ಗಾಂಧೀಜಿ ಚಿತ್ರವಿರುವ 500 ರೂ. ನೋಟಿನೊಂದಿಗೆ ಅಶ್ಲೀಲ ರೀಲ್ಸ್​ ಹರಿಬಿಟ್ಟ ಮಹಿಳೆಗೆ ಬಿಸಿ ಮುಟ್ಟಿಸಿದ ಪೊಲೀಸರು! 
ದೇಶ

ಗಾಂಧೀಜಿ ಚಿತ್ರವಿರುವ 500 ರೂ. ನೋಟಿನೊಂದಿಗೆ ಅಶ್ಲೀಲ ರೀಲ್ಸ್​ ಹರಿಬಿಟ್ಟ ಮಹಿಳೆಗೆ ಬಿಸಿ ಮುಟ್ಟಿಸಿದ ಪೊಲೀಸರು! Objectionable Reel

ಬಂಧಿತಳನ್ನು ಸಿಮ್ರನ್ ಪಟೇಲ್ (47) ಎಂದು ಗುರುತಿಸಲಾಗಿದೆ. ಸೂರತ್‌ನ ಅದಾಜನ್ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಮ್ರನ್‌ಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರತ್: ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿರುವ 500 ರೂ. ಮುಖಬೆಲೆಯ ನೋಟಿನೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿರುವ ವಿಡಿಯೊವನ್ನು ( Objectionable Reel ) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಗುಜರಾತಿನ ಸೂರತ್​ನಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಸಿಮ್ರನ್ ಪಟೇಲ್ (47) ಎಂದು ಗುರುತಿಸಲಾಗಿದೆ. ಸೂರತ್‌ನ ಅದಾಜನ್ ಪ್ರದೇಶದಲ್ಲಿ ವಾಸಿಸುತ್ತಿರುವ ಸಿಮ್ರನ್‌ಗೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಧಿ ಜಯಂತಿಯ ಮುನ್ನಾ ದಿನವಾದ ಅಕ್ಟೋಬರ್ 1 ರಂದು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆಯೊಳಗೆ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎನ್ನಲಾಗಿದೆ.

ವಿಡಿಯೋದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರವಿರುವ 500 ರೂ. ಮುಖಬೆಲೆಯ ನೋಟನ್ನು ಆಕ್ಷೇಪಾರ್ಹ ರೀತಿಯಲ್ಲಿ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೋಟಿನೊಂದಿಗೆ ಸೂಕ್ತವಲ್ಲದ ದೃಶ್ಯಗಳು ಮತ್ತು ಸನ್ನೆಗಳು ಇರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಈ ಕುರಿತು ಸಾಮಾಜಿಕ ಕಾರ್ಯಕರ್ತ ಧರ್ಮೇಶ್ ಗಾಮಿ ಅವರು ಸೂರತ್ ಕ್ರೈಂ ಬ್ರಾಂಚ್‌ಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ 67ನೇ ವಿಧಿಯಡಿ ಪ್ರಕರಣ ದಾಖಲಿಸಲಾಗಿದೆ. ಈ ವಿಧಿಯು ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ಅಥವಾ ಆಕ್ಷೇಪಾರ್ಹ ವಿಷಯ ಪ್ರಕಟಿಸುವುದು ಅಥವಾ ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದೆ.

ಬಂಧನದ ಮಾಹಿತಿಯನ್ನು ಸೂರತ್ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮೊದಲು ಸಿಮ್ರನ್ ಪಟೇಲ್ ನೋಟಿನೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವ ದೃಶ್ಯ ಹಾಗೂ ನಂತರ ಅವರನ್ನು ಪೊಲೀಸರು ಬಂಧಿಸಿರುವ ದೃಶ್ಯವನ್ನು ತೋರಿಸಲಾಗಿದೆ. ಇದೇ ವಿಡಿಯೋದಲ್ಲಿ ಸಿಮ್ರನ್ ಅವರು ತಾವು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

ಸಿಮ್ರನ್ ಅವರು ಮದುವೆಯಾದ ಬಳಿಕ ಕಳೆದ 17 ವರ್ಷಗಳಿಂದ ಸೂರತ್‌ನಲ್ಲಿ ನೆಲೆಸಿದ್ದಾರೆ. ಅವರು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಿರು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅವರು 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಅಥವಾ ಜನರಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವ ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಗಾಂಧಿ ಜಯಂತಿಯ ಸಂದರ್ಭದಲ್ಲೇ ಮಹಾತ್ಮ ಗಾಂಧೀಜಿ ಅವರ ಚಿತ್ರವಿರುವ ನೋಟಿನ ಬಳಕೆಗೆ ಸಂಬಂಧಿಸಿದ ಈ ವಿಡಿಯೋ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಪ್ರಕರಣ ಕಾನೂನು ಕ್ರಮದ ಹಂತಕ್ಕೆ ತಲುಪಿದೆ, (ಏಜೆನ್ಸೀಸ್​).