದಾರೆ ಎಂದು ಸುವೇಂದು ಅಧಿಕಾರಿ ಕುಟುಕಿದರು(ಏಜೆನ್ಸೀಸ್).