ದೇಶ

ಗ್ರೀನ್​ಕಾರ್ಡ್ ಯೋಜನೆಯಿಂದ ಭಾರತೀಯ ಐಟಿ ಕಂಪನಿಗಳ ಅಮಾನತು: ಜೆಡಿ ವ್ಯಾನ್ಸ್ ಹೇಳಿಕೆ ಖಂಡಿಸಿದ ಭಾರತ | India

ಅಮೆರಿಕಾದಲ್ಲಿ ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ ನೀಡುವ ಗ್ರೀನ್ ಕಾರ್ಡ್ ಯೋಜನೆಯಿಂದ ಕೆಲವು ಭಾರತೀಯ ಐಟಿ ಕಂಪನಿಗಳನ್ನು ಅಮಾನತು ಮಾಡಿದ್ದಲ್ಲದೇ, ವಿದೇಶಿ ಉದ್ಯೋಗಿಗಳನ್ನು ಒಪ್ಪಂದದ ಆಧಾರದ ಮೇಲೆ ದುಡಿಯುವ ಗುಲಾಮರು ಎಂದು ಕರೆದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿಕೆಯನ್ನು ಭಾರತ ಖಂಡಿಸಿದ್ದು, ಅದು ಅನಗತ್ಯ ಹೇಳಿಕೆ ಎಂದಿದೆ.

ನವದೆಹಲಿ: ಅಮೆರಿಕಾದಲ್ಲಿ ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ ನೀಡುವ ಗ್ರೀನ್ ಕಾರ್ಡ್ ಯೋಜನೆಯಿಂದ ಕೆಲವು ಭಾರತೀಯ ಐಟಿ ಕಂಪನಿಗಳನ್ನು ಅಮಾನತು ಮಾಡಿದ್ದಲ್ಲದೇ, ವಿದೇಶಿ ಉದ್ಯೋಗಿಗಳನ್ನು ಒಪ್ಪಂದದ ಆಧಾರದ ಮೇಲೆ ದುಡಿಯುವ ಗುಲಾಮರು ಎಂದು ಕರೆದ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿಕೆಯನ್ನು ಭಾರತ ಖಂಡಿಸಿದ್ದು, ಅದು ಅನಗತ್ಯ ಹೇಳಿಕೆ ಎಂದಿದೆ.

ಸರ್ಕಾರದ ಮೂಲ ನಿಯಮಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ (ಗ್ರೀನ್ ಕಾರ್ಡ್) ನೀಡುವ ಪ್ರಮುಖ ಹಂತವಾದ PERM (Permanent Labour Certification) ಯೋಜನೆಯಿಂದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ವಿಪ್ರೋ ಮತ್ತು ಎಚ್​ಸಿಎಲ್​ (HCL) ಸೇರಿದಂತೆ ಹಲವಾರು ಪ್ರಮುಖ ಭಾರತೀಯ ಐಟಿ ಕಂಪನಿಗಳನ್ನು ಅಮೆರಿಕದ ಕಾರ್ಮಿಕ ಇಲಾಖೆಯು ಅಮಾನತುಗೊಳಿಸಿದೆ.

ಅಮೆರಿಕದ ಕಾರ್ಮಿಕ ಇಲಾಖೆಯ ಈ ನಿರ್ಧಾರ ಭಾರತೀಯ ಟೆಕ್ಕಿಗಳಿಗೆ ಶಾಕ್ ನೀಡಿದ್ದು, ಪರಿಣಾಮ ಬೀರುವ ಸಾಧ್ಯತೆಯಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ಸಚಿವಾಲಯ, ಹೆಚ್​-1ಬಿ ವೀಸಾ ಮಾನ್ಯತೆಗೆ ಧಕ್ಕೆಯಿಲ್ಲ ಎಂದು ಸ್ಪಷ್ಟಪಡಿಸಿದೆ.

