ಭಾರತದ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ: ಎಲಾನ್ ಮಸ್ಕ್ ಹೇಳಿಕೆಗೆ ಜ್ಯೋತಿರಾದಿತ್ಯ ಸಿಂಧಿಯಾ ಕೌಂಟರ್ | Jyotiraditya Scindia

ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್​ನೆಟ್​ ಪ್ರವೇಶಕ್ಕೆ ಪರವಾನಗಿ ನೀಡುವ ಕುರಿತಂತೆ ಕೇಂದ್ರ ಸರ್ಕಾರದ ವಿಳಂಬ ನೀತಿಯನ್ನು ಟೀಕಿಸಿದ್ದ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ಗೆ ನೇರ ಸಂದೇಶ ನೀಡಿರುವ ಕೇಂದ್ರ ಟೆಲಿಕಾಮ್ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಭಾರತದ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 ಕೇಂದ್ರ ಟೆಲಿಕಾಮ್ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಎಲಾನ್ ಮಸ್ಕ್​
ಕೇಂದ್ರ ಟೆಲಿಕಾಮ್ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಎಲಾನ್ ಮಸ್ಕ್​
Published on: 

ನವದೆಹಲಿ: ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್​ನೆಟ್​ ಪ್ರವೇಶಕ್ಕೆ ಪರವಾನಗಿ ನೀಡುವ ಕುರಿತಂತೆ ಕೇಂದ್ರ ಸರ್ಕಾರದ ವಿಳಂಬ ನೀತಿಯನ್ನು ಟೀಕಿಸಿದ್ದ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ಗೆ ನೇರ ಸಂದೇಶ ನೀಡಿರುವ ಕೇಂದ್ರ ಟೆಲಿಕಾಮ್ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಭಾರತದ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಶುಕ್ರವಾರ(ಅ. 09) ಮಾತನಾಡಿರುವ ಅವರು, ಭಾರತದಲ್ಲಿ ಮೂರು ಕಂಪನಿಗಳು ಸ್ಯಾಟ್‌ಕಾಮ್ ಪರವಾನಗಿಗಳನ್ನು ಪಡೆದುಕೊಂಡಿದ್ದು, ವೈಯಕ್ತಿಕ ಭದ್ರತಾ ಮಾನದಂಡಗಳನ್ನು ಪೂರೈಸಿ ಹಾಗೂ ಸರ್ಕಾರವು ಸ್ಪೆಕ್ಟ್ರಮ್ ಶುಲ್ಕದ ವಿಧಾನವನ್ನು ಅಂತಿಮಗೊಳಿಸಿದ ಬಳಿಕ ಅವು ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದಾರೆ.

ಒಂದು ನಿರ್ದಿಷ್ಟ ಕಂಪನಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆದರೆ ಮೂರು ಕಂಪನಿಗಳು ಸ್ಯಾಟ್‌ಕಾಮ್ ಪರವಾನಗಿಗಳನ್ನು ಪಡೆದುಕೊಂಡಿವೆ. ಭಾರತದ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯಕ್ಕೆ ಅವಕಾಶ ನೀಡುವುದಿಲ್ಲ. ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಗ್ರಾಹಕರು ವಿವಿಧ ಸೇವೆಗಳ ನಡುವೆ ಆಯ್ಕೆ ಮಾಡಿಕೊಳ್ಳಲು ಸರ್ಕಾರವು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ಸ್ಪೆಕ್ಟ್ರಮ್‌ಗೆ ಸಂಬಂಧಿಸಿದ ದರ ನಿಗದಿ ವ್ಯವಸ್ಥೆಯ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮತ್ತು ದೂರಸಂಪರ್ಕ ಇಲಾಖೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಹಂತದಲ್ಲಿವೆ. ಈ ಕುರಿತು ನಿರ್ಧಾರ ಕೈಗೊಂಡ ಬಳಿಕ ಮೂರು ಕಂಪನಿಗಳಿಗೆ ಸ್ಪೆಕ್ಟ್ರಮ್‌ ಅನ್ನು ಹಂಚಿಕೆ ಮಾಡಲಾಗುತ್ತದೆ. ಆದಾಗ್ಯೂ, ಕೇವಲ ಪರವಾನಗಿ ಪಡೆಯುವುದು ಕಾರ್ಯಾಚರಣೆ ಪ್ರಾರಂಭಿಸಲು ಸಾಕಾಗುವುದಿಲ್ಲ. ಪ್ರತಿಯೊಂದು ಕಂಪನಿಯೂ ಅನ್ವಯವಾಗುವ ಭದ್ರತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್​ ನಿಲುವಿನ ಕುರಿತು ಟೀಕೆ

