ಅಹ್ಮದಾಬಾದ್: ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಶುಕ್ರವಾರ(ನ. 27) ಮುಂಜಾನೆ ವಡೋದರಾ ಜಿಲ್ಲೆಯ ಜರೋದ್ ಬಸ್ ನಿಲ್ದಾಣದ ಬಳಿ ಜೈಶ್-ಎ-ಮೊಹಮ್ಮದ್ ಎಂಬ ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಶಂಕಿತನೊಬ್ಬನನ್ನು ಬಂಧಿಸಿದೆ. ಮತ್ತು ಎಕೆ -47 ರೈಫಲ್ ಮತ್ತು ಸುಮಾರು 23 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದ್ದು, ಎಟಿಎಸ್ ಸಿಬ್ಬಂದಿ ಬಸ್ ನಿಲ್ದಾಣದ ಬಳಿ ಚಲಿಸುತ್ತಿದ್ದ ಕಾರೊಂದನ್ನು ತಡೆದು, ವಾಹನದೊಳಗೆ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಆರಂಭಿಕ ವರದಿಗಳ ಪ್ರಕಾರ, ಆರೋಪಿಯು ಅಸ್ಸಾಂ ಮೂಲದವನಾಗಿದ್ದು, ವಡೋದರಾಕ್ಕೆ ಪ್ರಯಾಣಿಸಿದ್ದ ಎಂದು ತಿಳಿದು ಬಂದಿದೆ. ಆತನನ್ನು ಬಂಧಿಸಲಾಗಿದ್ದು, ಅಹಮದಾಬಾದ್ನಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಶಂಕಿತನ ಗುರುತನ್ನು ಇಲ್ಲಿಯವರೆಗೆ ಸಾರ್ವಜನಿಕಗೊಳಿಸಲಾಗಿಲ್ಲ.
ಶಂಕಿತನಿಗೆ AK-47 ಹೇಗೆ ಸಿಕ್ಕಿತು, ಆಯುಧವನ್ನು ಯಾರಿಗಾಗಿ ಉದ್ದೇಶಿಸಲಾಗಿತ್ತು ಮತ್ತು ಅವನು ದೊಡ್ಡ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇನ್ನೂ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆಗಿನ ಸಂಭಾವ್ಯ ಸಂಪರ್ಕದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).