

ಕಲಬುರಗಿ: ದುಬೈನಿಂದ ಟೆಲ್-ಅವೀವ್‌ಗೆ ಪ್ರಯಾಣ ಬೆಳೆಸಿದ್ದ ಫ್ಲೈದುಬೈ ವಿಮಾನದಲ್ಲಿ ತನ್ನ ಪ್ರಾಣವನ್ನು ಪಣಕ್ಕಿಟ್ಟು, ಸಂಭವಿಸಲಿದ್ದ ಭಯೋತ್ಪಾದಕ ದಾಳಿಯನ್ನು ತಡೆಯುವ ಮೂಲಕ ಭಾರತ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಈಗ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.
ಇಂದು ಕಲಬುರಗಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಧೈರ್ಯ ಶಾಲಿ, ಭಾರತ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಿತ್ ಸುಮಾರು 174 ಜನರ ಪ್ರಾಣ ಉಳಿಸಿದ್ದು, ಭಾರತದ ಹೆಸರು ವಿಶ್ವದೆಲ್ಲೆಡೆ ಬೆಳಗುವಂತೆ ಮಾಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರ ಪತಿ ದ್ರೌಪದಿ ಮುರ್ಮು ಅವರಲ್ಲಿ ಬಿಎಸ್ ವೈ ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಸಿಎಂ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿ ರೈತ ತೀವ್ರ ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ನೈಯಾ ಪೈಸೆ ಪರಿಹಾರ ಕೊಟ್ಟಿಲ್ಲ. ಘೋಷಣೆ ಮಾಡಲಾದ 2500 ರೂ ಸಹ ಕೊಟ್ಟಿಲ್ಲ. ಇದನ್ನು ನೋಡಿದರೆ ಸರ್ಕಾರ ದಿವಾಳಿಯಾಗಿರುವುದು ಖಚಿವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ತಾವು ಹಾಗೂ ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ರೈತರ ಸಂಕಷ್ಟ ಅರಿತು ರೈತರು ಕೇಳದಿದ್ದರೂ ರೈತರ ಸಾಲ ಮನ್ನಾ ಮಾಡಿದ್ದೇವೆ. ಈಗ ಸಾಲಮನ್ನಾ ಮಾಡುವಂತೆ ರೈತರು ಬೊಬ್ಬೆ ಹಾಕುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣೆತ್ತಿ ನೋಡುತ್ತಿಲ್ಲ, ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಟೀಕಿಸಿದ್ದಾರೆ.
ಇನ್ನು 2028 ರ ಚುನಾವಣೆ ಬಗ್ಗೆ ಮಾತನಾಡಿದ ಮಾಜಿ ಸಿಎಂ, ಮುಂದಿನ ಚುನಾವಣೆಯಲ್ಲಿ ಎನ್ಡಿಎ ಮ್ರೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನರು ಕಂಗೆಟ್ಟಿದ್ದು, ಮುಂದಿನ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಶಶೀಲ್ ನಮೋಶಿ ನಾಮಪತ್ರ ಸಲ್ಲಿಕೆಗೆ ಭಾಗಿಯಾಗಲು ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಜೆಡಿಎಸ್ ನಮ್ಮ ಮೈತ್ರಿ ಕೂಟ ಅಧಿಕಾರಕ್ಕೆ ಬರುತ್ತದೆ. ಅದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದ ಮುಂದಿನ ಸಿಎಂ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆ ಬಳಿಕ ಯಾರು ಸಿಎಂ ಆಗುತ್ತಾರೆ ನಿರ್ಧರಿಸಲಾಗುವುದು ಎಂದು ಈಗಾಗಲೇ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮೊದಲು ನಾವು ಒಗ್ಗೂಡಿ ಚುನಾವಣೆಯನ್ನು ಎದುರಿಸುತ್ತೆವೆ, ಆಮೇಲೆ ಮುಖ್ಯಮಂತ್ರಿಯನ್ನು ಆರಿಸುತ್ತೇವೆಂದು ತಿಳಿಸಿದ್ದಾರೆ.
ಸಪ್ಟೆಂಬರ್ 30 ರಂದು ವಿಮಾನ ಸಂಖ್ಯೆ FZ 1073 ಫ್ಲೈದುಬೈ ವಿಮಾನ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣ ಬೆಳೆಸಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ವಿಮಾನ ಇಸ್ರೇಲ್ ಅನ್ನು ಪ್ರವೇಶಿಸುತ್ತದೆ ಎನ್ನುವಾಗ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಇದ್ದಕ್ಕಿದ್ದಂತೆ ತನ್ನ ವಿಕೃತ ಬುದ್ಧಿ ತೋರಿಸಿದ್ದಾನೆ. ಕಾಕ್‌ಪಿಟ್ ಒಳಗೆ ತುರ್ತು ಸಂದರ್ಭದಲ್ಲಿ ಬಳಸುವ 'ಕ್ರಾಶ್ ಆಕ್ಸ್' (ಕೊಡಲಿ) ತೆಗೆದುಕೊಂಡು, ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಸಹ-ಪೈಲಟ್‌ನ ಈ ಹಠಾತ್ ದಾಳಿಯಿಂದ ಕ್ಯಾಪ್ಟನ್ ಮಚ್ಚಾರ್ ಒಂದು ಕ್ಷಣ ಬೆಚ್ಚಿಬಿದ್ದಿದ್ದು ಹಲ್ಲೆಯ ರಭಸಕ್ಕೆ ಕಾಕ್‌ಪಿಟ್‌ನಿಂದ ಹೊರಬಿದ್ದರೂ, ಸಾಹಸ ಮಾಡಿ ಮತ್ತೆ ಕಾಕ್‌ಪಿಟ್‌ಗೆ ನುಗ್ಗಿ ವಿಮಾನದ ನಿಯಂತ್ರಣ ತಪ್ಪದಂತೆ ತಡೆದು, ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಬೋಯಿಂಗ್ 737 ವಿಮಾನ ಕೇವಲ 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು 14,000 ಅಡಿಗಳಷ್ಟು ಆಕಾಶದಿಂದ ಕೆಳಗೆ ಕುಸಿತಕಂಡಿದೆ.
ನಂತರ ಪ್ರಯಾಣಿಕರ ಸಹಾಯದಿಂದ ಆ ದುಷ್ಟ ಸಹ-ಪೈಲಟ್‌ನನ್ನು ಕಟ್ಟಿಹಾಕಲಾಯಿತು. ಅದೃಷ್ಟವಶಾತ್ ಅದೇ ವಿಮಾನದಲ್ಲಿದ್ದ ಇತರೆ ಪೈಲಟ್‌ಗಳ ತಂಡವು ಮುಂದೆ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿತು. ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಮಯೋಚಿತ ಜಾಣ್ಮೆಯಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿತ್ತು, (ಏಜೆನ್ಸೀಸ್).