West Bengal Elections | ವಿಪಕ್ಷ ನಾಯಕ ಸುವೇಂದು ಅಧಿಕಾರಿ
West Bengal Elections: ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಪರಿವರ್ತನೆ (ಬದಲಾವಣೆ) ಖಚಿತ ಎಂದಿರುವ ವಿಪಕ್ಷ ನಾಯಕ ಸುವೇಂದು ಅಧಿಕಾರಿ, ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ರಾಜ್ಯದಲ್ಲಿ ಸನಾತನ ವ್ಯವಸ್ಥೆಯೇ ನಾಶವಾಗಲಿದೆ ಎಂದು ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದಸುವೇಂದು ಅಧಿಕಾರಿ, ಮತದಾರರ ಪಟ್ಟಿ ಪರಿಷ್ಕರಣೆ ವೇಳೆ (ಎಸ್ಐಆರ್) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ರಾಜ್ಯದ ಮತದಾರರ ಪಟ್ಟಿಯಲ್ಲಿ ಸತ್ತ ಅಥವಾ ನಕಲಿ ಮತದಾರರು ಇಲ್ಲದಿದ್ದರೆ ಮಮತಾ ಬ್ಯಾನರ್ಜಿ ಎಂದಿಗೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ ಎಂದರು.
ಚುನಾವಣಾ ಆಯೋಗದ ಕೆಲಸವನ್ನು ಶ್ಲಾಘಿಸಿದ ಸುವೇಂದು ಅಧಿಕಾರಿ, ರಾಜ್ಯದ ಹಲವೆಡೆ ಇನ್ನೂ ಗೂಂಡಾಗಿರಿ ನಡೆಯುತ್ತಿದೆ, ಅನೇಕ ಕಡೆಗಳಲ್ಲಿ ಗೂಂಡಾಗಳಿದ್ದು, ನಮ್ಮ ಮತಗಟ್ಟೆ ಏಜೆಂಟ್‌ರನ್ನು ಬಂಧಿಸಲಾಗಿದೆ. ಈ ಬಗ್ಗೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುವೇಂದು ಅಧಿಕಾರಿ Vs ಮಮತಾ ಬ್ಯಾನರ್ಜಿ
2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದ ಸುವೇಂದು, ಈ ಬಾರಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ತಮ್ಮ ಹಳೆಯ ಕ್ಷೇತ್ರವಾದ ನಂದಿಗ್ರಾಮದ ಜೊತೆಗೆ, ಮಮತಾ ಬ್ಯಾನರ್ಜಿ ಭದ್ರಕೋಟೆ ಎನಿಸಿದ ಭಬಾನಿಪುರದಲ್ಲೂ ನೇರ ಹಣಾಹಣಿಗೆ ಇಳಿದಿದ್ದಾರೆ. ನಂದಿಗ್ರಾಮದಲ್ಲಿ ಇಂದು (ಮೊದಲ ಹಂತ) ಮತದಾನ ನಡೆಯುತ್ತಿದ್ದರೆ, ಭಬಾನಿಪುರದಲ್ಲಿ ಏಪ್ರಿಲ್ 29 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಫಲಿತಾಂಶವು ಮೇ 4 ರಂದು ಪ್ರಕಟವಾಗಲಿದೆ.
ಮೊದಲ ಹಂತದ ಮತದಾನದ ವಿವರ
ಪಶ್ಚಿಮ ಬಂಗಾಳದ ಮೊದಲ ಹಂತದ ಚುನಾವಣೆಯಲ್ಲಿ ಡಾರ್ಜಿಲಿಂಗ್, ಜಲ್ಪೈಗುರಿ, ಮುರ್ಷಿದಾಬಾದ್, ನಾಡಿಯಾ, ಬಿರ್ಭಮ್ ಮತ್ತು ಹೂಗ್ಲಿ ಸೇರಿದಂತೆ ಪ್ರಮುಖ ಜಿಲ್ಲೆಗಳ 152 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮಾಲ್ಡಾ, ಮುರ್ಷಿದಾಬಾದ್ ಮತ್ತು ಕೂಚ್ ಬೆಹಾರ್ ಸೇರಿದಂತೆ ಕೆಲವು ಸೂಕ್ಷ್ಮ ಜಿಲ್ಲೆಗಳನ್ನು ಚುನಾವಣಾ ಆಯೋಗವು ವಿಶೇಷ ಕಣ್ಗಾವಲಿನಲ್ಲಿ ಇರಿಸಿದೆ. ಶಾಂತಿಯುತ ಮತದಾನಕ್ಕಾಗಿ 2,193 ಕ್ಕೂ ಹೆಚ್ಚು ತ್ವರಿತ ಪ್ರತಿಕ್ರಿಯೆ ತಂಡಗಳನ್ನು (QRT) ನಿಯೋಜಿಸಲಾಗಿದೆ. 2021 ರಲ್ಲಿ ಈ 152 ಸ್ಥಾನಗಳ ಪೈಕಿ 59 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಹಂತವು ಅತ್ಯಂತ ನಿರ್ಣಾಯಕವಾಗಿದೆ(ಏಜೆನ್ಸೀಸ್).