

ಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡಲು ಡಿಎಂಕೆ ಬಿಜೆಪಿ ಕೈಜೋಡಿಸಿದೆ ಎಂಬ ಆರೋಪ ಮತ್ತು ಊಹಾಪೋಹಗಳ ಚರ್ಚೆಗೆ ತೆರೆ ಎಳೆದಿರುವ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ತಮ್ಮ ನಿಲುವಿನಲ್ಲಿ ಯಾವುದೇ ರಾಜಿಯಿಲ್ಲ. ತಮ್ಮ ಪಕ್ಷವು ಎರಡು ಪ್ರಮುಖ ಬೇಡಿಕೆಗಳ ವಿಷಯದಲ್ಲಿ ದೃಢವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಲೋಕಸಭಾ ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು ಹೆಚ್ಚಿಸಿದರೂ, ತಮಿಳುನಾಡಿಗೆ ಪ್ರಸ್ತುತ ಲಭ್ಯವಿರುವ ಶೇಕಡಾ 7.18 ರಷ್ಟು ಸ್ಥಾನಗಳ ಪಾಲನ್ನು ಕಡಿಮೆ ಮಾಡಬಾರದು. 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವೆ ಇರುವ ಸಂಸದೀಯ ಪ್ರಾತಿನಿಧ್ಯದ ಪ್ರಸ್ತುತ ಪ್ರಮಾಣವನ್ನು ಮುಂದಿನ 25 ವರ್ಷಗಳವರೆಗೆ ಬದಲಾಗದಂತೆ (ಯಥಾಸ್ಥಿತಿಯಲ್ಲಿ) ಕಾಯ್ದುಕೊಳ್ಳಬೇಕೆಂದೂ ಆಗ್ರಹಿಸಿದ್ದಾರೆ.
ಡಿಎಂಕೆ ಈ ಎರಡು ಬೇಡಿಕೆಗಳಿಗೆ ಬದ್ಧವಾಗಿದೆ ಮತ್ತು ಮುಂದೆಯೂ ಬದ್ದವಾಗಿರುತ್ತದೆ. ಮಾಧ್ಯಮಗಳಲ್ಲಿ ಹರಡಲಾಗುತ್ತಿರುವ ಊಹಾಪೋಹಗಳು ಅಥವಾ ಬೆನ್ನಿಗೆ ಚೂರಿ ಹಾಕುವವರ ಗೊಣಗಾಟಗಳು ನಮ್ಮ ನಿಲುವನ್ನು ಕಿಂಚಿತ್ತೂ ಅಲುಗಾಡಿಸಲು ಸಾಧ್ಯವಿಲ್ಲ. ತಮಿಳುನಾಡಿನ ಹಿತಾಸಕ್ತಿಗಳ ವಿಷಯದಲ್ಲಿ ಡಿಎಂಕೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ನ. 30ರಿಂದ ಮೂರು ದಿನಗಳ ಕಾಲ ವಿಶೇಷ ಸಂಸತ್ ಅಧಿವೇಶನ ಕರೆದ ಬಳಿಕ ಮಹಿಳಾ ಮೀಸಲಾತಿ ಮಸೂದೆ ಮತ್ತು ಡಿಲಿಮಿಟೇಷನ್ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡನೆ ಬಗ್ಗೆ ಚರ್ಚೆಯಾಗುತ್ತಿದೆ. ಸಂಸತ್ನಲ್ಲಿ ಕೇಂದ್ರದ ಎನ್ಡಿಎಗೆ 2/3ರಷ್ಟು ಬಹುಮತ ಇರದಿದ್ದರೂ, ಅದು ಡಿಎಂಕೆ, ಎನ್ಸಿಪಿ(ಎಸ್ಪಿ) ಪಕ್ಷಗಳ ಬೆಂಬಲ ಕೋರಿದೆ ಎಂದು ಚರ್ಚೆ ನಡೆಯುತ್ತಿದೆ.
ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸಲು ಪೂರಕವಾಗಿ ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು 850ಕ್ಕೆ ಹೆಚ್ಚಿಸುವ ಉದ್ದೇಶವನ್ನು ಈ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಹೊಂದಿದೆ. ಪರಿಷ್ಕೃತ ಜನಗಣತಿ ದತ್ತಾಂಶವನ್ನು ಪ್ರತಿಬಿಂಬಿಸಲು ಮತ್ತು ಕೆಳಮನೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸುಗಮವಾಗಿ ಜಾರಿಗೊಳಿಸಲು ಕ್ಷೇತ್ರ ಪುನರ್ವಿಂಗಡಣೆ ಅತ್ಯಗತ್ಯ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ (ಏಜೆನ್ಸೀಸ್).