PERM ಪ್ರಕ್ರಿಯೆಯು ಹೆಚ್​-1ಬಿ ವೀಸಾ ಕಾರ್ಯಕ್ರಮಕ್ಕಿಂತ ಭಿನ್ನವಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿನ ಅರ್ಜಿಗಳ ಸಲ್ಲಿಕೆಯನ್ನು ಸ್ಥಗಿತಗೊಳಿಸುವುದರಿಂದ ಅಸ್ತಿತ್ವದಲ್ಲಿರುವ ಹೆಚ್​-1ಬಿ ವೀಸಾಗಳ ಸಿಂಧುತ್ವದ ಮೇಲೆ ಅಥವಾ ಹೆಚ್​-1ಬಿ ವೀಸಾ ಹೊಂದಿರುವವರು ಹಾಗೂ ಅವರ ಅವಲಂಬಿತರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಈ ಕ್ರಮವು ಬಾಧಿತ ಕಂಪನಿಗಳ ಅರ್ಹ ಉದ್ಯೋಗಿಗಳ ಶಾಶ್ವತ ನಿವಾಸಿ ಸ್ಥಾನಮಾನ (ಗ್ರೀನ್ ಕಾರ್ಡ್) ಪಡೆಯುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.

ಮುಂದುವರೆದು, ಜೆ.ಡಿ.ವ್ಯಾನ್ಸ್ ಹೇಳಿಕೆಯನ್ನು ಅನಗತ್ಯವಾದದ್ದು ಖಂಡಿಸಿದ್ದು, ಪ್ರತಿಭಾವಂತರ ವಲಸೆ ಮತ್ತು ಚಲನಶೀಲತೆಯೂ ಎರಡೂ ದೇಶಗಳ ಆರ್ಥಿಕತೆಗೆ ಮೌಲ್ಯವನ್ನು ತರುತ್ತದೆ. ಇದು ಭಾರತೀಯರಿಗೆ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ, ಅಮೆರಿಕದ ಕಂಪನಿಗಳಿಗೆ ಅತ್ಯಾಧುನಿಕ ಪ್ರತಿಭೆ, ನಾವೀನ್ಯತೆ, ಸಂಶೋಧನೆ, ಉತ್ಪಾದಕತೆ, ಸ್ಪರ್ಧಾತ್ಮಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನೆರವಾಗುತ್ತದೆ. ಹಾಗೂ ಅಲ್ಲಿನ ಷೇರುದಾರರ ಸಂಪತ್ತನ್ನೂ ಹೆಚ್ಚಿಸುತ್ತದೆ ಎಂದು ಹೇಳಿದೆ.

ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರು ಉನ್ನತ ಶಿಕ್ಷಣ ಮತ್ತು ಕೌಶಲ್ಯವನ್ನು ಹೊಂದಿದ್ದು, ಆ ದೇಶದ ಆರ್ಥಿಕತೆ ಹಾಗೂ ನಾವೀನ್ಯತಾ ವ್ಯವಸ್ಥೆಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ವಾಸ್ತವವಾಗಿ, ಅಮೆರಿಕದ ಇತಿಹಾಸವೇ ವಲಸಿಗರ ಶ್ರಮ, ಉದ್ಯಮಶೀಲತೆ ಮತ್ತು ನಾವೀನ್ಯತೆಯಿಂದ ರೂಪುಗೊಂಡಿದೆ. ಇವೇ ಆ ದೇಶದ ಬೆಳವಣಿಗೆಗೆ ಮತ್ತು ಸಮೃದ್ಧಿಗೆ ಕಾರಣವಾಗಿವೆ. ನೋವಿನ ಇತಿಹಾಸ ಮತ್ತು ವಸಾಹತುಶಾಹಿ ಪರಂಪರೆಯ ಛಾಯೆಯ ಪದ ಬಳಕೆ ಆಕ್ಷೇಪಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದೆ (ಏಜೆನ್ಸೀಸ್).