ಇದೇ ವೇಳೆ ಉಪಗ್ರಹ ಆಧಾರಿತ ಇಂಟರ್ನೆಟ್​ ಸೇವೆಗೆ ಸಂಬಂಧಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಲುವನ್ನು ಟೀಕಿಸಿದ ಸಿಂಧಿಯಾ, ಅವರು ಎಡಕ್ಕೆ ಹೋಗುತ್ತಿದ್ದಾರೋ ಇಲ್ಲಾ, ಬಲಕ್ಕೆ ಹೋಗುತ್ತಿದ್ದಾರೋ ಎಂಬುದೇ ಅವರಿಗೆ ತಿಳಿದಿಲ್ಲ. ನಿರ್ದಿಷ್ಟ ವ್ಯಕ್ತಿಯೊಬ್ಬರಿಗೆ ಪರವಾನಗಿ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಪಕ್ಷ, ಈಗ ಸ್ಪೆಕ್ಟ್ರಮ್ ಮಂಜೂರಾತಿಯಲ್ಲಿನ ವಿಳಂಬವನ್ನು ಪ್ರಶ್ನಿಸುವ ವಿಷಯದಲ್ಲಿ ಅದೇ ವ್ಯಕ್ತಿಯೊಂದಿಗೆ ಕೈಜೋಡಿಸಿದೆ ಎಂದು ಕಿಡಿಕಾರಿದ್ದಾರೆ.

ಎಲಾನ್ ಮಸ್ಕ್ ಹೇಳಿದ್ದೇನು?

ಗುರುವಾರ ತಮ್ಮ ಎಕ್ಸ್ ಖಾತೆಯಲ್ಲಿ​ ಪೋಸ್ಟ್ ಮಾಡಿದ್ದ ಎಲಾನ್ ಮಸ್ಕ್,​​ ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಲೈಸನ್ಸ್​ ಪಡೆದಿರುವ ಸ್ಟಾರ್‌ಲಿಂಕ್​, ಪ್ರತಿಯೊಂದು ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯಾಕಿನ್ನೂ ಆಗಿಲ್ಲ? ಲೈಸೆನ್ಸ್ ಕಥೆಯೇನು ಎಂದು ಪ್ರಶ್ನಿಸಿದ್ದರು.

ಮುಂದುವರೆದು, ಸಂಸ್ಥೆಗಳೊಂದಿಗೆ ವರ್ಷಗಳ ಕಾಲ ಮಾತುಕತೆ ನಡೆಸಿ, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿದ ಹೊರತಾಗಿಯೂ, ಭಾರತದಲ್ಲಿ ಇನ್ನೂ ನಮ್ಮ ಸ್ಟಾರ್​ಲಿಂಕ್​ ತನ್ನ ವಾಣಿಜ್ಯ ಸೇವೆಗಳನ್ನು ಆರಂಭಿಸಲು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಏಕೆ ಲೈಸನ್ಸ್​ಗೆ ಇಷ್ಟೊಂದು ವಿಳಂಬ? ಇಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಯಾರು, ಮುಖೇಶ್ ಅಂಬಾನಿ ಅವರೇ? ಅಂಬಾನಿ ಏನು ಭಾರತದ ರಿಯಲ್​ ಒಡೆಯನಾ? ಎಂದು ನೇರವಾಗಿ ಆರೋಪ ಮಾಡಿದ್ದರು.

ರಾಹುಲ್ ಗಾಂಧಿ ಪ್ರತಿಕ್ರಿಯೆ

ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತಕ್ಕೆ ಸ್ವಾಗತ ಎಲಾನ್​. ಇನ್ನೂ ಒಬ್ಬರು ಸಿಗುವವರೆಗೂ ನೀವು ಕಾಯಬೇಕು ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ರಿಟ್ವೀಟ್ ಮಾಡಿದ್ದ ಮಸ್ಕ್, ಥ್ಯಾಂಕ್ಯೂ ರಾಹುಲ್, ಆದ್ರೆ ಇದು ನಿಜಕ್ಕೂ ಆಂತಕಕಾರಿ ಎಂದು ಹೇಳಿದ್ದರು.

ರಾಹುಲ್ ಗಾಂಧಿ ತಮ್ಮ ಪೋಸ್ಟ್​​ನಲ್ಲಿ ಇನ್ನೊಬ್ಬರು ಸಿಗುವವರೆಗೂ ಕಾಯಬೇಕು ಎಂದು ಹೇಳಿರುವುದು, ಅಸಲಿಗೆ ರಾಹುಲ್ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಬದಲಿಗೆ, ಪರೋಕ್ಷವಾಗಿ ಮತ್ತೊಬ್ಬ ಉದ್ಯಮಿಯಾದ ಗೌತಮ್ ಅದಾನಿಯನ್ನು ಗುರಿಯಾಗಿಸಿದ್ದಾರೆ ಎಂದು ಚರ್ಚಿಸಲಾಗುತ್ತಿದೆ. ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಅದಾನಿಗೆ ನಿಕಟ ಸಂಬಂಧವಿದ್ದು, ಕಾಂಗ್ರೆಸ್ ಸಹ​ ಆಗಾಗ್ಗೆ ಈ ಬಗ್ಗೆ ಆರೋಪಿಸಿದೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net